ಟಿವಿ ಕದ್ದು ಸಿಕ್ಕಿಬಿದ್ದ ಡಿಡಿಸಿಎ ಉದ್ಯೋಗಿಗೆ ಹೃದಯಾಘಾತ

ಹೊಸದಿಲ್ಲಿ, ಎ.28: ಟಿವಿ ಕಳವುಗೈದ ಆರೋಪ ಎದುರಿಸುತ್ತಿದ್ದ 45ರ ಪ್ರಾಯದ ದಿಲ್ಲಿ ಹಾಗೂ ಜಿಲ್ಲಾ ಕ್ರಿಕೆಟ್ ಸಂಸ್ಥೆ(ಡಿಡಿಸಿಎ) ಉದ್ಯೋಗಿಯೊಬ್ಬರು ಮನೆಯಲ್ಲಿ ನಿದ್ದೆಯಲ್ಲಿದ್ದಾಗಲೇ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ.
ಫಿರೋಜ್ ಶಾ ಕೋಟ್ಲಾ ಸ್ಟೇಡಿಯಂನ ಡ್ರೆಸ್ಸಿಂಗ್ ರೂಮ್‌ನಿಂದ ಟಿವಿ ಕದ್ದ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣ ದಾಖಲಾದ ಕೆಲವೇ ಗಂಟೆಗಳಲ್ಲಿ ಕಳ್ಳತನದ ಆರೋಪಿ ರತನ್ ಸಿಂಗ್ ಸಾವನ್ನಪ್ಪಿದ್ದಾರೆ. ಕಳೆದ 15 ವರ್ಷಗಳಿಂದ ಡಿಡಿಸಿಎಯಲ್ಲಿ ಕೆಲಸ ಮಾಡುತ್ತಿದ್ದ ಮೃತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.
ಡ್ರೆಸ್ಸಿಂಗ್ ರೂಮ್‌ನ ಭದ್ರತೆಯ ಉಸ್ತುವಾರಿಯನ್ನು ವಹಿಸಿಕೊಂಡಿದ್ದ ಸಿಂಗ್ ಆಟಗಾರರ ಕಿಟ್ಸ್‌ಗಳ ಬಗ್ಗೆ ನಿಗಾವಹಿಸಿದ್ದರು. ಸಿಂಗ್ ಮ್ಯಾಚ್ ರೆಫರಿ ಕೊಠಡಿಯಲ್ಲಿರುವ ಎಲ್‌ಇಡಿ ಟಿವಿಯನ್ನು ಕಳವು ಮಾಡಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಈ ವಿಷಯ ಸುಪ್ರೀಂಕೋರ್ಟ್‌ನಿಂದ ನೇಮಿಸಲ್ಪಟ್ಟಿರುವ ಡಿಡಿಸಿಎ ಆಡಳಿತಾಧಿಕಾರಿ ಜಸ್ಟಿಸ್(ನಿವೃತ್ತ)ವಿಕ್ರಮ್‌ಜಿತ್ ಸೇನ್ ಗಮನಕ್ಕೆ ಬಂದಿತ್ತು. ಸೇನ್ ಅವರು ಟಿವಿ ಕಳವು ಮಾಡಿರುವ ಡಿಡಿಸಿಎ ಉದ್ಯೋಗಿಯ ವಿರುದ್ಧ ಪೊಲೀಸ್ ದೂರು ಸಲ್ಲಿಸುವಂತೆ ಆದೇಶಿಸಿದ್ದರು.
ಸೆಂಟ್ರಲ್ ದಿಲ್ಲಿಯ ಇಪಿ ಎಸ್ಟೇಟ್ ಪೊಲೀಸ್ ಠಾಣೆಯಲ್ಲಿ ಗುರುವಾರ ದೂರು ದಾಖಲಾಗಿತ್ತು. ಪೊಲೀಸರಿಗೆ ಸಿಸಿಟಿವಿ ಫೂಟೇಜ್‌ನ್ನು ಸಲ್ಲಿಸಲಾಗಿತ್ತು. ಪೊಲೀಸರು ಗುರುವಾರವೇ ತನಿಖೆಯನ್ನು ಆರಂಭಿಸಿದ್ದು, ಸಿಂಗ್‌ಗೆ ಸಮನ್ಸ್ ನೀಡಲು ಯೋಜನೆ ಹಾಕಿಕೊಂಡಿದ್ದರು. ಆದರೆ, ಶುಕ್ರವಾರ ಬೆಳಗ್ಗೆ ಸಿಂಗ್ ಅವರು ತನ್ನ ಮನೆಯಲ್ಲಿ ನಿದ್ದೆಯಲ್ಲಿದ್ದಾಗಲೇ ಹೃದಯಾಘಾತದಿಂದ ನಿಧನರಾಗಿದ್ದಾರೆ.







