ಪ್ರತಿ ಐಪಿಎಲ್‌ನಲ್ಲೂ 300ಕ್ಕೂ ಅಧಿಕ ರನ್ ಗಳಿಸಿದ ಮೊದಲ ಆಟಗಾರ ರೈನಾ

ಹೊಸದಿಲ್ಲಿ, ಎ.28: ಗುಜರಾತ್ ಲಯನ್ಸ್ ತಂಡದ ನಾಯಕ ಸುರೇಶ್ ರೈನಾ ಐಪಿಎಲ್ ಟ್ವೆಂಟಿ-20 ಟೂರ್ನಿಯಲ್ಲಿ ಐತಿಹಾಸಿಕ ಸಾಧನೆ ಮಾಡಿದರು. ರೈನಾ ಈತನಕ ನಡೆದ ಎಲ್ಲ 10 ಆವೃತ್ತಿಯ ಐಪಿಎಲ್ ಟೂರ್ನಿಗಳಲ್ಲಿ 300 ಹಾಗೂ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ದಾಖಲೆ ಬರೆದಿದ್ದಾರೆ.
ಎಡಗೈ ಬ್ಯಾಟ್ಸ್‌ಮನ್ ರೈನಾಗೆ ಈ ಸಾಧನೆ ಮಾಡಲು ಕೇವಲ 25 ರನ್ ಅಗತ್ಯವಿತ್ತು. ಗುರುವಾರ ಬೆಂಗಳೂರಿನಲ್ಲಿ ನಡೆದ ಆರ್‌ಸಿಬಿ ವಿರುದ್ಧದ ಪಂದ್ಯದ ವೇಳೆ ರೈನಾ ಈ ಸಾಧನೆ ಮಾಡಿದರು.
ರೈನಾ ಕಳೆದ ವರ್ಷ ಗುಜರಾತ್ ಲಯನ್ಸ್ ಪರ 399 ರನ್ ಗಳಿಸಿದ್ದರು. ಕಳೆದ ವರ್ಷ ಗುಜರಾತ್ ತಂಡವನ್ನು ಸೇರುವ ಮೊದಲು ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ದೀರ್ಘಕಾಲ ಆಡಿರುವ ರೈನಾ ಐಪಿಎಲ್‌ನಲ್ಲಿ ಈತನಕ 155 ಪಂದ್ಯಗಳನ್ನು ಆಡಿದ್ದಾರೆ. ಅತ್ಯಂತ ಅನುಭವಿ ಆಟಗಾರ ಎನಿಸಿಕೊಂಡಿದ್ದಾರೆ.
2010, 2013 ಹಾಗೂ 2014ರ ಆವೃತ್ತಿಯ ಐಪಿಎಲ್‌ನಲ್ಲಿ 500ಕ್ಕೂ ಅಧಿಕ ರನ್ ಗಳಿಸಲು ಸಮರ್ಥರಾಗಿದ್ದರು. 2010ರಲ್ಲಿ ಚೆನ್ನೈ ತಂಡ ಐಪಿಎಲ್ ಚಾಂಪಿಯನ್ ಆಗಿತ್ತು. 2014ರ ಬಳಿಕ ರೈನಾರ ಐಪಿಎಲ್ ಬ್ಯಾಟಿಂಗ್ ಫಾರ್ಮ್‌ನಲ್ಲಿ ಇಳಿತ ಕಂಡುಬಂದಿದ್ದು ಕಳೆದ ಎರಡು ಆವೃತ್ತಿಯ ಐಪಿಎಲ್‌ನಲ್ಲಿ 400ಕ್ಕಿಂತ ಹೆಚ್ಚು ರನ್ ಗಳಿಸಲು ವಿಫಲರಾಗಿದ್ದಾರೆ.
ಈ ವರ್ಷದ ಐಪಿಎಲ್‌ನಲ್ಲಿ ರೈನಾ 8 ಪಂದ್ಯಗಳಲ್ಲಿ 61.8ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಗುಜರಾತ್ ತಂಡ 8 ಪಂದ್ಯಗಳಲ್ಲಿ 6 ಅಂಕ ಗಳಿಸಿದೆ. ಪ್ರಸ್ತುತ ಟೂರ್ನಿಯ ಗರಿಷ್ಠ ಸ್ಕೋರರ್ ಪಡೆಉವ ಆರೆಂಜ್ ಕ್ಯಾಪ್‌ನ್ನು ಧರಿಸಿರುವ ರೈನಾ ಕೆಕೆಆರ್ ನಾಯಕ ಗೌತಮ್ ಗಂಭೀರ್‌ಗಿಂತ ನಾಲ್ಕು ರನ್‌ನಿಂದ ಹಿಂದಿದ್ದಾರೆ.







