ಕುಪ್ವಾರ ದಾಳಿ: ಇಬ್ಬರು ಉಗ್ರರನ್ನು ಕೊಂದು , ಹಲವು ಯೋಧರ ಪ್ರಾಣ ಕಾಪಾಡಿದ ಸೈನಿಕ
ಈತ ರಿಯಲ್ ಹೀರೊ ರಿಷಿ ಕುಮಾರ್ !

ಶ್ರೀನಗರ, ಜ. 28 : ಈತನ ಹೆಸರು ರಿಷಿ ಕುಮಾರ್. ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿನ ಸೇನಾ ಶಿಬಿರದಲ್ಲಿ ಸೆಂಟ್ರಿ. ಇತ್ತೀಚೆಗೆ ಇಲ್ಲಿನ ಸೇನಾ ಶಿಬಿರದ ಮೇಲೆ ಉಗ್ರ ದಾಳಿಯಾದಾಗ ಹಲವು ಉಗ್ರರನ್ನು ಕೊಂದು ಹಲವು ಯೋಧರ ಪ್ರಾಣ ಕಾಪಾಡಿದ ಧೀರ ಸೈನಿಕನೀತ. ಘಟನೆಯಲ್ಲಿ ಗಾಯಾಳುವಾಗಿ ಆಸ್ಪತ್ರೆಗೆ ದಾಖಲಾಗಿರುವ ಈತ ಈಗ ಆಪಾಯದಿಂದ ಪಾರಾಗಿದ್ದಾನೆ.
ಗುರುವಾರ ಬೆಳಗ್ಗೆ ತನ್ನ ಎಂದಿನ ಸ್ಥಳದಲ್ಲಿ ಬಂದೂಕು ಹಿಡಿದು ಕರ್ತವ್ಯ ನಿರತನಾಗಿದ್ದ ರಿಷಿ ದೂರದಿಂದ ಮೂವರು ಉಗ್ರರು ತಮ್ಮ ಶಿಬಿರದತ್ತವೇ ಆಗಮಿಸುವುದನ್ನು ಕಂಡಿದ್ದಾರೆ. ತಮ್ಮ ಮೆಶೀನ್ ಗನ್ನಿನ ಟ್ರಿಗ್ಗರ್ ಮೇಲೆ ಅವರ ಬೆರಳು ಸಿದ್ಧವಾಗಿತ್ತು. ಉಗ್ರರು ಹತ್ತಿರ ಬರುತ್ತಿದ್ದಂತೆಯೇ ಅವರ ಮೇಲೆ ಗುಂಡಿನ ಮಳೆಗರೆದಿದ್ದರು ರಿಷಿ. ಶಸ್ತ್ರಸಜ್ಜಿತರಾಗಿದ್ದ ಉಗ್ರರು ಕೂಡ ಮರು ದಾಳಿ ನಡೆಸಿದ್ದು ಗುಂಡೊಂದು ರಿಷಿ ಅವರ ಹೆಲ್ಮಟ್ ಗೆ ತಾಗಿತ್ತು. ಅದು ಗುಂಡು ನಿರೋಧಕವಾಗಿದ್ದರಿಂದ ರಿಷಿ ಬಚಾವಾದರು. ‘‘ಆದರೆ ಬಂದೂಕು ಅವರ ಹೆಲ್ಮೆಟ್ ಗೆ ತಾಗುತ್ತಿದ್ದಂತೆಯೇ ಉಂಟಾದ ಬಲವಾದ ಆಘಾತಕ್ಕೆ ತಮ್ಮ ಮೇಲೆ ನಿಯಂತ್ರಣ ಕಳೆದುಕೊಂಡು ರಿಷಿ ಬಿದ್ದು ಬಿಟ್ಟರು,’’ ಎಂದು ಸೇನಾ ವಕ್ತಾರರೊಬ್ಬರು ತಿಳಿಸಿದ್ದಾರೆ.
ಆದರೆ ಕೆಲವೇ ಸೆಕೆಂಡುಗಳಲ್ಲಿ ಮೇಲೆದ್ದ ರಿಷಿ ಉಗ್ರರ ಮೇಲೆ ಮತ್ತೆ ಗುಂಡು ಹಾರಿಸಿ ಅವರಲ್ಲಿಬ್ಬರನ್ನು ಕೊಂದು ಬಿಟ್ಟರು. ಮೂರನೆಯವನನ್ನು ಸಾಯಿಸಬೇಕೆನ್ನುವಷ್ಟರಲ್ಲಿ ಅವರಲ್ಲಿದ್ದ ಬಂದೂಕುಗಳು ಬರಿದಾಗಿದ್ದವು. ಕೂಡಲೇ ತನ್ನ ಸುರಕ್ಷಿತ ಮರಳಿನ ಬಂಕರಿನಿಂದ ಹೊರ ಬಂದ ಬಿಹಾರದ ಆ ಪ್ರದೇಶದ ಈ ಧೀರ ಸೈನಿಕ ಸತ್ತು ಬಿದಿದ್ದ ಉಗ್ರ ಶಸ್ತ್ರಗಳಲ್ಲಿ ಒಂದು ಬಂದೂಕು ತೆಗೆದು ಉಳಿದೊಬ್ಬ ಉಗ್ರನತ್ತ ಗುಂಡು ಹಾರಿಸಿದರೂ ಆತ ತಪ್ಪಿಸಿಕೊಂಡು ಬಿಟ್ಟ.
ಅಷ್ಟೊತ್ತಿಗಾಗಲೇ ಅಲ್ಲಿಗೆ ಹೆಚ್ಚುವರಿ ಪಡೆಗಳು ಆಗಮಿಸಿದ್ದವು. ಗಾಯಗೊಂಡಿದ್ದ ರಿಷಿ ಅವರನ್ನು ಆರಂಭಿಕ ಚಿಕಿತ್ಸೆ ನೀಡಿ ಆಸ್ಪತ್ರೆಗೆ ದಾಖಲಿಸಲಾಯಿತು. ಈಗ ಅವರು ಅಪಾಯದಿಂದ ಪಾರಾಗಿದ್ದಾರೆಂದು ವೈದ್ಯರು ಹೇಳಿದ್ದಾರೆ.
ರಿಷಿ ಕುಮಾರ್ ಅವರು ಭಾರತೀಯ ಸೇನೆಯಲ್ಲಿ ಕಳೆದ ಎಂಟು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಸಕಾಲಿಕ ಕ್ರಮ ಮತ್ತು ಸಮಯಪ್ರಜ್ಞೆ ಹಲವಾರು ಯೋಧರ ಪ್ರಾಣ ಉಳಿದಿದೆ. ಉಗ್ರರು ಅವರ ಬಳಿ ಬರುವ ಮುನ್ನ ಒಬ್ಬ ಅಧಿಕಾರಿ ಸಹಿತ ಮೂವರು ಯೋಧರನ್ನು ಬಲಿ ಪಡೆದಿದ್ದರು.
ರಿಷಿ ಕುಮಾರ್ ಅವರ ಧೈರ್ಯ ಸಾಹಸದಿಂದಾಗಿ 19 ಸೈನಿಕರ ಬಲಿ ಪಡೆದ ಉರಿ ಮಾದರಿ ದಾಳಿಯೊಂದನ್ನು ತಪ್ಪಿಸಿದಂತಾಗಿದೆ. ಇದಕ್ಕಾಗಿ ರಿಷಿ ಅವರು ಪ್ರಶಂಸೆಯ ಮಹಾಪೂರಗಳನ್ನೇ ಪಡೆಯುತ್ತಿದ್ದಾರೆ.







