ಮಂಗಳೂರು ನಗರದ ಆವರಣ ಗೋಡೆಗಳಲ್ಲಿ ಕಲಾವಿದರ ರಂಗು
ಜಾಗೃತಿಯ ಜೊತೆಗೆ ಕಲೆಯ ಅನಾವರಣ

ಮಂಗಳೂರು, ಎ.28: ಆವರಣ ಗೋಡೆಗಳನ್ನು ವರ್ಣ ಚಿತ್ತಾರದ ಮೂಲಕ ಶೃಂಗರಿಸುವ ಯುವ ಚಿತ್ರ ಕಲಾ ವಿದ್ಯಾರ್ಥಿಗಳ ತಂಡವೊಂದು ನಗರದ ಸೌಂದರ್ಯಕ್ಕೆ ಮೆರುಗು ನೀಡುತ್ತಿದೆ. ಜೊತೆಗೆ ಈ ಚಿತ್ರಗಳ ಮೂಲಕ ನಾಗರಿಕ ಜಾಗೃತಿಯ ಸಂದೇಶವನ್ನು ನೀಡುತ್ತಿದೆ.
ನಗರದ ಮಹಾಲಸಾ ಕಲಾ ಶಾಲೆಯ ಯುವ ಚಿತ್ರಕಲಾ ಪದವಿಧರರ ತಂಡ ‘ಮಂಗಳೂರು ಕಂಟೆಂಪರರಿ ಪೈಂಟರ್ಸ್ ಗ್ರೂಪ್’ ನಗರದ ಪೊಲೀಸ್ ಗ್ರೌಂಡ್ ಬಳಿ, ಪಾಂಡೇಶ್ವರದ ಕಾರ್ಪೋರೇಶನ್ ಬ್ಯಾಂಕ್ ಬಳಿಯ ಆವರಣ ಗೋಡೆಯ ಮೇಲೆ ಸುಡುವ ಬಿಸಿಲಿನ ಬೇಗೆಯ ನಡುವೆಯೂ ವರ್ಣಚಿತ್ರಗಳನ್ನು ಅನಾವರಣ ಗೊಳಿಸಿ ನಗರದ ಸೌಂದರ್ಯ ಹೆಚ್ಚಿಸಿದ್ದಾರೆ. ಸರಳವಾಗಿ ಜನರಿಗೆ ಅರ್ಥವಾಗುವ ಈ ಚಿತ್ರಗಳು ತಕ್ಷಣ ನೋಡುಗರ ಗಮನ ಸೆಳೆಯುತ್ತವೆ. ಈ ಚಿತ್ರಗಳಲ್ಲಿ ಸಮಕಾಲೀನ ಸಮಾಜದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಚಿತ್ರಗಳನ್ನು ಕುಂಚದಿಂದ ಚಿತ್ರಿಸುತ್ತಿದ್ದಾರೆ.
ಈ ತಂಡದ 10ರಿಂದ 12 ಯುವ ಕಲಾವಿದರು ಚಿತ್ರ ರಚನೆಯಲ್ಲಿ ತೊಡಗಿದ್ದಾರೆ. ಎಪ್ರಿಲ್ 21ರಿಂದ ನಗರದ ಆವರಣ ಗೊಡೆಗಳಲ್ಲಿ ಚಿತ್ರ ರಚನೆಯಲ್ಲಿ ತೊಡಗಿರುವ ಈ ತಂಡ ಇನ್ನೂ ಸುಮಾರು 10 ದಿನಗಳ ಕಾಲ ಚಿತ್ರ ರಚನೆಯಲ್ಲಿ ತೊಡಗುತ್ತೇವೆ ಎನ್ನುತ್ತಿದ್ದಾರೆ. ನಗರದಲ್ಲಿ ಪೋಸ್ಟರ್‌ಗಳಿಂದ ತುಂಬಿರುತ್ತಿದ್ದ ಗೋಡೆಗಳನ್ನು ಸ್ವಚ್ಛಗೊಳಿಸಿ ಅದರಲ್ಲಿ ರಸ್ತೆ ಸುರಕ್ಷತೆ, ಸರಗಳ್ಳರ ಬಗ್ಗೆ ಎಚ್ಚರಿಕೆಯ ಸಂದೇಶ, ಮಾದಕ ದ್ರವ್ಯ ವಿರುದ್ಧ ಜಾಗೃತಿ, ಹೆಣ್ಣು ಭ್ರೂಣ ಹತ್ಯೆ ಬಗ್ಗೆ ಜಾಗೃತಿ, ನೀರು ಉಳಿಸುವ ಸಂದೇಶಗಳು ಇವರ ಗೋಡೆ ಚಿತ್ರಗಳಲ್ಲಿ ಅಡಗಿವೆ.
ಯುವ ಕಲಾವಿದ ಸುಬ್ರಹ್ಮಣ್ಯರ ಪ್ರಕಾರ ‘‘ನಾವು ಈಗಾಗಲೇ ದೃಶ್ಯಕಲಾ ವಿಭಾಗದಲ್ಲಿ ಪದವಿ ವ್ಯಾಸಂಗ ಮುಗಿಸಿ ತಂಡವೊಂದನ್ನು ರಚಿಸಿದ್ದೇವೆ. ಈ ತಂಡದ ಮೂಲಕ ಪ್ರಥಮ ಬಾರಿಗೆ ನಗರದ ಆವರಣಗೋಡೆಗಳಲ್ಲಿ ಚಿತ್ರ ರಚಿಸುವ ಕೆಲಸದಲ್ಲಿ ತೊಡಗಿದ್ದೇವೆ. ಕಾರ್ಪೊರೇಶನ್ ಪ್ರಾಯೋಜಕತ್ವದಲ್ಲಿ ನಗರದ ಪಾಂಡೇಶ್ವರ ಪ್ರದೇಶದಲ್ಲಿ ಚಿತ್ರ ರಚಿಸುತ್ತಿದ್ದೇವೆ. ಜೊತೆಗೆ ಕೆಲವು ಸಂದೇಶಗಳನ್ನು ಜನರಿಗೆ ಈ ಚಿತ್ರದ ಮೂಲಕ ನೀಡುತ್ತಿದ್ದೇವೆ. ನಮ್ಮ ತಂಡದಲ್ಲಿ ಅಶ್ವಿನ್, ವಿನೋದ್, ಉಮೇಶ್ .ಕೆ, ರಕ್ಷಿತ್, ಉಮೇಶ್ ವಿ.ಎಂ, ಪ್ರಜ್ವಲ್, ರಾಕೇಶ್, ಜಾನಕಿ, ಜಯಲಕ್ಷ್ಮೀ, ಸುಬ್ರಹ್ಮಣ್ಯ, ನಿತಿನ್, ರೂಪೇಶ್ ಮೊದಲಾದವರು ತಂಡದಲ್ಲಿದ್ದಾರೆ. ನಮಗಿದು ಹೊಸ ಅನುಭವ ’’ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.







