ದಾಖಲೆ ಸರಿಯಿದ್ದಲ್ಲಿ 1 ವಾರದಲ್ಲಿ ಮನೆ ನಿರ್ಮಾಣ ಪರವಾನಿಗೆ: ಮೇಯರ್ ಕವಿತಾ ಸನಿಲ್
ತಪ್ಪಿದ್ದಲ್ಲಿ ಅಧಿಕಾರಿಯೇ ಜವಾಬ್ದಾರಿ: ಎಚ್ಚರಿಕೆ

ಮಂಗಳೂರು, ಎ.28: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಜನಸಾಮಾನ್ಯರು ಮನೆ ನಿರ್ಮಾಣಕ್ಕೆ ಅರ್ಜಿ ಸಲ್ಲಿಸಿ ದಾಖಲೆಗಳು ಸಮರ್ಪಕವಾಗಿದ್ದಲ್ಲಿ ಒಂದು ವಾರದೊಳಗೆ ಅವರಿಗೆ ಪರವಾನಿಗೆ ಒದಗಿಸಬೇಕು. ಇಲ್ಲವಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನೇ ಹೊಣೆಗಾರನ್ನಾಗಿಸಲಾಗುವುದು ಎಂದು ಮೇಯರ್ ಕವಿತಾ ಸನಿಲ್ ಎಚ್ಚರಿಕೆ ನೀಡಿದ್ದಾರೆ.
ಮಹಾನಗರ ಪಾಲಿಕೆ ಕಚೇರಿಯ ಮಂಗಳಾ ಸಭಾಂಗಣದಲ್ಲಿ ಇಂದು ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪಾಲಿಕೆ ಕಚೇರಿಯಲ್ಲಿ ಜನನ- ಮರಣ ಪ್ರಮಾಣ ಪತ್ರ, ನಗರ ಅಭಿವೃದ್ಧಿ ಹಾಗೂ ರೋಜ್‌ಗಾರ್ ವಿಭಾಗಗಳಲ್ಲಿ ಬ್ರೋಕರ್‌ಗಳ ಹಾವಳಿಯ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ಯಾವುದೇ ಅರ್ಜಿ, ಪರವಾನಿಗೆಯನ್ನು ಸಂಬಂಧಪಟ್ಟವರ ಕೈಗೆ ಮಾತ್ರವೇ ನೀಡಬೇಕು. ಯಾವುದೇ ಕಾರಣಕ್ಕೂ ಬ್ರೋಕರ್‌ಗಳಿಗೆ ಅವಕಾಶ ನೀಡಬಾರದು ಎಂಬುದಾಗಿ ಪರಿಷತ್ತಿನಲ್ಲಿ ನಿರ್ಣಯಿಸಲಾಗುತ್ತಿದೆ ಎಂದು ಮೇಯರ್ ಆದೇಶಿಸಿದರು.
ನಗರ ಯೋಜನೆ ವಿಭಾಗದಲ್ಲಿ ಪರವಾನಿಗೆ ಹಾಗೂ ಮನೆ ನಿರ್ಮಾಣ ಪೂರ್ಣಗೊಳಿಸಿದ ಬಗ್ಗೆ ಪ್ರಮಾಣ ಪತ್ರ ಪಡೆಯಬೇಕಾದ್ದಲ್ಲಿ ಜನಸಾಮಾನ್ಯರು ಅಲೆದಾಡುವಂತಹ ಪರಿಸ್ಥಿತಿ ಇದೆ. ದಲ್ಲಾಳಿಗಳ ಮೂಲಕ ಕಾರ್ಯ ಸುಗಮವಾಗಿ ನಡೆಯುತ್ತದೆ ಎಂದು ವಿಪಕ್ಷ ಸದಸ್ಯ ಪ್ರೇಮಾನಂದ ಶೆಟ್ಟಿ ಸಭೆಯಲ್ಲಿ ಪ್ರಸ್ತಾಪಿಸಿದ ಹಿನ್ನೆಲೆಯಲ್ಲಿ ಮೇಯರ್ ಈ ಎಚ್ಚರಿಕೆ ನೀಡಿದರು.
ಎಎಂಆರ್‌ನಲ್ಲಿರುವುದು 3.75 ಮೀಟರ್ ನೀರು!
ಕಳೆದ ಒಂದೂವರೆ ತಿಂಗಳಿನಲ್ಲಿ ಮೇಯರ್ ಏಕಪಕ್ಷೀಯವಾಗಿ ನೀರಿನ ರೇಶನಿಂಗ್ ವ್ಯವಸ್ಥೆ ಕೈಗೊಂಡ ಹಿನ್ನೆಲೆಯಲ್ಲಿ ನಗರದಲ್ಲಿ ನೀರಿನ ಸಮಸ್ಯೆ ಉದ್ಭವವಾಗಿತ್ತು. ಇದೀಗ ಮೇಯರ್ ಮತ್ತೆ ಇಂದಿನಿಂದ ಪ್ರತಿದಿನ ನೀರು ಬಿಡುವುದಾಗಿ ಹೇಳಿಕೆ ನೀಡಿದ್ದಾರೆ. ಹಾಗಿದ್ದಲ್ಲಿ ಕಳೆದ ಒಂದೂವರೆ ತಿಂಗಳು ರೇಶನಿಂಗ್ ಮಾಡುವ ಉದ್ದೇಶ ಏನಿತ್ತು. ಮನಪಾದ ತುಂಬೆ ಅಣೆಕಟ್ಟಿನಲ್ಲಿರುವ ನೀರಿನ ಸಂಗ್ರಹಣೆ ಕುರಿತಂತೆಯೂ ನಗರ ಪಾಲಿಕೆಯಲ್ಲಿ ಸ್ಪಷ್ಟವಾದ ಮಾಹಿತಿ ಇಲ್ಲ. ಮಾತ್ರವಲ್ಲದೆ ಕಳೆದ ವರ್ಷ ನೀರಿನ ಸಮಸ್ಯೆಯ ಹಿನ್ನೆಲೆಯಲ್ಲಿ 1.43 ಕೋಟಿ ರೂ. ಹಣ ಪೋಲಾಗಿದೆ ಎಂದು ಮೇಯರ್ ಹೇಳಿಕೆ ನೀಡಿದ್ದಾರೆ ಎಂದು ವಿಪಕ್ಷ ಸದಸ್ಯರಾದ ಸುಧೀರ್ ಶೆಟ್ಟಿ ಆರೋಪಿಸಿದರು.
ಇದನ್ನು ಬೆಂಬಲಿಸಿ ದಯಾನಂದ ಶೆಟ್ಟಿ, ಪ್ರೇಮಾನಂದ ಶೆಟ್ಟಿ ಮೊದಲಾದವರು ಆಕ್ಷೇಪ ವ್ಯಕ್ತಪಡಿಸಿದರು. ಈ ನಡುವೆ ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ಕೆಲ ನಿಮಿಷಗಳ ಕಾಲ ಮಾತಿನ ಚಕಮಕಿ ನಡೆಯಿತು.
ಈ ಸಂದರ್ಭ ಪ್ರತಿಕ್ರಿಯಿಸಿದ ಮೇಯರ್ ಕವಿತಾ ಸನಿಲ್, ಕಳೆದ ಬಾರಿ ನೀರಿನ ಸಮಸ್ಯೆಯಿಂದಾಗಿ ಅಷ್ಟೊಂದು ಹಣ ವಿವಿಧ ರೀತಿಯಲ್ಲಿ ಖರ್ಚು ಮಾಡಲಾಗಿದೆ ಎಂದು ಹೇಳಿದ್ದೇನೆ. ಈ ಬಾರಿ ಎಪ್ರಿಲ್ ಮೇ ತಿಂಗಳಲ್ಲಿ ನೀರಿನ ಸಮಸ್ಯೆ ಬರುವ ಸಾಧ್ಯತೆ ಇರುವುದರಿಂದ ಹಿರಿಯ ಅಧಿಕಾರಿಗಳು ಹಾಗೂ ಆಯುಕ್ತರು ಸೂಚನೆ ನೀಡಿದ ಹಿನ್ನೆಲೆಯಲ್ಲಿ ಮುಂಜಾಗರೂಕತಾ ಕ್ರಮವಾಗಿ ರೇಶನಿಂಗ್ ವ್ಯವಸ್ಥೆಯನ್ನು ವಿಭಿನ್ನ ರೀತಿಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೈಗೊಳ್ಳಲಾಗಿತ್ತು. ಇದೀಗ ಜೂನ್‌ನಲ್ಲಿ ಮಳೆ ಬರುವ ಸಾಧ್ಯತೆ ಇರುವುದರಿಂದ ಈಗ ಲಭ್ಯವಿರುವ ನೀರಿನ ಸಂಗ್ರಹದ ಆಧಾರದಲ್ಲಿ ಪ್ರತಿನಿತ್ಯ ನೀರು ಪೂರೈಕೆಗೆ ಕ್ರಮ ವಹಿಸಲಾಗಿದೆ ಎಂದು ಸ್ಪಷ್ಟನೆ ನೀಡಿದರು.
ಹಿರಿಯ ಅಧಿಕಾರಿ ಲಿಂಗೇಗೌಡ ಮಾತನಾಡಿ, ಈ ಬಾರಿ ಮಾರ್ಚ್ 19ರಿಂದ ರೇಶನಿಂಗ್ ವ್ಯವಸ್ಥೆ ಆರಂಭಿಸಲಾಗಿದೆ. ಆ ಸಂದರ್ಭ ತುಂಬೆ ಅಣೆಕಟ್ಟಿನಲ್ಲಿ 4.5 ಮೀಟರ್ ನೀರು ಹಾಗೂ ಎಎಂಆರ್ ಅಣೆಕಟ್ಟಿನಲ್ಲಿ 6.5 ಮೀಟರ್ ನೀರಿನ ಲಭ್ಯತೆ ಇತ್ತು. ಈ ನಡುವೆ ಬಂಟ್ವಾಳ, ಭಾಗದಲ್ಲಿ ಅಲ್ಪ ಪ್ರಮಾಣದ ಮಳೆಯಾಗಿ ಸುಮಾರು 22 ಸೆ.ಮೀ.ನಷ್ಟು ನೀರು ಅಣೆಕಟ್ಟಿನಲ್ಲಿ ಹೆಚ್ಚಳವಾಗಿದೆ. ಹಾಗಾಗಿ ಪ್ರಸ್ತುತ ತುಂಬೆ ಅಣೆಕಟ್ಟಿನಲ್ಲಿ 4.98 ಮೀಟರ್ ಹಾಗೂ ಎಎಂಆರ್ ಅಣೆಕಟ್ಟಿನಲ್ಲಿ 3.75 ಮೀಟರ್ ನೀರು ಸಂಗ್ರಹವಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ವಿಧಾನ ಪರಿಷತ್‌ನ ಸದಸ್ಯ ಐವನ್ ಡಿಸೋಜ, ಉಪ ಮೇಯರ್ ರಜನೀಶ್, ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ಅಬ್ದುಲ್ ರವೂಫ್, ನಾಗವೇಣಿ, ಪ್ರತಿಭಾ ಕುಳಾಯಿ, ಸಬಿತಾ ಮಿಸ್ಕಿತ್ ಉಪಸ್ಥಿತರಿದ್ದರು.







