ಸಾಮರಸ್ಯದಿಂದ ನೆಮ್ಮದಿಯುತ ಬದುಕು: ಸಂತೋಷ್ ಕುಮಾರ್ ರೈ
ತೋಟಾಲ್ ಮಸೀದಿಯಲ್ಲಿ ಸೋಲಾರ್ ದೀಪ ಉದ್ಘಾಟನೆ

ಕೊಣಾಜೆ, ಎ.28: ಎಲ್ಲಿ ಸಾಮರಸ್ಯ ನೆಲೆಸಿರುತ್ತದೆಯೋ ಅಲ್ಲಿ ಶಾಂತಿ, ನೆಮ್ಮದಿಯುತ ಜೀವನವನ್ನು ಕಾಣಲು ಸಾಧ್ಯವಾಗುತ್ತದೆ. ಅದೇ ರೀತಿಯಲ್ಲಿ ಯಾವುದೇ ಪ್ರದೇಶದ ಅಭಿವೃದ್ಧಿಯಲ್ಲಿ ರಾಜಕೀಯ ಮಾಡದೆ ಮುಂದುವರಿದರೆ ಉತ್ತಮ ಸಮಾಜದ ನಿರ್ಮಾಣ ಸಾಧ್ಯ ಎಂದು ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸಂತೋಷ್ ಕುಮಾರ್ ಬೋಳಿಯಾರ್ ಅಭಿಪ್ರಾಯಪಟ್ಟರು.
ಬಾಳೆಪುಣಿ ಗ್ರಾಮದ ಕೈರಂಗಳದ ಮುಹಿಯುದ್ದೀನ್ ಜುಮಾ ಮಸೀದಿ ತೋಟಾಲ್‌ನಲ್ಲಿ ಸೋಲಾರ್ ದೀಪವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬ್ ಟಿ.ಎ.ಮುಹಿಯುದ್ದೀನ್ ಸಅದಿ ದುಆ ನೆರವೇರಿಸಿದರು. ಮಸೀದಿಯ ಅಧ್ಯಕ್ಷ ಟಿ.ಎಸ್.ಇಸ್ಮಾಯಿಲ್ ಮೊಂಟೆಪದವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಡಾ.ಮುನೀರ್ ಬಾವ, ಪಂಚಾಯಿತಿ ಸದಸ್ಯರಾದ ರೋಹಿತ್ ಗಟ್ಟಿ, ಸಾವಿತ್ರಿ ಹೊಸಮಾರು, ಸ್ಥಳೀಯರಾದ ಅಬ್ಬಾಸ್ ಹಾಜಿ ತೋಟಾಲ್, ಎನ್.ಎಸ್.ಮೊಯ್ದಿನ್ ಕುಂಞಿ ಹಾಜಿ, ಟಿ.ಎಚ್.ಇಬ್ರಾಹಿಂ ನಟ್ಟಿಹಿತ್ತಿಲು, ಪಿ.ಎಸ್.ಖಲೀಲ್, ಹಾಜಿ ಮೂಸ ಕುಂಞಿ, ಮೊಯ್ದಿನ್ ಕುಂಞಿ, ಸಂತೋಷ್ ಹೊಸಮಾರ್, ಹಮೀದ್ ಮುಸ್ಲಿಯಾರ್,ನವೀನ್ ಶೆಟ್ಟಿ, ರಾಜುಪ್ರಕಾಶ್ ಅಂಕದಕಲ, ಇಬ್ರಾಹಿಂ ಪಾರೆ, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಕಾರ್ಯದರ್ಶಿ ಮಹಮ್ಮದ್ ಅಸ್ಗರ್ ಮೊದಲಾದವರು ಉಪಸ್ಥಿತರಿದ್ದರು.
ಮುನೀರ್ ಮಾಸ್ಟರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.







