ಕಾಶ್ಮೀರದಲ್ಲಿ ಬ್ಯಾಂಕ್ ದೋಚುವ ಉಗ್ರಗಾಮಿಗಳ ಯತ್ನ ವಿಫಲ

ಶ್ರೀನಗರ,ಎ.28: ಅನಂತನಾಗ್ ಜಿಲ್ಲೆಯಲ್ಲಿ ಶುಕ್ರವಾರ ಬ್ಯಾಂಕೊಂದನ್ನು ದೋಚಲು ಉಗ್ರಗಾಮಿಗಳು ನಡೆಸಿದ್ದ ಪ್ರಯತ್ನವನ್ನು ಭದ್ರತಾ ಪಡೆಗಳು ವಿಫಲಗೊಳಿಸಿದ್ದು, ಓರ್ವ ಉಗ್ರನನ್ನು ಬಂಧಿಸಲಾಗಿದೆ.
ಅನಂತನಾಗ್ ಜಿಲ್ಲೆಯ ಮೆಹಂದಿ ಕಡಾಲ್‌ನ ಜಮ್ಮು ಆ್ಯಂಡ್ ಕಾಶ್ಮೀರ ಬ್ಯಾಂಕಿನಲ್ಲಿ ಈ ಘಟನೆ ನಡೆದಿದೆ. ಮಧ್ಯಾಹ್ನ ಶಸ್ತ್ರಸಜ್ಜಿತರಾಗಿದ್ದ ಇಬ್ಬರು ಉಗ್ರರು ಬ್ಯಾಂಕನ್ನು ಪ್ರವೇಶಿಸಿದ್ದರು. ಬ್ಯಾಂಕಿನಲ್ಲಿ ಭದ್ರತೆಗಾಗಿ ನಿಯೋಜಿತ ಸೆಕ್ಯೂರಿಟಿ ಸಿಬ್ಬಂದಿಗಳು ಅಪಾಯವನ್ನು ಗ್ರಹಿಸಿ ಉಗ್ರರನ್ನು ಹಿಡಿಯಲು ಯತ್ನಿಸಿದಾಗ ಅವರು ಗುಂಡುಗಳನ್ನು ಹಾರಿಸಿದ್ದರು.
ಗುಂಡು ಹಾರಾಟದಿಂದ ಓರ್ವ ಸಿಆರ್‌ಪಿಎಫ್ ಹೆಡ್‌ಕಾನ್‌ಸ್ಟೇಬಲ್‌ಗೆ ಬಲಗೈಗೆ ಗಾಯವಾಗಿದೆ ಎಂದು ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು.
ಈ ವೇಳೆ ಓರ್ವ ಉಗ್ರ ಪರಾರಿಯಾಗಿದ್ದರೆ, ಇನ್ನೋರ್ವ ಸಿಕ್ಕಿಬಿದ್ದಿದ್ದು ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಬಂಧಿತ ಉಗ್ರನನ್ನು ಶೋಪಿಯಾನ್ ಜಿಲ್ಲೆಯ ರೇಷಿಪುರಾ ನಿವಾಸಿ ಮುನೀಬ್ ಅಹ್ಮದ್ ಎಂದು ಗುರುತಿಸಲಾಗಿದೆ.
Next Story





