ವಿದ್ಯುತ್ ಇಲ್ಲ : ಜಾರ್ಖಂಡ್ ನ ಈ ಆಸ್ಪತ್ರೆಯ ವೈದ್ಯರಿಗೆ ಮೊಬೈಲ್ ಲೈಟೇ ಗತಿ

ಲಾತೆಹಾರ್,ಎ.28 : ಜಾರ್ಖಂಡ್ ರಾಜ್ಯದ ಲಾತೆಹಾರ್ ಜಿಲ್ಲೆಯಲ್ಲಿರುವ ಬಾಲುಮಥ್ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಿದ್ಯುಚ್ಛಕ್ತಿ ಸಮಸ್ಯೆಯಿಂದಾಗಿ ವೈದ್ಯರು ರೋಗಿಗಳನ್ನು ಮೊಬೈಲ್ ಫೋನಿನ ಫ್ಲ್ಯಾಶ್ ಲೈಟ್ ಗಳನ್ನು ಉಪಯೋಗಿಸಿ ಪರೀಕ್ಷಿಸಿ ಚಿಕಿತ್ಸೆ ನೀಡಬೇಕಾದ ಪ್ರಮೇಯ ಬಂದಿದೆ. ಈ ಸ್ಥಳ ರಾಜಧಾನಿ ರಾಂಚಿಯಿಂದ ಕೇವಲ 80 ಕಿ.ಮೀ ದೂರದಲ್ಲಿದ್ದು ಇಲ್ಲಿನ ಸಮಸ್ಯೆ ನಿಜವಾಗಿಯೂ ಆಶ್ಚರ್ಯ ಹುಟ್ಟಿಸುತ್ತದೆ. ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜನರೇಟರ್ ಇದ್ದರೂ ಕಳೆದೊಂದು ವಾರದಿಂದ ಅದು ಕೂಡ ಕೆಟ್ಟು ಉಪಯೋಗಿಸದ ಸ್ಥಿತಿಯಲ್ಲಿದೆ.
ಬುಧವಾರ ಅಪಘಾತವೊಂದರಲ್ಲಿ ಗಾಯಗೊಂಡು ತಾಯಿ ಹಾಗೂ ಮಗನನ್ನು ಈ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ವೈದ್ಯರು ಅವನ್ನು ಪರೀಕ್ಷಿಸಲು ತಮ್ಮ ಫೋನಿನ ಫ್ಲ್ಯಾಶ್ ಲೈಟ್ ಉಪಯೋಗಿಸಿದರು.
ಆಸ್ಪತ್ರೆಯ ವಿದ್ಯುತ್ ತಂತಿಯಲ್ಲಿ ಸಮಸ್ಯೆಯಿದೆ, ಜನರೇಟರ್ ಕೂಡ ದುರಸ್ತಿಗೊಳ್ಳಬೇಕಿದೆ,’’ ಎಂದು ರೋಗಿಗಳನ್ನು ಪರೀಕ್ಷಿಸಿದ ಡಾ.ಪುರುಷೋತ್ತಮ್ ಹೇಳುತ್ತಾರೆ. ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಅಮರನಾಥ್ ಇಲ್ಲಿನ ಸಮಸ್ಯೆಗಳ ಬಗ್ಗೆ ಗಮನ ಹರಿಸುತ್ತಿಲ್ಲ. ಆಸ್ಪತ್ರೆಯಲ್ಲಿ ಬೆಳಿಗ್ಗೆ ಸ್ವಲ್ಪ ಹೊತ್ತು ಕರ್ತವ್ಯ ನಿರ್ವಹಿಸಿ ತೆರಳುತ್ತಾರೆ,’’ ಎಂದು ತಮ್ಮ ಹೆಸರು ಹೇಳಲಿಚ್ಛಿಸದ ಇಲ್ಲಿನ ಕೆಲ ಸಿಬ್ಬಂದಿ ದೂರುತ್ತಾರೆ.
ಈ ಸಮುದಾಯ ಅಭಿವೃದ್ಧಿ ಕೇಂದ್ರದಲ್ಲಿ ವೈದ್ಯರ ಕೊರತೆಯೂ ಇದ್ದು ಏಳು ವೈದ್ಯರು ಇರಬೇಕಾದಲ್ಲಿ ಕೇವಲ ನಾಲ್ಕು ಮಂದಿ ವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ.







