ಟ್ರಾಫಿಕ್ ನಿಯಮ ಉಲ್ಲಂಘನೆ ಆರೋಪದಲ್ಲಿ ಕೋರ್ಟಿಗೆ ಹೋಗಿ ಮಾದಕ ವಸ್ತು ಆರೋಪಿಯಾದ !
ಬೇಕಿತ್ತಾ ಈ ಕೆಲಸ ?

ಕ್ಲೀವ್‌ಲ್ಯಾಂಡ್ (ಅಮೆರಿಕ), ಎ. 28: ಸಾರಿಗೆ ನಿಯಮ ಉಲ್ಲಂಘನೆಯ ಸಣ್ಣ ಆರೋಪದಲ್ಲಿ ನ್ಯಾಯಾಲಯದ ವಿಚಾರಣೆಗೆ ಹಾಜರಾದ ವ್ಯಕ್ತಿಯೊಬ್ಬ, ಮಾದಕ ದ್ರವ್ಯ ಹೊಂದಿದ ಗಂಭೀರ ಆರೋಪದಲ್ಲಿ ಜೈಲು ಪಾಲಾದ ಘಟನೆ ಅಮೆರಿಕದ ಓಹಿಯೊ ರಾಜ್ಯದ ಕ್ಲೀವ್‌ಲ್ಯಾಂಡ್‌ನಿಂದ ವರದಿಯಾಗಿದೆ.
39 ವರ್ಷದ ಲೆಮರ್ ರೀಡ್ ಕಳೆದ ವಾರ ಸಾರಿಗೆ ನಿಯಮ ಉಲ್ಲಂಘನೆ ಪ್ರಕರಣದಲ್ಲಿ ತನ್ನ ಹೇಳಿಕೆ ನೀಡಲು ಕ್ಲೀವ್‌ಲ್ಯಾಂಡ್‌ನಲ್ಲಿರುವ ಲೊರೈನ್ ಮುನಿಸಿಪಲ್ ನ್ಯಾಯಾಲಯಕ್ಕೆ ಹಾಜರಾದನು.
ನ್ಯಾಯಾಧೀಶರು ಆತನ ದಾಖಲೆಗಳನ್ನು ಪರಿಶೀಲಿಸುತ್ತಿರುವಾಗ, ಆತ ತನ್ನ ಹ್ಯಾಟನ್ನು ತೆಗೆದು ಕಂಕುಳಲ್ಲಿ ಇಟ್ಟಿದ್ದನು. ಆಗ ಅದರೊಳಗಿದ್ದ ಕೊಕೇನ್‌ನ ಸಣ್ಣ ಚೀಲವೊಂದು ನೆಲಕ್ಕೆ ಬಿದ್ದಿತ್ತು ಹಾಗೂ ಅದು ನ್ಯಾಯಾಲಯದ ಸಿಸಿಟಿವಿ ಕ್ಯಾಮರಗಳಲ್ಲಿ ದಾಖಲಾಯಿತು.
ಇದರ ಪರಿವೆಯಿಲ್ಲದ ಆತ ನ್ಯಾಯಾಲಯದಲ್ಲಿ ದಂಡ ಪಾವತಿಸಿ ಹೊರ ಹೋದನು. ಕೊಕೇನ್ ಚೀಲ ಸುಮಾರು ಒಂದು ಗಂಟೆ ಕಾಲ ನ್ಯಾಯಾಲಯದ ನೆಲದಲ್ಲೇ ಬಿದ್ದುಕೊಂಡಿತ್ತು. ಬಳಿಕ ನ್ಯಾಯಾಲಯದ ಭದ್ರತಾ ಸಿಬ್ಬಂದಿಯೊಬ್ಬರು ಅದನ್ನು ನೋಡಿದರು.
ಚೀಲವನ್ನು ಎತ್ತಿಕೊಂಡ ಅವರಿಗೆ ಒಳಗೆ ಬಿಳಿಯ ಪುಡಿ ಕಾಣಿಸಿತು. ಬಳಿಕ ಅದು ಕೊಕೇನ್ ಎನ್ನುವುದು ಸಾಬೀತಾಯಿತು.
ತಕ್ಷಣ ರೀಡ್ ಬಂಧನಕ್ಕೆ ವಾರಂಟ್ ಹೊರಡಿಸಲಾಯಿತು. ಆರೋಪ ಸಾಬೀತಾದರೆ, ಹಲವು ವರ್ಷಗಳ ಜೈಲು ಶಿಕ್ಷೆಯನ್ನು ರೀಡ್ ಎದುರಿಸುತ್ತಿದ್ದಾನೆ.







