ಕುಡಿಯುವ ನೀರು ಒದಗಿಸಲು ಜಿಲ್ಲಾಡಳಿತದಿಂದ ನಿರಂತರ ಪ್ರಯತ್ನ: ನಂಜಯ್ಯ ಮಠ್

ತುಮಕೂರು, ಎ.28: ಸತತ ಮೂರು ವರ್ಷಗಳ ಬರದಿಂದ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದು, ಇದರ ಪರಿಹಾರಕ್ಕಾಗಿ ಜಿಲ್ಲಾಡಳಿತ ನಿರಂತರ ಪ್ರಯತ್ನ ನಡೆಸುತ್ತಿದೆ ಎಂದು ಗ್ರಾಮೀಣ ಕುಡಿಯುವ ನೀರು ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಹಾಗೂ ನೈರ್ಮಲ್ಯ ಇಲಾಖೆಯ ಇತರೆ ಕಾರ್ಯಕ್ರಮಗಳ ಪರಿಶೀಲನಾ ಸಮಿತಿ ಅಧ್ಯಕ್ಷ ಎಸ್.ಜಿ.ನಂಜಯ್ಯನ ಮಠ್ ತಿಳಿಸಿದ್ದಾರೆ.
ಜಿಪಂ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದುವರೆಗೂ ತೀವ್ರ ನೀರಿನ ಬರ ಇರುವ ಸುಮಾರು 114 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಇವುಗಳಲ್ಲಿ 6 ಕಡೆಗಳಲ್ಲಿ ಖಾಸಗಿ ಕೊಳವೆ ಬಾವಿಗಳ ಮೂಲಕ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಲಾಗುತ್ತಿದೆ. ಜನರು ತೋಟಗಾರಿಕೆಗೆ ಹೆಚ್ಚು ಒತ್ತು ನೀಡುತ್ತಿರುವ ಹಿನ್ನೆಲೆಯಲ್ಲಿ ಖಾಸಗಿ ಕೊಳವೆ ಬಾವಿಗಳ ಮಾಸಿಕ ಬಾಡಿಗೆಯನ್ನು 8 ಸಾವಿರದಿಂದ 18 ಸಾವಿರ ರೂ.ಗೆ ಹೆಚ್ಚಿಸಲಾಗಿದೆ. ಅಲ್ಲದೆ ಸಹಾಯವಾಣಿ ತೆರೆಯಲಾಗಿದ್ದು, ದಿನದ 24 ಗಂಟೆ, ವಾರದ 7 ದಿನ ಕಾರ್ಯನಿರ್ವಹಿಸುವ ಮೂಲಕ ಸಾರ್ವಜನಿಕರಿಂದ ನೀರಿನ ಸಮಸ್ಯೆಯ ಬಗ್ಗೆ ದೂರುಗಳು ಬಂದ ಕೂಡಲೇ ಕಾರ್ಯಪ್ರವೃತ್ತರಾಗಲು ಸಹಾಯಕವಾಗಿದೆ ಎಂದರು.
ಜಿಲ್ಲೆಯಲ್ಲಿ ಒಟ್ಟು 904 ಶುದ್ಧ ಕುಡಿಯುವ ನೀರಿನ ಘಟಕಗಳು ಸ್ಥಾಪನೆಗೊಂಡಿದ್ದು, ಅವುಗಳಲ್ಲಿ 880 ಕಾರ್ಯನಿರ್ವಹಿಸುತ್ತಿವೆ. ಕೆಟ್ಟಿರುವ ಆರ್.ಒ. ಪ್ಲಾಂಟ್‌ಗಳ ಶೀಘ್ರ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸತತ ಮೂರು ವರ್ಷಗಳಿಂದ ಮಳೆಯಿಲ್ಲದೆ ಕೆರೆ, ಕಟ್ಟೆ, ನದಿಗಳು ಬತ್ತಿ ಹೋಗಿರುವುದರಿಂದ ಅವುಗಳಿಗೂ ನೀರಿನ ಕೊರತೆ ಉಂಟಾಗಿದೆ. ಟ್ಯಾಂಕರ್ ಮೂಲಕ ಆರ್.ಒ.ಪ್ಲಾಂಟ್‌ಗಳಿಗೆ ನೀರು ಸರಬರಾಜು ಮಾಡುವ ಬಗ್ಗೆಯೂ ಚಿಂತನೆ ನಡೆಸುವಂತೆ ಅಧಿಕಾರಿಗಳಿಗೆ ಸಲಹೆ ನೀಡಿರುವುದಾಗಿ ಎಸ್.ಜಿ.ನಂಜಯ್ಯ ಮಠ್ ತಿಳಿಸಿದರು.
ಗ್ರಾಮೀಣ ನೈರ್ಮಲ್ಯ ವಿಭಾಗದ ಶೌಚಾಲಯ ನಿರ್ಮಾಣದಲ್ಲಿ ಜಿಲ್ಲೆ ಶೇ.65ರಷ್ಟು ಪ್ರಗತಿಯನ್ನು ಸಾಧಿಸಿದೆ. ಮುಂದಿನ ಅಕ್ಟೋಬರ್ 2ರ ವೇಳೆಗೆ ಶೇ.90ರಷ್ಟು ಶೌಚಾಲಯ ನಿರ್ಮಾಣ ಕಾಮಗಾರಿಗಳು ಪೂರ್ಣಗೊಳ್ಳಲಿದೆ ಎಂಬ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ. ಅಧಿಕಾರಿಗಳು ನೀಡಿದ ಭರವಸೆಯಂತೆ ನಡೆದುಕೊಳ್ಳಲು ನಿರಂತರ ನಿಗಾ ವಹಿಸಲಾಗುವುದು. ಈಗಾಗಲೇ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಉಡುಪಿ, ಚಿಕ್ಕಮಗಳೂರು, ಮಂಗಳೂರು ಜಿಲ್ಲೆಗಳನ್ನು ಬಯಲು ಬರ್ಹಿದೆಸೆ ಮುಕ್ತ ಜಿಲ್ಲೆಗಳನ್ನಾಗಿ ಘೋಷಿಸಲಾಗಿದೆ ಎಂದು ಎಸ್.ಜಿ.ನಂಜಯ್ಯ ಮಠ್ ನುಡಿದರು.
ಜಿಪಂ ಸಿಇಒ ಕೆ.ಜೆ.ಶಾಂತರಾವ್ ಮಾತನಾಡಿ, ಜಿಲ್ಲೆಯ 256 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿದ್ದು, ಇವುಗಳ ನಿವಾರಣೆಗೆ ಈಗಾಗಲೇ 15.06 ಕೋಟಿ ರೂ. ವೆಚ್ಚದಲ್ಲಿ ಕೊಳವೆ ಬಾವಿ ಕೊರೆಸಿ, ಮೋಟಾರು, ಪಂಪು ಆಳವಡಿಸಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಕ್ರಿಯಾ ಯೋಜನೆ ತಯಾರಿಸಿ ಅನುಮೋದನೆ ಪಡೆಯಲಾಗಿದೆ. ಜಿಲ್ಲೆಯ 10 ತಾಲೂಕುಗಳು ಬರಪಿಡೀತ ಎಂದು ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ತ್ವರಿತಗತಿಯಲ್ಲಿ ಕಾಮಗಾರಿಗಳನ್ನು ಕೈಗೊಂಡು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ಸರಕಾರದ ವತಿಯಿಂದ ಇದುವರೆಗೂ 16,919 ಕೊಳವೆ ಬಾವಿಗಳನ್ನು ಕೊರೆದಿದ್ದು, ಇವುಗಳಲ್ಲಿ 5,076 ವಿಫಲವಾಗಿವೆ. ವಿಫಲವಾದ ಕೊಳವೆ ಬಾವಿಗಳನ್ನು ತಕ್ಷಣವೇ ಮುಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ ಸರಕಾರ 2014ರಲ್ಲಿ ಹೊರಡಿಸಿದ ಸುತ್ತೋಲೆ ಮತ್ತು ಪ್ರಸ್ತುತ ಜಾರಿಗೆ ತಂದಿರುವ ನಿಯಮಗಳ ಅನ್ವಯ ಗ್ರಾಪಂ ಪಿಡಿಒ, ಕಾರ್ಯದರ್ಶಿಗಳ ಸಭೆ ನಡೆಸಿ ನಿಯಮಗಳ ಪಾಲನೆಗೆ ಸೂಚನೆ ನೀಡಲಾಗಿದೆ. ಸಾರ್ವಜನಿಕರು ಕೈಜೊಡಿಸಿದರೆ ವಿಫಲವಾಗಿರುವ ಕೊಳವೆಬಾವಿಗಳನ್ನು ಮುಚ್ಚಿಸಿ ಅನಾಹುತಗಳನ್ನು ತಪ್ಪಿಸಬಹುದಾಗಿದೆ ಎಂದು ಸಿಇೊ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಸದಸ್ಯರಾದ ನಧಾಪ್, ರಾಜು ಮಿಡಿಗೇಶಿ ಮತ್ತಿತರರಿದ್ದರು.







