ರೆಡ್ಬಿಲ್ಡಿಂಗ್ ವಿವಾದ: ಸಮೀಕ್ಷೆ ನಡೆಸಿ ಸೂಕ್ತ ಕ್ರಮದ ಭರವಸೆ

ಲೇನ್ನಲ್ಲಿ ರಸ್ತೆ ವಿಸ್ತರಣೆಯನ್ನು ವಿರೋಧಿಸಿ ಕಂಕನಾಡಿ ವೆಲೆನ್ಸಿಯಾದ ರೆಡ್ ಬಿಲ್ಡಿಂಗ್ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಮನಪಾ ಮುಂಭಾಗ ಪ್ರತಿಭಟನೆ ನಡೆಯಿತು.
ಮಂಗಳೂರು, ಎ.28: ಕಂಕನಾಡಿ ವೆಲೆನ್ಶಿಯಾದ ರೆಡ್ ಬಿಲ್ಡಿಂಗ್ ಲೇನ್ನಲ್ಲಿ ರಸ್ತೆ ವಿಸ್ತರಣೆಯನ್ನು ವಿರೋಧಿಸಿ ಸ್ಥಳೀಯ ನಾಗರಿಕರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಈ ಬಗ್ಗೆ ಸಮೀಕ್ಷೆ ನಡೆಸಿ, ಸ್ಥಳೀಯರಿಗೆ ತೊಂದರೆ ಆಗುವುದು ದೃಢಪಟ್ಟಲ್ಲಿ ಮುಂದಿನ ಸಭೆಯಲ್ಲಿ ವರದಿ ಮಂಡಿಸಿ ನಿರ್ಣಯ ಕೈ ಬಿಡಲು ಇಂದು ನಡೆದ ಮನಪಾ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಯಿತು.
ಅಭಿವೃದ್ಧಿಯ ನೆಪದಲ್ಲಿ 6 ಮೀಟರ್ ರಸ್ತೆಯನ್ನು 9 ಮೀಟರ್ಗೆ ವಿಸ್ತರಣೆಗೊಳಿಸುವ ಮೂಲಕ ಸ್ಥಳೀಯರಿಗೆ ತೊಂದರೆ ಮಾಡಲಾಗುತ್ತಿದೆ ಎಂದು ಆರೋಪಿಸಿ ರೆಡ್ ಬಿಲ್ಡಿಂಗ್ ಲೇನ್ನ ಸ್ಥಳೀಯರು ಇಂದು ಮನಪಾ ಎದುರು ನಡೆಸಿದ ಪ್ರತಿಭಟನೆ ಕುರಿತು ಮನಪಾ ಸಾಮಾನ್ಯ ಸಭೆಯಲ್ಲೂ ತೀವ್ರ ಚರ್ಚೆ ನಡೆಯಿತು.
ವಿಪಕ್ಷ ಸದಸ್ಯೆ ರೂಪಾ ಡಿ. ಬಂಗೇರ ಮಾತನಾಡಿ, ಅಭಿವೃದ್ಧಿ ಜನಪರ ಆಗಿರಬೇಕು. ನಾಗರಿಕರು ಮನಪಾ ಎದುರು ಪ್ರತಿಭಟನೆ ನಡೆಸುವುದಕ್ಕಾಗಿಯೇ ತೆರಿಗೆ ಸಂಗ್ರಹ ಮಾಡುವುದು ಎಂದು ಪ್ರಶ್ನಿಸಿದರು.
ಮೇಯರ್ ಕವಿತಾ ಸನಿಲ್ ಪ್ರತಿಕ್ರಿಯಿಸಿ, ರೆಡ್ ಬಿಲ್ಡಿಂಗ್ ವಿಸ್ತರಣೆಯಿಂದ ತೊಂದರೆಯಾಗುವ ಬಗ್ಗೆ ಈ ಹಿಂದೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ನಾನು ಅಲ್ಲಿಗೆ ಭೇಟಿ ನೀಡಿದ್ದೆ. ಸ್ಥಳೀಯರಿಗೆ ಯಾವ ರೀತಿಯಲ್ಲಿ ತೊಂದರೆಯಾಗುತ್ತದೆ ಎಂಬ ಬಗ್ಗೆ ನಗರಾಭಿವೃದ್ಧಿ ಕೋಶದ ಅಧಿಕಾರಿಗಳಿಗೆ ಸಮೀಕ್ಷೆ ನಡೆಸಿ ವರದಿ ನೀಡುವಂತೆ ತಿಳಿಸಿದೆ. ಆದರೆ ಅಧಿಕಾರಿಗಳು ಹೋದಾಗ ಅಲ್ಲಿನ ಸ್ಥಳೀಯರು ಅವಕಾಶ ನೀಡಿಲ್ಲ. ಎರಡು ವಾರದ ಹಿಂದೆ ಮತ್ತೆ ಸಮೀಕ್ಷೆಗೆ ಹೋದಾಗಲೂ ಅಧಿಕಾರಿಗಳನ್ನು ಹಿಂದಕ್ಕೆ ಕಳುಹಿಸಿದ್ದರು. ಒಂದು ವಾರದ ಹಿಂದೆ ಎಟಿಪಿ ಮತ್ತು ಜೆಡಿಯವರು ಹೋದಾಗಲೂ ಅವರನ್ನು ಸ್ಥಳೀಯರು ತಡೆದಿದ್ದರು. ಇಂತಹ ಪರಿಸ್ಥಿತಿಯಲ್ಲಿ ವಾಸ್ತವವನ್ನು ಅರಿಯುವುದು ಹೇಗೆ? ಸ್ಥಳೀಯರ ಬಗ್ಗೆ ಕಾಳಜಿ ವಹಿಸಿಯೇ ಸರ್ವೆಗೆ ತಿಳಿಸಲಾಗಿತ್ತು. ಈ ಹಿಂದೆ ಮನಪಾ ಸಾಮಾನ್ಯ ಸಭೆಯಲ್ಲಿ ಸದಸ್ಯರ ಒಪ್ಪಿಗೆ ಮೇರೆಗೆ ಈ ರಸ್ತೆ ವಿಸ್ತರಣೆಗೆ ನಿರ್ಣಯಿಸಲಾಗಿತ್ತು. ಅದರಲ್ಲಿ ತಪ್ಪಾಗಿರಬಹುದು. ಅದಕ್ಕೆ ಸ್ಥಳೀಯರು ಸಮೀಕ್ಷೆಗೆ ಅವಕಾಶ ನೀಡಿ ಮುಂದಿನ ಕ್ರಮಕ್ಕೆ ಸಹಕರಿಸಬೇಕು. ಪ್ರಸ್ತುತ ಈವರೆಗೆ ಯಾವುದೇ ಕಾಮಗಾರಿಗೆ ಅಂದಾಜು ಪಟ್ಟಿ ಅಥವಾ ಟೆಂಡರ್ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.
ಸದಸ್ಯ ವಿನಯ್ ರಾಜ್ ಮಾತನಾಡಿ, ಈ ವಿಷಯ ಈಗಾಗಲೇ ಪರಿಷತ್ತಿನಲ್ಲಿ ಅನುಮೋದನೆ ಆಗಿರುವುದರಿಂದ ಮತ್ತೆ ಈ ನಿರ್ಣಯವನ್ನು ಕೈಬಿಡಲು ಸಕಾರಣವನ್ನು ಪರಿಷತ್ತಿಗೆ ಮಂಡಿಸಬೇಕಾಗುತ್ತದೆ. ಅದಕ್ಕೆ ಸರ್ವೆ ನಡೆಸಿ ಎಷ್ಟು ಜನರಿಗೆ ತೊಂದರೆ ಆಗುತ್ತದೆ ಎಂಬ ಸಮಗ್ರ ಮಾಹಿತಿಯ ಮೂಲಕ ಮುಂದಿನ ಸಭೆಯಲ್ಲಿ ನಿರ್ಣಯ ಕೈಬಿಡುವ ಬಗ್ಗೆ ನಿರ್ಣಯ ಕೈಗೊಳ್ಳಬಹುದು ಎಂದು ಸಲಹೆ ನೀಡಿದರು.
ಪ್ರತಿಭಟನೆ: ಮಂಗಳೂರು ಮಹಾನಗರ ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ಸಾಮಾನ್ಯ ಸಭೆ ನಡೆಯುತ್ತಿದ್ದಂತೆಯೇ ಕಂಕನಾಡಿ ವೆಲೆನ್ಸಿಯಾದ ರೆಡ್ ಬಿಲ್ಡಿಂಗ್ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ತಮ್ಮ ಲೇನ್ನಲ್ಲಿ ರಸ್ತೆ ವಿಸ್ತರಣೆಯನ್ನು ವಿರೋಧಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದರು.







