ಮುಗ್ಗಲು ಮೇವು ತಿಂದು ರಾಸುಗಳ ಸಾವು: ಪರಿಹಾರಕ್ಕಾಗಿ ಪಶು ಇಲಾಖೆಗೆ ಮುತ್ತಿಗೆ

ಗುಂಡ್ಲುಪೇಟೆ, ಎ.28: ಜಿಲ್ಲಾಡಳಿತದ ಮೇವು ಕೇಂದ್ರದಿಂದ ಖರೀದಿಸಿದ ಮೇವು ತಿಂದು ರಾಸುಗಳು ಸಾವನ್ನಪ್ಪಿದ್ದು, ಪಶುಸಂಗೋಪನಾ ಸಚಿವರು ಹೇಳಿದಂತೆ ಅಧಿಕಾರಿಗಳು ಕೂಡಲೇ ಪರಿಹಾರದ ಚೆಕ್ ನೀಡುವಂತೆ ಕೂತನೂರು ಗ್ರಾಮದ ಸಂತ್ರಸ್ತರು ಪಶು ಇಲಾಖೆಯ ಕಚೇರಿಗೆ ಮುತ್ತಿಗೆ ಹಾಕಿ ಒತ್ತಾಯಿಸಿದ ಘಟನೆ ನಡೆದಿದೆ.
ಎ.23ರಂದು ತಾಲೂಕಿನ ಕೂತನೂರು ಗ್ರಾಮದಲ್ಲಿ ಜಿಲ್ಲಾಡಳಿತದ ಮೇವು ಕೇಂದ್ರದಿಂದ ಖರೀದಿಸಿದ ಮೇವು ತಿಂದ 6 ಹಸುಗಳು ಮೃತಪಟ್ಟಿದ್ದವು. ಎ.26ರಂದು ಪಶುಸಂಗೋಪನಾ ಸಚಿವ ಎ.ಮಂಜು ಗ್ರಾಮಕ್ಕೆ ಭೇಟಿ ನೀಡಿ ಸಂತ್ರಸ್ತರಿಗೆ ಪಶು ಭಾಗ್ಯ ಯೋಜನೆಯಡಿ ಹಸುಗಳು ಹಾಗೂ 10 ಸಾವಿರ ರೂ. ಚೆಕ್ ವಿತರಿಸುವಂತೆ ಆದೇಶ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪಟ್ಟಣದ ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಚನ್ನಬಸಪ್ಪ ಅವರ ಕಚೇರಿಗೆ ಆಗಮಿಸಿದ ಸಂತ್ರಸ್ತರು ಪರಿಹಾರದ ಚೆಕ್ ನೀಡುವಂತೆ ಮನವಿ ಮಾಡಿದರು.
ಇದನ್ನು ಒಪ್ಪದ ಅಧಿಕಾರಿಗಳು ಸಚಿವರು ಬಾಯಿಮಾತಿನಲ್ಲಿ ಹೇಳಿದ ಮಾತ್ರಕ್ಕೆ ಚೆಕ್ ನೀಡಲಾಗುವುದಿಲ್ಲ. ಸರ್ಕಾರದಿಂದ ಈ ಬಗ್ಗೆ ಆದೇಶ ಬರಬೇಕು ಎಂದು ಉತ್ತರ ನೀಡಿದ್ದಾರೆ. ಇದರಿಂದ ಕೆರಳಿದ ಸಂತ್ರಸ್ತ ಮಹಿಳೆಯರು ಸಚಿವರ ಎದುರು ಒಪ್ಪಿಕೊಂಡು ಈಗ ನಿರಾಕರಿಸುತ್ತಿದ್ದೀರಿ. ಸಾಧ್ಯವಿಲ್ಲ ಎಂದಾದರೆ ಅಲ್ಲಿಯೇ ಹೇಳಬೇಕಾಗಿತ್ತು. ನಿಮ್ಮನ್ನು ಹಾಗೂ ಸಚಿವರನ್ನು ನಾವು ಬರಲು ಹೇಳಿದ್ದೇವಾ? ಎಂದು ತರಾಟೆಗೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಸ್ವಲ್ಪಹೊತ್ತು ಗೊಂದಲದ ವಾತಾವರಣ ನಿರ್ಮಾಣವಾಯಿತು.
ಈ ಸಂದರ್ಭದಲ್ಲಿ ಪಶುಸಂಗೋಪನಾ ಇಲಾಖೆಯ ಇಲಾಖೆಯ ಉಪನಿರ್ದೇಶಕ ಬಾಲಸುಂದರ್ ಆಗಮಿಸಿ ಹಸುಗಳ ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಸರ್ಕಾರಕ್ಕೆ ಕಳಿಸಲಾಗುವುದು. ಆನಂತರ ಬರುವ ಆದೇಶದಂತೆ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಂತ್ರಸ್ತರನ್ನು ಸಮಾಧಾನಪಡಿಸಿದರು.







