ಸಾರ್ವತ್ರಿಕ ಚುನಾವಣೆಯಲ್ಲಿ ಬೇರೆ ಪಕ್ಷದೊಂದಿಗೆ ಮೈತ್ರಿ ಮಾಡಲ್ಲ: ಎಚ್.ಡಿ.ದೇವೇಗೌಡ

ಮೈಸೂರು, ಎ.28: ಯಾವುದೇ ಕಾರಣಕ್ಕೂ 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಅಥವಾ ಯಾವುದೇ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಎಲ್ಲ 224 ಕ್ಷೇತ್ರಗಳಲ್ಲಿ ಸ್ವತಂತ್ರ ಸ್ಪರ್ಧೆ ಮಾಡ್ತೀವಿ. ಆರ್ಥಿಕ ಸಂಕಷ್ಟದಿಂದ ಮಾತ್ರ ನಂಜನಗೂಡು ಮತ್ತು ಗುಂಡ್ಲುಪೇಟೆ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ. ಇದರರ್ಥ ಕಾಂಗ್ರೆಸ್ ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದೇವೆ ಎಂದಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ಮೈಸೂರು ರಸ್ತೆಯ ಎಸ್‌ಡಿಎಂ ಆಯುರ್ವೇದ ಆಸ್ಪತ್ರೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕುಮಾರಸ್ವಾಮಿ ಈಗಾಗಲೇ ಸಿಎಂ ಆಗಿ ಏನು ಮಾಡಬಲ್ಲೆ ಎಂದು ತೋರಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಅವರು 115 ಸೀಟುಗಳನ್ನು ಗೆಲ್ಲಬೇಕು. ಆಗಷ್ಟೇ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಲು ಸಾಧ್ಯ ಎಂದರು.
"ರೇವಣ್ಣ ಎಂದೂ ನನಗೆ ವಿರುದ್ಧವಾಗಿ ನಡೆದಿಲ್ಲ. ನನಗಾಗಿ ಏನು ಮಾಡಲೂ ಅವನು ಸಿದ್ಧ. ಕುಮಾರಸ್ವಾಮಿಯವರಲ್ಲಿ ನಾಯಕತ್ವದ ಗುಣಗಳಿಗೆ. ನಾನು ಇರುವ ತನಕ ರಾಜಕೀಯ ಕಾರಣಕ್ಕೆ ನಮ್ಮ ಕುಟುಂಬ ಒಡೆಯಲು ಬಿಡುವುದಿಲ್ಲ. ನನ್ನ ಮಾತನ್ನು ಮೀರಿ ನಮ್ಮ ಕುಟುಂಬದಲ್ಲಿ ಯಾವುದೇ ರಾಜಕೀಯ ನಿರ್ಣಯವಾಗಲ್ಲ. ಯಜಮಾನನಾಗಿ ಅಂತಿಮ ನಿರ್ಧಾರ ನನ್ನದೇ ಎಂದರು.
ಸಮ್ಮಿಶ್ರ ಸರಕಾರ ಬೇಡ:
ನಮಗೆ ಸಮ್ಮಿಶ್ರ ಸರಕಾರ ಬೇಡ. ಎರಡೂ ರಾಷ್ಟ್ರೀಯ ಪಕ್ಷಗಳು ದ್ರೋಹ ಮಾಡಿವೆ. ಕರ್ನಾಟಕ ಅಭಿವೃದ್ಧಿಯಾಗಬೇಕಾದರೆ ಪ್ರಾದೇಶಿಕ ಪಕ್ಷಗಳಿಂದ ಮಾತ್ರ ಸಾಧ್ಯ. ರಾಷ್ಟ್ರೀಯ ಪಕ್ಷಗಳಿಂದ ಇದು ಸಾಧ್ಯವಿಲ್ಲ ಎಂದರು.
"ಎಚ್.ವಿಶ್ವನಾಥ್ ಬಗ್ಗೆ ನನಗೆ ಗೌರವ ಇದೆ. ಬೇಷರತ್ತಾಗಿ ಯಾರೇ ಪಕ್ಷ ಸೇರಿದರೂ ಸ್ವಾಗತ. ಈಗಾಗಲೇ ವಿಶ್ವನಾಥ್ ಬಳಿ ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ಮಾತನಾಡಿದ್ದಾರೆ. ಅವರು ನಮ್ಮೊಂದಿಗೇ ಇರುತ್ತಾರೆ ಎಂದೂ ಹೇಳಿದ್ದಾರೆ. ನಾನು ಅವರ ಪಕ್ಷವನ್ನು ಒಡೆಯಲು ಹೋಗುವುದಿಲ್ಲ. ಆದರೆ ಕುಮಾರಸ್ವಾಮಿಯವರೂ ವಿಶ್ವನಾಥ್ ಜತೆ ಸಂಪರ್ಕದಲ್ಲಿ ಇದ್ದಾರೆ" ಎಂದರು.
ರಾಷ್ಟ್ರಪತಿ ಹುದ್ದೆಯ ರೇಸ್ ನಲ್ಲಿ ನಾನಿಲ್ಲ: ರಾಷ್ಟ್ರಪತಿ ಹುದ್ದೆಯ ರೇಸ್ ನಲ್ಲಿ ನಾನಿಲ್ಲ. ಅದು ಯಾವ ರೀತಿ ಸುದ್ದಿ ಆಗಿದಿಯೋ ತಿಳಿದಿಲ್ಲ. ಇದು ಗಂಭೀರ ಚರ್ಚೆಯೋ ಅಥವಾ ಸುಳ್ಳು ಸುದ್ದಿಯೋ ಎಂದು ನಾನು ತಲೆಕೆಡಿಸಿಕೊಂಡಿಲ್ಲ. ನಾನಂತೂ ದಿಲ್ಲಿಗೆ ಹೋಗುವುದಿಲ್ಲ. ನನಗೆ ರಾಜ್ಯದ ಹಿತ ಮುಖ್ಯ. ರಾಜ್ಯದಲ್ಲಿ ಜೆಡಿಎಸ್ ನ್ನು ಅಧಿಕಾರಕ್ಕೆ ತರುವುದೇ ನನ್ನ ಆಶಯ ಎಂದು ಇದೇ ಸಂದರ್ಭ ದೇವೇಗೌಡ ಹೇಳಿದರು.







