ಇಂಜಿನಿಯರಿಂಗ್‌ಗೆ ಸಿಇಟಿ : ರಾಜ್ಯಗಳ ವಿರೋಧ

ಹೊಸದಿಲ್ಲಿ, ಎ.28: ರಾಜ್ಯಗಳು ಒಮ್ಮತದ ನಿರ್ಧಾರಕ್ಕೆ ಬರುವವರೆಗೆ ಇಂಜಿನಿಯರಿಂಗ್ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಸದಿರಲು ನಿರ್ಧರಿಸಲಾಗಿದೆ ಎಂದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಸಮಿತಿ(ಎಐಸಿಟಿಇ) ತಿಳಿಸಿದೆ.
‘ನೀಟ್ ’ ಮಾದರಿಯಲ್ಲಿ ಇಂಜಿನಿಯರಿಂಗ್ ಕೋರ್ಸ್‌ಗಳಿಗೆ ಪ್ರತ್ಯೇಕ ಪ್ರವೇಶ ಪರೀಕ್ಷೆ ನಡೆಸುವುದಾಗಿ ಮಾರ್ಚ್‌ನಲ್ಲಿ ಎಐಸಿಟಿಇ ಘೋಷಿಸಿತ್ತು. ಆದರೆ ಇದಕ್ಕೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಸಹಮತ ಸೂಚಿಸಿರಲಿಲ್ಲ. ಒಮ್ಮತ ಮೂಡುವವರೆಗೆ ಈ ನಿರ್ಧಾರವನ್ನು ತಡೆಹಿಡಿಯಲಾಗಿದೆ ಎಂದು ಹಿರಿಯ ಅಧಿಕಾರಿಯೋರ್ವರು ತಿಳಿಸಿದ್ದಾರೆ.
2018ರ ಶೈಕ್ಷಣಿಕ ವರ್ಷದಿಂದ ಎಲ್ಲಾ ಇಂಜಿನಿಯರಿಂಗ್ ಸಂಸ್ಥೆಗಳಿಗೆ ಒಂದೇ ರೀತಿಯ ಪ್ರವೇಶ ಪರೀಕ್ಷೆ ನಡೆಸುವ ನಿರ್ಧಾರವನ್ನು ಪಶ್ಚಿಮ ಬಂಗಾಲ ಮತ್ತು ತಮಿಳುನಾಡು ಸರಕಾರಗಳು ವಿರೋಧಿಸಿದ್ದು ಈ ನಿರ್ಧಾರವನ್ನು ರದ್ದುಗೊಳಿಸುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದವು. ಈ ನಿರ್ಧಾರವನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿ ಪಶ್ಚಿಮ ಬಂಗಾಲ ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಕೇಂದ್ರ ಮಾನವ ಸಂಪನ್ಮೂಲ ಸಚಿವರಿಗೆ ಪತ್ರ ಬರೆದಿದ್ದರು. ಪ.ಬಂಗಾಲ ಜಂಟಿ ಪ್ರವೇಶ ಪರೀಕ್ಷಾ ಮಂಡಳಿ ಈಗ ರಾಜ್ಯದಲ್ಲಿ ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆ ನಡೆಸುತ್ತಿದೆ. ಈಗ ಈ ಪ್ರಕ್ರಿಯೆಯಲ್ಲಿ ಯಾವುದೇ ಸಮಸ್ಯೆ ಇದಿರಾಗಿಲ್ಲ. ಹಾಗಿರುವಾಗ ಕೇಂದ್ರ ಸರಕಾರ ಈ ವ್ಯವಸ್ಥೆಯನ್ನು ರದ್ದುಪಡಿಸಲು ಕಾರಣವೇನು ಎಂದವರು ಪತ್ರದಲ್ಲಿ ಪ್ರಶ್ನಿಸಿದ್ದರು.
ಹಲವು ರಾಜ್ಯಗಳು ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆ ನಡೆಸುತ್ತಿರುವುದರ ಜೊತೆಗೆ ಸಿಬಿಎಸ್‌ಇ ಜೆಇಇ ಮೈನ್ ಪರೀಕ್ಷೆ ನಡೆಸುತ್ತದೆ. 11 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಪರೀಕ್ಷೆ ಬರೆಯುತ್ತಾರೆ. ದೇಶದ ಹಲವಾರು ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮದೇ ಆದ ಪ್ರತ್ಯೇಕ ಪ್ರವೇಶ ಪರೀಕ್ಷೆ ವ್ಯವಸ್ಥೆ ಹೊಂದಿದೆ. ದೇಶದಲ್ಲಿ ವಿವಿಗೆ ಸಂಯೋಜಿತವಾಗಿರುವ 3,300ಕ್ಕೂ ಹೆಚ್ಚು ಅನುಮೋದಿತ ಇಂಜಿನಿಯರಿಂಗ್ ಕಾಲೇಜುಗಳಿದ್ದು ಪ್ರತೀ ವರ್ಷ ಸುಮಾರು 16 ಲಕ್ಷ ವಿದ್ಯಾರ್ಥಿಗಳು ದಾಖಲಾಗುತ್ತಿದ್ದಾರೆ.







