ದೇಶದ ಪ್ರಪ್ರಥಮ ಸ್ಮಾರ್ಟ್ ಹೈವೆ ಆಗಸ್ಟ್‌ನಲ್ಲಿ ಪೂರ್ಣ: ನಿತಿನ್ ಗಡ್ಕರಿ

ಹೊಸದಿಲ್ಲಿ, ಎ.28: ದೇಶದ ಪ್ರಪ್ರಥಮ ಸ್ಮಾರ್ಟ್ ಮತ್ತು ಹಸಿರು ಹೆದ್ದಾರಿ- ‘ಈಸ್ಟರ್ನ್ ಪೆರಿಫೆರಲ್ ಎಕ್ಸ್‌ಪ್ರೆಸ್‌ವೇ’ ಈ ವರ್ಷದ ಆಗಸ್ಟ್‌ನಲ್ಲಿ ಪೂರ್ಣಗೊಳ್ಳಲಿದೆ ಎಂದು ರಸ್ತೆ ಸಾರಿಗೆ ಮತ್ತು ಹೆ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
135 ಕಿ.ಮೀ ಉದ್ದದ 6 ಪಥಗಳ ಈ ಹೆದ್ದಾರಿಯನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಲಿದ್ದಾರೆ ಎಂದವರು ತಿಳಿಸಿದ್ದಾರೆ. ಈ ಯೋಜನೆಗೆ ಅಗತ್ಯವಿದ್ದ ಭೂಮಿಯ ಸ್ವಾಧೀನಕ್ಕಾಗಿಯೇ 5,900 ಕೋಟಿ ರೂ. ವ್ಯಯಿಸಲಾಗಿದೆ. ಸೇವೆಗೆ ಸಿದ್ದಗೊಂಡ ಬಳಿಕ ದಿಲ್ಲಿಯ ಸಾರಿಗೆ ದಟ್ಟಣೆ ಗಮನಾರ್ಹವಾಗಿ ಕಡಿಮೆಯಾಗಲಿದೆ. ಹೆದ್ದಾರಿಯ ಅಂಚಿನಲ್ಲಿ ಕನಿಷ್ಟ 2.5 ಲಕ್ಷ ಗಿಡಗಳನ್ನು ನೆಡಲಾಗುತ್ತದೆ ಮತ್ತು ದಾರಿ ದೀಪಗಳಿಗೆ ಸೌರವಿದ್ಯುತ್ ವ್ಯವಸ್ಥೆ ಇರುತ್ತದೆ. ಸ್ವಯಂಚಾಲಿತ ಸಂಚಾರ ನಿಯಂತ್ರಣ ವ್ಯವಸ್ಥೆಯ ಜೊತೆಗೆ ಹೆದ್ದಾರಿಯುದ್ದಕ್ಕೂ ಪೆಟ್ರೋಲ್ ಪಂಪ್, ಅಂಗಡಿ ಮತ್ತಿತರ ಸೌಲಭ್ಯ ಇರಲಿದೆ ಎಂದು ಗಡ್ಕರಿ ತಿಳಿಸಿದರು.
ಹೆದ್ದಾರಿಯು ‘ಒಪ್ಪವಾದ ಮತ್ತು ಜಾಣತನದ ಹೆದ್ದಾರಿ ಸಾರಿಗೆ ನಿಯಂತ್ರಣ ವ್ಯವಸ್ಥೆ(ಎಚ್‌ಟಿಎಂಎಸ್) ಮತ್ತು ಘಟನಾವಳಿಯ ಪತ್ತೆ ಹಚ್ಚುವ ವೀಡಿಯೊ ವ್ಯವಸ್ಥೆ ಹೊಂದಿದ್ದು ನಿಕಟ ಸುಂಕ ವ್ಯವಸ್ಥೆ ಹೊಂದಿರುತ್ತದೆ. ಈ ಪ್ರಕಾರ, ವಾಹನವೊಂದು ಈ ರಸ್ತೆಯಲ್ಲಿ ಸಾಗಿದ ದೂರವನ್ನು ಆಧರಿಸಿ ಸುಂಕ ವಸೂಲು ಮಾಡಲಾಗುವುದು ಎಂದು ಗಡ್ಕರಿ ತಿಳಿಸಿದರು. ಪರಿಸರ ಸ್ನೇಹಿ ಮತ್ತು ವಿಶ್ವದರ್ಜೆಯ ಸುರಕ್ಷಾ ಕ್ರಮಗಳನ್ನು ಈ ಹೆದ್ದಾರಿ ಹೊಂದಿರುತ್ತದೆ. ಪ್ರತೀ ದಿನ ದಿಲ್ಲಿಯ ಮೂಲಕ ಸಾಗುವ ಸುಮಾರು 2 ಲಕ್ಷ ವಾಹನಗಳನ್ನು ಬೈಪಾಸ್ ರಸ್ತೆ ಮೂಲಕ ಈ ಹೆದ್ದಾರಿಗೆ ಜೋಡಿಸುವ ಗ್ರೀನ್‌ಫೀಲ್ಡ್ ಯೋಜನೆಗೆ 2015ರ ನವೆಂಬರ್ 5ರಂದು ಪ್ರಧಾನಿ ಮೋದಿ ಶಿಲಾನ್ಯಾಸ ಮಾಡಿದ್ದರು. ಹಲವಾರು ಅಡೆತಡೆಗಳನ್ನು ನಿವಾರಿಸಿಕೊಂಡು ಈಗ ಅಂತಿಮ ಘಟ್ಟ್ಕೆ ಬಂದಿದೆ ಎಂದು ಗಡ್ಕರಿ ತಿಳಿಸಿದರು.
ವಾಹನ ಚಾಲಕರಿಗೆ ತೊಂದರೆಯಾಗದ ರೀತಿಯಲ್ಲಿ ಕ್ಷಿಪ್ರ ವಿದ್ಯುನ್ಮಾನ ಸುಂಕ ವಸೂಲಿ ವ್ಯವಸ್ಥೆಯನ್ನು ಇಲ್ಲಿ ಅಳವಡಿಸಲಾಗುತ್ತದೆ . ಹೆದ್ದಾರಿಯುದ್ದಕ್ಕೂ ಪೆಟ್ರೋಲ್ ಪಂಪ್‌ಗಳು, ಮೋಟೆಲ್‌ಗಳು, ವಿಶ್ರಾಂತಿ ಕೋಣೆ, ರೆಸ್ಟಾರೆಂಟ್, ಅಂಗಡಿ, ದುರಸ್ತಿ ಸೇವಾ ಕೇಂದ್ರಗಳನ್ನು ಆರಂಭಿಸಲಾಗುವುದು ಎಂದು ಗಡ್ಕರಿ ತಿಳಿಸಿದರು. ದಿಲ್ಲಿ, ಉ.ಪ್ರದೇಶ ಮತ್ತು ಹರ್ಯಾನಾದಲ್ಲಿ ನಡೆಯುತ್ತಿರುವ ಯೋಜನೆಯ ಕಾಮಗಾರಿಯನ್ನು ಅವರು ವೀಕ್ಷಿಸಿದರು.







