ಮಂಗಳೂರಿನ ‘ಸಿಎಫ್‌ಎಎಲ್’ ವಿದ್ಯಾರ್ಥಿಗಳಿಗೆ ಜೆಇಇ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ

ಮಂಗಳೂರು, ಎ.28: ನಗರದ ಬಿಜೈ ಕಾಪಿಕಾಡ್‌ನಲ್ಲಿರುವ ಸೆಂಟರ್ ಫಾರ್ ಅಡ್ವಾನ್ಸ್‌ಡ್ ಲರ್ನಿಂಗ್ (ಸಿಎಫ್‌ಎಎಲ್) ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಜಾಯಿಂಟ್ ಎಂಟ್ರೆನ್ಸ್ ಎಕ್ಸಾಮ್ (ಜೆಇಇ ಮೈನ್ಸ್) ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದಾಖಲಿಸಿದ್ದಾರೆ ಎಂದು ಸಂಸ್ಥೆಯ ಪ್ರಾಂಶುಪಾಲೆ ಸೆವರಿನ್ ರೊಝಾರಿಯೊ ತಿಳಿಸಿದ್ದಾರೆ.
ಶುಕ್ರವಾರ ಸಂಸ್ಥೆಯ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಿಎಫ್‌ಎಎಲ್ ಸಂಸ್ಥೆಯ ಸುಮಾರು 65 ವಿದ್ಯಾರ್ಥಿಗಳು ಜೆಇಇ ಮೈನ್ಸ್ ಪರೀಕ್ಷೆ ಬರೆಯಲು ಆಯ್ಕೆಯಾಗಿದ್ದಾರೆ. ಆ ಪೈಕಿ ಆದಿತ್ಯ ಉಪಾಧ್ಯಾಯ 264 ಅಂಕದೊಂದಿಗೆ ಉತ್ತಮ ಫಲಿತಾಂಶ ದಾಖಲಿಸಿದ್ದಾರೆ. ಆ ಮೂಲಕ ರಾಜ್ಯದ ಟಾಪರ್ಸ್ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದಾರೆ ಎಂದರು.
ಒಟ್ಟು 360 ಅಂಕಗಳಲ್ಲಿ ಸಂಸ್ಥೆಯ 13 ವಿದ್ಯಾರ್ಥಿಗಳು 200ಕ್ಕೂ ಅಧಿಕ ಅಂಕ ಪಡೆದು ಗಮನ ಸೆಳೆದಿದ್ದಾರೆ. ಅದರಲ್ಲಿ ವಿ.ಎ. ಆದಿತ್ಯ ಉಪಾಧ್ಯಾಯ 264, ಸುಶ್ರುತ್ ವಿ. 247, ಜೆಲ್ವಿನ್ ರಾಡ್ರಿಗಸ್ 240, ಚೈತನ್ಯಾ ಕೃಷ್ಣಮೂರ್ತಿ 239, ವರುಣ್ ಕುಮಾರ್ ಎಂ. 235, ಅಶ್ವಿನ್ ಅಶೋಕನ್ ವನ್ನರ್ತ್ 227, ಭವಿಷ್ ಕೆ. 226, ಶಷಾಂಕ ಕಟ್ಟ 226, ವಿಶ್ರುತ್ ಶ್ಯಾಮ್‌ಭಟ್ 221, ದೀಕ್ಷಾ ಎಂ.ಎಸ್. 219, ಚಿನ್ಮಯ್ ಎಚ್.ಎನ್. 216, ಅರ್ಜುನ್ ಪಿಲಿಕುಡಲೆ 205, ರಂಜನಾ ಬಿ. ಕಸಂಗೇರಿ 204 ಅಂಕಗಳು ಪಡೆದಿದ್ದಾರೆ.
ಮೇ 21ರಂದು ನಡೆಯುವ ಜೆಇಇ ಅಡ್ವಾನ್ಸ್‌ಡ್ ಪರೀಕ್ಷೆ ಬರೆಯಲು ಈ ವಿದ್ಯಾರ್ಥಿಗಳ ಸಹಿತ ಸಂಸ್ಥೆಯ ಶೇ.80 ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ ಎಂದು ಸೆವರಿನ್ ರೊಝಾರಿಯೊ ಹೇಳಿದರು.
200ಕ್ಕೂ ಅಧಿಕ ಅಂಕ ಪಡೆದ ಸಂಸ್ಥೆಯ 13 ವಿದ್ಯಾರ್ಥಿಗಳು ಕೆಲಸಕ್ಕಾಗಿ ಅಲೆದಾಡಬೇಕಾಗಿಲ್ಲ. ವಿದ್ಯಾರ್ಹತೆಗೆ ತಕ್ಕಂತೆ ಸಕಾಲದಲ್ಲಿ ಇವರಿಗೆ ಉದ್ಯೋಗ ಲಭಿಸಲಿದೆ. ಮಂಗಳೂರಿನಲ್ಲಿ ಜೆಇಇ ಪರೀಕ್ಷೆಯ ಬಗ್ಗೆ ಹೆಚ್ಚಿನ ಜಾಗೃತಿ ಇಲ್ಲ. ಈ ನಿಟ್ಟಿನಲ್ಲಿ ಸಂಸ್ಥೆಯು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ ಎಂದರು.
2017ನೆ ಸಾಲಿನಲ್ಲಿ ದೇಶ-ವಿದೇಶಗಳ 109 ನಗರಗಳಲ್ಲಿ ಸುಮಾರು 10 ಲಕ್ಷ ವಿದ್ಯಾರ್ಥಿಗಳು 2 ಸಾವಿರ ಕೇಂದ್ರಗಳಲ್ಲಿ ನಡೆದ ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ಜೆಇಇ ಮೈನ್ ಪರೀಕ್ಷೆ ಬರೆದಿದ್ದರು. ಆ ಪೈಕಿ 2.2 ಲಕ್ಷ ವಿದ್ಯಾರ್ಥಿಗಳು ಜೆಇಇ ಅಡ್ವಾನ್ಸ್‌ಡ್ ಪರೀಕ್ಷೆ ಬರೆಯಲು ಅರ್ಹತೆ ಪಡೆದಿದ್ದಾರೆ ಎಂದರು.
ಕಾಲೇಜಿಗೆ ಹೋಗದೆ ಕಲಿತ ಆದಿತ್ಯ
ಜೆ ಇಇ ಮೈನ್ಸ್ ಪರೀಕ್ಷೆಯಲ್ಲಿ ಮಂಗಳೂರಿಗೆ ಪ್ರಥಮ ಸ್ಥಾನ ಪಡೆದಿರುವ ಆದಿತ್ಯ ಉಪಾಧ್ಯಾಯ ಪಿಯುಸಿಗೆ ಯಾವುದೇ ಕಾಲೇಜಿಗೆ ಸೇರದೆ ನ್ಯಾಷನಲ್ ಇನ್ಸ್ಟಿ ಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ ( ಎನ್ ಐಒಎಸ್ ) ಮೂಲಕ ದೂರ ಶಿಕ್ಷಣ ಪಡೆದಿದ್ದರು. ಈಗ ಅವರು ರಾಜ್ಯ ಪಠ್ಯ, ಸಿಬಿಎಸ್ಸಿ ಪಠ್ಯ ಹಾಗೂ ಇತರೆಲ್ಲ ಪಠ್ಯಗಳನ್ನು ಕಾಲೇಜಿಗೆ ಹೋಗಿ ಕಲಿಯುವ ಉಳಿದೆಲ್ಲ ವಿದ್ಯಾರ್ಥಿಗಳಿಗಿಂತ ಹೆಚ್ಚಿನ ಅಂಕಗಳನ್ನು ಪಡೆದು ಜೆಇಇ ಅಡ್ವಾನ್ಸ್ಡ್ ಪರೀಕ್ಷೆಗೆ ಆಯ್ಕೆಯಾಗಿದ್ದಾರೆ.







