ಇಸ್ರೇಲ್‌ನಲ್ಲಿ ಕೈದಿಗಳ ಉಪವಾಸ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿ ಫೆಲೆಸ್ತೀನ್ ಬಂದ್

ರಮಲ್ಲಾ (ಫೆಲೆಸ್ತೀನ್), ಎ. 28: ಇಸ್ರೇಲ್‌ನ ಜೈಲುಗಳಲ್ಲಿರುವ ಫೆಲೆಸ್ತೀನ್ ಕೈದಿಗಳು 11 ದಿನಗಳಿಂದ ನಡೆಸುತ್ತಿರುವ ಉಪವಾಸ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿ ಫೆಲೆಸ್ತೀನೀಯರು ಗುರುವಾರ ದೇಶವ್ಯಾಪಿ ಬಂದ್ ಆಚರಿಸಿದರು.ಐವತ್ತು ವರ್ಷಗಳಿಗೂ ಅಧಿಕ ಅವಧಿಯಿಂದ ಇಸ್ರೇಲ್ ಆಕ್ರಮಿಸಿಕೊಂಡಿರುವ ಪಶ್ಚಿಮ ದಂಡೆಯಾದ್ಯಂತ ಅಂಗಡಿಗಳು ಮುಚ್ಚಿದ್ದವು ಹಾಗೂ ರಸ್ತೆಗಳು ನಿರ್ಜನವಾಗಿದ್ದವು.
ರಮಲ್ಲಾದಲ್ಲಿ ನೂರಾರು ಮಂದಿ ಪ್ರತಿಭಟನಾ ಮೆರವಣಿಗೆಗಳನ್ನು ಏರ್ಪಡಿಸಿದರು.ಇಸ್ರೇಲಿ ಸೇನಾ ತಪಾಸಣಾ ಠಾಣೆಯೊಂದರ ದಿಕ್ಕಿನತ್ತ ಪ್ರತಿಭಟನಾಕಾರರು ಮೆರವಣಿಗೆಯಲ್ಲಿ ಸಾಗಿದರು. ಆದರೆ, ಅವರು ಅಲ್ಲಿಗೆ ತಲುಪುವ ಸಾಕಷ್ಟು ಮೊದಲೇ ಫೆಲೆಸ್ತೀನಿ ಭದ್ರತಾ ಪಡೆಗಳು ಅವರನ್ನು ತಡೆದವು.
ಅವರ ಪೈಕಿ ಕೆಲವರು ಫೆಲೆಸ್ತೀನ್ ಪೊಲೀಸರನ್ನು ನಿವಾರಿಸಿಕೊಂಡು ಇಸ್ರೇಲ್ ಗಡಿ ಠಾಣೆಯತ್ತ ಧಾವಿಸಿ ಇಸ್ರೇಲಿ ಸೈನಿಕರತ್ತ ಕಲ್ಲು ತೂರಾಟ ನಡೆಸಿದರು. ಇಸ್ರೇಲ್ ಸೈನಿಕರು ಅಶ್ರುವಾಯು ಸಿಡಿಸಿ ಮತ್ತು ರಬ್ಬರ್ ಗುಂಡುಗಳನ್ನು ಹಾರಿಸಿ ಪ್ರತಿಭಟನಾಕಾರರನ್ನು ಚದುರಿಸಿದರು.
ರಮಲ್ಲಾದ ಹೊರವಲಯದಲ್ಲಿರುವ ಇಸ್ರೇಲ್‌ನ ಸಾಗೋಟ್ ಬಡಾವಣೆಯ ಸಮೀಪ ಪ್ರತಿಭಟನಕಾರರು ಮತ್ತು ಇಸ್ರೇಲ್ ಸೈನಿಕರ ನಡುವೆ ಘರ್ಷಣೆಗಳು ನಡೆದವು. ಯಾರಿಗೂ ಗಂಭೀರ ಪ್ರಮಾಣದಲ್ಲಿ ಗಾಯವಾಗಿಲ್ಲ.
‘‘ದೇಶವ್ಯಾಪಿ ಬಂದ್ ಇತ್ತೀಚಿನ ವರ್ಷಗಳಲ್ಲಿ ಹಿಂದೆಂದೂ ನಡೆದಿಲ್ಲ’’ ಎಂದು ಫೆಲೆಸ್ತೀನಿ ವಾಣಿಜ್ಯ ಸಂಸ್ಥೆಯ ಮುಖ್ಯಸ್ಥ ಖಲೀಲ್ ರಝಾಕ್ ಹೇಳುತ್ತಾರೆ.
‘‘ಸಾರಿಗೆ, ಬೇಕರಿ, ಅಂಗಡಿಗಳು ಸೇರಿದಂತೆ ಫೆಲೆಸ್ತೀನ್‌ನ ಎಲ್ಲ ಉದ್ದಿಮೆಗಳು ಬಂದ್‌ನಲ್ಲಿ ಭಾಗವಹಿಸಿವೆ’’ ಎಂದರು.
ನೀರು, ಉಪ್ಪು ಮಾತ್ರ ಸೇವಿಸುತ್ತಿರುವ ಕೈದಿಗಳುಕುಟುಂಬ ಸದಸ್ಯರ ಭೇಟಿಗೆ ಹೆಚ್ಚಿನ ಅವಕಾಶ ನೀಡಬೇಕು ಹಾಗೂ ಜೈಲಿನ ಆವರಣಗಳಲ್ಲಿ ಕೈದಿಗಳಿಗೆ ಟೆಲಿಫೋನ್ ಸಂಪರ್ಕ ಒದಗಿಸಬೇಕು ಎನ್ನುವುದು ಫೆಲೆಸ್ತೀನ್ ಕೈದಿಗಳ ಪ್ರಮುಖ ಬೇಡಿಕೆಯಾಗಿದೆ.
ಎಪ್ರಿಲ್ 17ರಿಂದ ಆರಂಭವಾಗಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹದಲ್ಲಿ ಸುಮಾರು 1,500 ಫೆಲೆಸ್ತೀನ್ ಕೈದಿಗಳು ಭಾಗವಹಿಸುತ್ತಿದ್ದಾರೆ ಎಂದು ಫೆಲೆಸ್ತೀನ್ ಅಧಿಕಾರಿಗಳು ಹೇಳುತ್ತಾರೆ.
ಮುಷ್ಕರ ನಿರತ ಕೈದಿಗಳು ನೀರು ಮತ್ತು ಉಪ್ಪು ಮಾತ್ರ ಸೇವಿಸುತ್ತಿದ್ದಾರೆ. ಸುಮಾರು 6,500 ಫೆಲೆಸ್ತೀನ್ ಕೈದಿಗಳು ಇಸ್ರೇಲ್‌ನ ಜೈಲುಗಳಲ್ಲಿದ್ದಾರೆ.







