ಮಹಿಳೆಯ ಆತ್ಮಹತ್ಯೆ ಪ್ರಕರಣ: ಶ್ರೀರಾಮಸೇನೆ ಕಾರ್ಯಕರ್ತ ಸಹಿತ ಮೂವರ ಬಂಧನ

ಕಾರ್ಕಳ, ಎ.28: ಕಾಂತಾವರ ಬಾಳೆಹಿತ್ಲುವಿನ ಸುರೇಖಾ ಪೂಜಾರಿ(28) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಸಾವಿಗೆ ಪ್ರಚೋದಿಸಿದ ಶ್ರೀ ರಾಮಸೇನೆಯ ಕಾರ್ಯಕರ್ತ ಸೇರಿದಂತೆ ಮೂವರನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಕಾರ್ಕಳ ಶ್ರೀರಾಮಸೇನೆಯ ಪ್ರಮುಖ ಕಾರ್ಯಕರ್ತ ರೋಶನ್ ಕೋಟ್ಯಾನ್(26), ಮೃತ ಸುರೇಖಾಳ ಪತಿಯ ಸಹೋದರ ಸಂತೋಷ್ ಅಮೀನ್ ಎಂಬವರ ಪತ್ನಿ ಶೋಭಾ(25), ಪತಿಯ ಅಕ್ಕ ಭಾರತಿ(38) ಎಂದು ಗುರುತಿಸಲಾಗಿದೆ.
ಮೂಡಬಿದ್ರಿ ಕೋಟೆಬಾಗಿಲು ಪ್ರಾಂತ್ಯ ನಿವಾಸಿ ಸಂಜೀವ ಸುವರ್ಣ ಎಂಬವರ ಪುತ್ರಿ ಸುರೇಖಾ ಐದು ವರ್ಷಗಳ ಹಿಂದೆ ಕಾಂತಾವರದ ಪ್ರಕಾಶ್ ಎಂಬವರೊಂದಿಗೆ ವಿವಾಹವಾಗಿದ್ದರು. ಈಕೆ ತನ್ನ ನಾಲ್ಕು ವರ್ಷದ ಮಗನೊಂದಿಗೆ ಕಾಂತಾವರದಲ್ಲಿರುವ ತನ್ನ ಗಂಡನ ಮನೆಯಲ್ಲಿ ವಾಸವಾಗಿದ್ದರು.
ಎ.25ರ ಅಪರಾಹ್ನ 2ಗಂಟೆ ಸುಮಾರಿಗೆ ಮನೆ ಸಮೀಪದ ಹಾಡಿಯ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ್ದ ಸುರೇಖಾ ಮೂಡಬಿದ್ರಿ ಆಳ್ವಾಸ್ ಆಸ್ಪತ್ರೆಗೆ ಸಾಗಿಸುತ್ತಿದ್ದ ದಾರಿ ಮಧ್ಯೆ ಮೃತಪಟ್ಟರು. ಆಕೆಯ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಆಕೆಯ ಸಹೋದರ ಸುರೇಶ್ ಪೂಜಾರಿ ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಮರಣಪತ್ರ ಪತ್ತೆ: ಸುರೇಖಾ ಮದುವೆಯಾಗಿ ಐದು ವರ್ಷಗಳಾದ ಕಾರಣ ಶವ ಮಹಜರನ್ನು ಉಡುಪಿ ತಾಲೂಕು ತಹಶೀಲ್ದಾರ್ ಮಣಿಪಾಲ ಕೆಎಂಸಿ ಆಸ್ಪತ್ರೆಯ ಶವಾಗಾರದಲ್ಲಿ ನಡೆಸುವ ವೇಳೆ ಸುರೇಖಾಳ ಉಡುಪಿನ ಒಳಗೆ ಮರಣಪತ್ರವೊಂದು ದೊರೆಯಿತು. ಅದರಲ್ಲಿ "ನನ್ನ ಸಾವಿಗೆ ಶೋಭಾ, ಭಾರತಿ, ರೋಶನ್ ನೀಡಿದ ಕಿರುಕುಳ ಮತ್ತು ಪ್ರಚೋದನೆಯೇ ಕಾರಣ" ಎಂಬುದಾಗಿ ಬರೆಯಲಾಗಿತ್ತು. ಅದರಂತೆ ಸುರೇಖಾರ ಸಹೋದರಿ ಪುಷ್ಪಾ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸರು ಈ ಮೂವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಶೋಭಾ, ಭಾರತಿ ಮತ್ತು ರೋಶನ್ ನಡುವಿನ ಅನೈತಿಕ ಸಂಬಂಧವನ್ನು ಕಣ್ಣಾರೆ ಕಂಡಿದ್ದ ಸುರೇಖಾ ಈ ವಿಚಾರವನ್ನು ತನ್ನ ಪತಿ ಜೊತೆ ಹೇಳಿಕೊಂಡಿ ದ್ದರು. ಇದು ಈ ಮೂವರ ಗಮನಕ್ಕೆ ಬಂದಿತ್ತು. ಅದೇ ಕಾರಣಕ್ಕೆ ಶೋಭಾ ಮತ್ತು ಭಾರತಿ ಕಾರ್ಕಳದಲ್ಲಿ ಮೊಬೈಲ್ ಅಂಗಡಿ ನಡೆಸುತ್ತಿದ್ದ ರೋಶನ್ ಮೂಲಕ ಸುರೇಖಾರಿಗೆ ಹಲವು ಬಾರಿ ಬೆದರಿಕೆ ಕರೆಯನ್ನು ಮಾಡಿಸಿದ್ದಾರೆ. ಈ ವಿಚಾರ ಬಹಿರಂಗ ಪಡಿಸಿದಲ್ಲಿ ಗಂಡ, ಮಗು ಸಹಿತ ಮೂವರನ್ನು ಕೊಲೆ ಮಾಡುವುದಾಗಿ ಆತ ಜೀವ ಬೆದರಿಕೆಯೊಡ್ಡಿ ಆತ್ಮಹತ್ಯೆಗೆ ಪ್ರಚೋದನೆ ನೀಡುತ್ತಿದ್ದನು. ಈ ಎಲ್ಲ ವಿಚಾರವನ್ನು ಆಕೆ ತನ್ನ ಮರಣಪತ್ರದಲ್ಲಿ ಉಲ್ಲೇಖ ಮಾಡಿ ದ್ದಾರೆ. ಅಲ್ಲದೆ ಆಕೆಯ ಮೊಬೈಲ್‌ಗೆ ಬರುತ್ತಿದ್ದ ಬೆದರಿಕೆ ಕರೆಗಳು ಮೊಬೈಲ್ ನಲ್ಲಿ ದಾಖಲಾಗಿವೆ ಎಂದು ತಿಳಿದುಬಂದಿದೆ.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ಟಿ. ಬಾಲಕೃಷ್ಣ ಅವರ ಆದೇಶದಂತೆ ಉಡುಪಿ ಡಿವೈಎಸ್ಪಿ ಕುಮಾರಸ್ವಾಮಿ ಮಾರ್ಗ ದರ್ಶನದಂತೆ ಕಾರ್ಕಳ ಪೊಲೀಸ್ ವೃತ್ತ ನಿರೀಕ್ಷಕ ಜಾಯ್ ಅಂತೋನಿ, ಕಾರ್ಕಳ ಗ್ರಾಮಾಂತರ ಠಾಣಾ ಪೊಲೀಸ್ ಉಪನಿರೀಕ್ಷಕರು ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು.

ಸುರೇಖಾ ಪೂಜಾರಿ







