ಜಾತಿ ನಿಂದನೆ: ಆರೋಪಿಗೆ 2 ವರ್ಷ ಸಜೆ
ಮಂಡ್ಯ, ಎ.28: ದಲಿತ ಮಹಿಳೆಯ ಜಾತಿ ನಿಂದನೆ ಮಾಡಿ, ಕೊಲೆಬೆದರಿಕೆ ಹಾಕಿದ್ದ ಆರೋಪಿಗೆ ಇಲ್ಲಿನ 1ನೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎರಡು ವರ್ಷ ಶಿಕ್ಷೆ ಹಾಗೂ 9,500 ರೂ. ದಂಡ ವಿಧಿಸಿದೆ.
ಮದ್ದೂರು ತಾಲೂಕು ಕೆಸ್ತೂರು ಪೊಲೀಸ್ ಠಾಣೆ ವ್ಯಾಪ್ತಿಯ ತೂಬಿನಕೆರೆ ಗ್ರಾಮದ ಬೂಸಿಗೌಡರ ಪುತ್ರ ವಿನೋದ್‌ಗೌಡ ಶಿಕ್ಷೆಗೊಳಗಾಗಿದ್ದು, ದಂಡದ ಹಣದಲ್ಲಿ 9 ಸಾವಿರ ರೂ.ಗಳನ್ನು ದಲಿತ ಮಹಿಳೆ ಎಸ್.ಕುಮಾರಿಗೆ ನೀಡುವಂತೆ ನ್ಯಾಯಾಧೀಶ ಟಿ.ಎನ್.ಇನವಳ್ಳಿ ಆದೇಶಿಸಿದ್ದಾರೆ.
2014ರ ಫೆ.4ರಂದು ತಾನು ಕೆಸ್ತೂರಿನ ದರ್ಗಾದ ರಸ್ತೆಯಲ್ಲಿ ವಾಕಿಂಗ್ ಹೋಗುತ್ತಿದ್ದಾಗ ವಿನೋದ್‌ಗೌಡ ಮೋಟಾರ್ ಬೈಕ್ ಅಡ್ಡನಿಲ್ಲಿಸಿದ್ದು, ಇದನ್ನು ಪ್ರಶ್ನಿಸಿದಾಗ ಜಾತಿ ನಿಂದನೆ ಮಾಡಿ, ಪಕ್ಕದ ಬೇಲಿ ಕಡೆಗೆ ಎಳೆದೊಯ್ಯಲು ಯತ್ನಿಸಿದ್ದಾನೆ. ತಾನು ಬೊಬ್ಬಿಟ್ಟಾಗ ಕೊಲೆಬೆದರಿಕೆ ಹಾಕಿ ಪರಾರಿಯಾಗಿದ್ದ ಎಂದು ಕುಮಾರಿ ಕೆಸ್ತೂರು ಠಾಣೆಗೆ ದೂರು ನೀಡಿದ್ದರು. ಎಎಸ್‌ಐ ಪುಟ್ಟಮಾದಪ್ಪ ಪ್ರಕರಣ ದಾಖಲಿಸಿಕೊಂಡು ಮಳವಳ್ಳಿ ಡಿವೈಎಸ್ಪಿಗಳಾದ ಎಚ್.ಆರ್.ಧರಣೇಂದ್ರ ಮತ್ತು ಕೆ.ಅಣ್ಣಪ್ಪನಾಯಕ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿದ್ದರು.
ವಾದವಿವಾದ ಆಲಿಸಿದ ನ್ಯಾಯಾಧೀಶರು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ ಎಂದು ಸರಕಾರಿ ಅಭಿಯೋಜಕ ಎಸ್.ಪೀರಜಾದೆ ತಿಳಿಸಿದ್ದಾರೆ.





