ಅಂತರ್ಜಾತಿ ವಿವಾಹದಿಂದ ಅಸ್ಪಶ್ಯತೆ ನಿವಾರಣೆ: ಕೆ.ಎಸ್.ಪುಟ್ಟಣ್ಣಯ್ಯ

ಮಂಡ್ಯ, ಎ.28: ದಲಿತ ಚಳುವಳಿ 70 ವರ್ಷ ತಲುಪಿದರೂ ಸಮಾನತೆಯ ಗುರಿ ತಲುಪಲು ಸಾಧ್ಯವಾಗಿಲ್ಲ. ಅಸ್ಪ್ರಶ್ಯತೆ ತೊಲಗಿಸಲು ಅಂತರ್ಜಾತಿ ವಿವಾಹಕ್ಕೆ ಒತ್ತುನೀಡಬೇಕೆಂದು ರೈತಸಂಘದ ವರಿಷ್ಠ ಹಾಗೂ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಸಲಹೆ ಮಾಡಿದ್ದಾರೆ.
ಮಳವಳ್ಳಿಯಲ್ಲಿ ನಡೆದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯಮಟ್ಟದ ಪದಾಧಿಕಾರಿಗಳ ಅಧ್ಯಯನ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆರ್ಥಿಕ ಸಮಾನತೆ ಬಂದರೆ ಜಾತಿಯತೆ ನಿವಾರಣೆಯಾಗುತ್ತದೆ ಎಂದರು.
ದೇಶವು ಪ್ರಜಾಪ್ರುತ್ವ ರಾಷ್ಟ್ರವಾಗಿ ಉಳಿದಿಲ್ಲ. ಜಾತಿ ಪ್ರಭುತ್ವ ರಾಷ್ಟ್ರವಾಗುತ್ತಿದೆ. ವೋಟಿಗಾಗಿ ಅಂಬೇಡ್ಕರ್ ಫೋಟೋ ಇಟ್ಟುಕೊಳ್ಳಲಾಗಿದೆ. ಮೌಲ್ಯಯುತ ರಾಜಕಾರಣಕ್ಕೆ ಬೆಲೆ ಕೊಡುತ್ತಿಲ್ಲ. ಕಾರ್ಪೋರೇಟ್ ಕುಳಗಳ ಕೋಟ್ಯಂತರ ಸಾಲಮನ್ನಾ ಮಾಡಿದ ಕೇಂದ್ರ ಸರಕಾರ, ಬ್ಯಾಂಕುಗಳು ದಿವಾಳಿಯಾಗುವುದನ್ನು ತಪ್ಪಿಸಲು ದೊಡ್ಡ ಮುಖಬೆಲೆಯ ನೋಟ್ ಅಮಾನ್ಯೀಕರಣಗೊಳಿಸಿ ಮಧ್ಯಮವರ್ಗದ ಜನರ 60 ಸಾವಿರ ಕೋಟಿ ರೂ.ಗಳನ್ನು ಲೂಟಿ ಮಾಡಿತು ಎಂದು ಆರೋಪಿಸಿದರು.
ದಲಿತ ಮತ್ತು ರೈತ ಚಳವಳಿಗಳು ರಾಜ್ಯದಲ್ಲಿ ದೊಡ್ಡ ಕ್ರಾಂತಿಯನ್ನು ಮಾಡಿದವು. ಆದರೆ, ಇಂದು ನಾನಾ ಕಾರಣಕ್ಕೆ ಚಳವಳಿಗಳು ಶಕ್ತಿ ಕಡಿಮೆಯಾಗಿದೆ. ಜನಸಾಮಾನ್ಯರ ಸಮಸ್ಯೆ ನಿವಾರಣೆಗೆ ಚಳವಳಿಗಳು ಅಗತ್ಯ ಎಂದು ಅವರು ಅಭಿಪ್ರಾಯಪಟ್ಟರು.
ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ, ದಲಿತ ಚಳವಳಿ ಭಾವನಾತ್ಮಕವಾಗಿ ಪ್ರತಿಯೊಬ್ಬರನ್ನು ಎದ್ದು ನಿಲ್ಲಿಸಿದಂತಹದ್ದು. ಆದರೆ, ಇಂದು ಒಡೆದು ನುಚ್ಚುನೂರಾಗಿರುವುದು ವಿಷಾದನೀಯ. ಹಲವರು ವೈಯಕ್ತಿಕ ಬದುಕನ್ನು ಮರೆತು ಸಂಘಟನೆಯನ್ನು ಕಟ್ಟಿ ಬೆಳೆಸುತ್ತಿದ್ದರೆ, ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಇವುಗಳನ್ನು ಒಡೆದು ಹಾಳುಗೆಡವುವಷ್ಟು ಪ್ರಬಲವಾಗಿದೆ ಎಂದರು.
ಅಂಬೇಡ್ಕರ್ ಪ್ರಶಸ್ತಿ ಪುರಸ್ಕೃತ ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು, ಚಿಂತಕರಾದ ಪ್ರೊ.ಕರೀಂವುದ್ದೀನ್ ಹಾಗೂ ಡಾ.ಲೀಲಾ ಅಪ್ಪಾಜಿ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು.
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಲಕ್ಷ್ಮೀನಾರಾಯಣ ನಾಗವಾರ, ತಾಪಂ ಅಧ್ಯಕ್ಷ ಆರ್.ಎನ್.ವಿಶ್ವಾಸ್, ಉಪಾಧ್ಯಕ್ಷ ಮಾಧು, ಡಿವೈಎಸ್‌ಪಿ ಮ್ಯಾಥೂಥಾಮಸ್, ಶಿವಕುಮಾರ್, ಸಾಗ್ಯ ಕೆಂಪಯ್ಯ, ರಮಾನಂದ, ಇತರ ಮುಖಂಡರು ಉಪಸ್ಥಿತರಿದ್ದರು.







