ದುಬೈಯಿಂದ ದಿಲ್ಲಿಗೆ ಬಂದಿಳಿದ ಪಾಕ್ ಪ್ರಜೆಯ ಮಾತು ಕೇಳಿ ವಿಮಾನ ನಿಲ್ದಾಣದ ಮಹಿಳಾ ಸಿಬ್ಬಂದಿ ದಂಗಾಗಿಬಿಟ್ಟರು !
ಆತ ತಣ್ಣಗೆ ಹೇಳಿದ್ದೇನು ಗೊತ್ತೇ ?

ಹೊಸದಿಲ್ಲಿ, ಎ.28: ದುಬೈಯಿಂದ ದಿಲ್ಲಿಯಲ್ಲಿರುವ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವಿಮಾನದಿಂದ ಇಳಿದ ವ್ಯಕ್ತಿಯೋರ್ವ- ಹಲೋ, ನಾನೋರ್ವ ಐಎಸ್‌ಐ ಏಜೆಂಟ್. ಆದರೆ ಇನ್ನು ಈ ಕೆಲಸ ಮುಂದುವರಿಸಲು ಮನಸಿಲ್ಲ. ಭಾರತದಲ್ಲೇ ಇರಲು ಬಯಸಿದ್ದೇನೆ ಎಂದು ಘೋಷಿಸಿದಾಗ ವಿಮಾನ ನಿಲ್ದಾಣದಲ್ಲಿದ್ದವರೆಲ್ಲಾ ಒಂದರೆಕ್ಷಣ ಕಕ್ಕಾಬಿಕ್ಕಿಯಾದರು.
ನಂತರ ವ್ಯಕ್ತಿ ಅಲ್ಲಿದ್ದ ಹೆಲ್ಪ್‌ಡೆಸ್ಕ್ ಬಳಿ ಹೋಗಿ ಅಲ್ಲಿದ್ದ ಯುವತಿಯ ಬಳಿ- ಪಾಕಿಸ್ತಾನದ ಬೇಹುಗಾರಿಕೆ ಪಡೆ ಐಎಸ್‌ಐ ಬಗ್ಗೆ ತನ್ನಲ್ಲಿ ಕೆಲವು ಮಾಹಿತಿಯಿದ್ದು ಇದನ್ನು ನಿನ್ನ ಬಳಿ ಹೇಳುತ್ತೇನೆ ಎಂದಾಗ ಹೆದರಿದ ಆಕೆ ತಕ್ಷಣವೇ ಭದ್ರತಾ ಅಧಿಕಾರಿಗೆ ವಿಷಯ ತಿಳಿಸಿದ್ದಾಳೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಭದ್ರತಾ ಪಡೆಯವರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಪಾಕಿಸ್ತಾನದ ಪ್ರಜೆಯಾಗಿರುವ ಮುಹಮ್ಮದ್ ಅಹ್ಮದ್ ಶೇಖ್ ಮುಹಮ್ಮದ್ ರಫಿಕ್ ದುಬೈಯಿಂದ ಕಾಠ್ಮಂಡುಗೆ ಪ್ರಯಾಣಿಸಲು ಟಿಕೆಟ್ ಮಾಡಿಸಿದ್ದ. ಆದರೆ ದಿಲ್ಲಿ ವಿಮಾನ ನಿಲ್ದಾಣದಲ್ಲಿ ಇಳಿದ ಆತ ತನ್ನ ಪ್ರಯಾಣ ಮೊಟಕುಗೊಳಿಸಿ ಭಾರತದಲ್ಲೇ ಇರಲು ನಿರ್ಧರಿಸಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದಾನೆ. ಇನ್ನಷ್ಟು ವಿವರ ಪಡೆಯಲು ಆತನ ವಿಚಾರಣೆಯನ್ನು ಅಜ್ಞಾತ ಸ್ಥಳದಲ್ಲಿ ಮುಂದುವರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.





