ಆರ್‌ಸಿಬಿಗೆ ಪುಣೆ ಸೂಪರ್ ಜೈಂಟ್ ಎದುರಾಳಿ

ಪುಣೆ, ಎ.28: ಐಪಿಎಲ್ ಪ್ಲೇ-ಆಫ್ ಸ್ಪರ್ಧೆಯಿಂದ ಹೊರಗುಳಿಯುವ ಭೀತಿಯಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಶನಿವಾರ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ತನ್ನಂತಯೇ ಅಸ್ಥಿರ ಪ್ರದರ್ಶನ ನೀಡುತ್ತಿರುವ ರೈಸಿಂಗ್ ಪುಣೆ ಸೂಪರ್‌ಜೈಂಟ್ ತಂಡವನ್ನು ಎದುರಿಸಲಿದೆ.
ಹಾಲಿ ಭಾರತದ ನಾಯಕ ವಿರಾಟ್ ಕೊಹ್ಲಿ ನೇತೃತ್ವದ ಆರ್‌ಸಿಪಿ ತಂಡ ಈವರೆಗೆ ಆಡಿರುವ 9 ಪಂದ್ಯಗಳ ಪೈಕಿ 6ರಲ್ಲಿ ಸೋತಿದೆ. ಕೇವಲ 5 ಅಂಕ ಗಳಿಸಿದೆ. ಕೊಹ್ಲಿ ಪಡೆಗೆ ಪ್ಲೇ-ಆಫ್ ಹಂತಕ್ಕೇರಬೇಕಾದರೆ ಇನ್ನುಳಿದ ಎಲ್ಲ 5 ಪಂದ್ಯಗಳನ್ನು ಗೆಲ್ಲಲೇಬೇಕು. ಇತರ ಪಂದ್ಯಗಳಲ್ಲಿ ತನ್ನ ಪರವಾದ ಫಲಿತಾಂಶ ಬರುವುದನ್ನು ನಿರೀಕ್ಷಿಸಬೇಕಾಗುತ್ತದೆ.
ಪುಣೆ ತಂಡ 8 ಪಂದ್ಯಗಳಲ್ಲಿ 4 ಜಯ ಸಾಧಿಸಿ 8 ಅಂಕ ಗಳಿಸಿದೆ. ಆದರೆ, ಪುಣೆ ತಂಡ ಟೂರ್ನಿಯಲ್ಲಿ ಅಸ್ಥಿರ ಪ್ರದರ್ಶನ ನೀಡುತ್ತಿದೆ. ಒಂದು ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದರೆ, ಮತ್ತೊಂದು ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡುತ್ತದೆ. ಆರ್‌ಸಿಬಿ ತಂಡದಲ್ಲಿ ವಿಶ್ವದರ್ಜೆಯ ದಾಂಡಿಗರಿದ್ದಾರೆ. ಹಾಗಾಗಿ ಆ ತಂಡವನ್ನು ಹಗುರವಾಗಿ ಪರಿಗಣಿಸುವಂತಿಲ್ಲ.
ಪುಣೆ ಬೌಲಿಂಗ್‌ನಲ್ಲಿ ಬೆನ್ ಸ್ಟೋಕ್ಸ್(6 ವಿಕೆಟ್), ಇಮ್ರಾನ್ ತಾಹಿರ್(10 ವಿಕೆಟ್), ಜಯದೇವ್ ಉನದ್ಕಟ್, ಶಾರ್ದೂಲ್ ಠಾಕೂರ್ ಅವರಿದ್ದಾರೆ. ಪುಣೆ ತಂಡದಲ್ಲಿ ಸ್ಥಳೀಯ ಹುಡುಗ ರಾಹುಲ್ ತ್ರಿಪಾಠಿ 6 ಪಂದ್ಯಗಳಲ್ಲಿ 216 ರನ್ ಗಳಿಸಿ ಗಮನ ಸೆಳೆಯುತ್ತಿದ್ದಾರೆ. ಸ್ಟೀವ್ ಸ್ಮಿತ್(275) ತಂಡದ ಪರ ಗರಿಷ್ಠ ಸ್ಕೋರ್ ದಾಖಲಿಸಿದ್ದಾರೆ. ಹೈದರಾಬಾದ್ ವಿರುದ್ಧ ಗೆಲುವಿನ ಇನಿಂಗ್ಸ್ ಆಡಿರುವ ಎಂಎಸ್ ಧೋನಿ ಕೇವಲ 152 ರನ್ ಗಳಿಸಿದ್ದಾರೆ.
ಲಯನ್ಸ್‌ಗೆ ಗೆಲುವಿನ ಓಟ ಮುಂದುವರಿಸುವ ಗುರಿ
ರಾಜ್‌ಕೋಟ್, ಎ.28: ಆರ್‌ಸಿಬಿಯನ್ನು ಅದರದೇ ನೆಲದಲ್ಲಿ ಹೀನಾಯವಾಗಿ ಸೋಲಿಸಿ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿರುವ ಗುಜರಾತ್ ಲಯನ್ಸ್ ಶನಿವಾರ ನಡೆಯಲಿರುವ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಸವಾಲು ಎದುರಿಸಲಿದೆ.
ಲಯನ್ಸ್ ತಂಡದ ನಾಯಕ ಸುರೇಶ್ ರೈನಾಗೆ ಫೀಲ್ಡಿಂಗ್‌ನ ವೇಳೆ ಭುಜನೋವು ಕಾಣಿಸಿಕೊಂಡಿದೆ. ಆದರೆ, ರೈನಾ ಮುಂಬೈ ವಿರುದ್ಧ ನಿರ್ಣಾಯಕ ಪಂದ್ಯವನ್ನು ತಪ್ಪಿಸಿಕೊಳ್ಳುವ ಸಾಧ್ಯತೆಯಿಲ್ಲ. ರೈನಾ ಟೂರ್ನಿಯಲ್ಲಿ ಈಗಾಗಲೇ ಒಟ್ಟು 309 ರನ್ ಗಳಿಸಿದ್ದಾರೆ. ಲಯನ್ಸ್‌ಗೆ ಪ್ಲೇ-ಆಫ್‌ಗೆ ತೇರ್ಗಡೆಯಾಗಲು ಮುಂದಿನ 6 ಪಂದ್ಯಗಳಲ್ಲಿ ಐದರಲ್ಲಿ ಜಯ ಸಾಧಿಸಬೇಕಾಗಿದೆ.
ಡ್ವೆಯ್ನೆ ಬ್ರಾವೊ ಲಯನ್ಸ್ ತಂಡದ ಸಮತೋಲನದ ಮೇಲೆ ಪರಿಣಾಮಬೀರಿದೆ. ಜೇಮ್ಸ್ ಫಾಕ್ನರ್ ಹಾಗೂ ಆಂಡ್ರೂ ಟೈ ಬೌಲಿಂಗ್‌ನಲ್ಲಿ ಶಕ್ತಿ ತುಂಬುತ್ತಿದ್ದಾರೆ. ಬ್ರೆಂಡನ್ ಮೆಕಲಮ್ ಹಾಗೂ ಆ್ಯರೊನ್ ಫಿಂಚ್ ಅಗ್ರ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಲ ನೀಡುತ್ತಿದ್ದಾರೆ.
ಮುಂಬೈ ತಂಡದಲ್ಲಿ ಜೋಸ್ ಬಟ್ಲರ್ ಉತ್ತಮ ಫಾರ್ಮ್‌ನಲ್ಲಿದ್ದು, ನಾಯಕ ರೋಹಿತ್ ಶರ್ಮ ನಿಧಾನವಾಗಿ ಮೊದಲಿನ ಲಯಕ್ಕೆ ಮರಳುತ್ತಿದ್ದಾರೆ. ಪಾಂಡ್ಯ ಸಹೋದರರಾದ ಕ್ರುನಾಲ್ ಹಾಗೂ ಹಾರ್ದಿಕ್ ತಂಡಕ್ಕೆ ಆಸರೆೆಯಾಗುತ್ತಿದ್ದಾರೆ. ಜಸ್‌ಪ್ರೀತ್ ಬುಮ್ರಾ ಹಾಗೂ ಮೆಕ್ಲಿನಘನ್ ವೇಗ ಹಾಗೂ ಸ್ವಿಂಗ್ ಎಸೆತದಿಂದ ಬ್ಯಾಟ್ಸ್‌ಮನ್‌ಗಳಿಗೆ ಸವಾಲಾಗುತ್ತಿದ್ದಾರೆ.
ಮುಂಬೈ ತಂಡ 8 ಪಂದ್ಯಗಳಲ್ಲಿ ಕೇವಲ ಎರಡರಲ್ಲಿ ಮಾತ್ರ ಸೋತಿದೆ. ಪುಣೆ ವಿರುದ್ಧ ಎರಡೂ ಪಂದ್ಯಗಳನ್ನು ಸೋತಿದೆ.







