ಸರಕಾರದ ಯೋಜನೆಗೆ ಭೂಮಿ ನೀಡಿ, ಜೈಲು ಸೇರಿದ ರೈತ ಕುಟುಂಬ

ತುಮಕೂರು, ಎ.28: ಸರಕಾರದ ಯೋಜನೆಗೆ ಭೂಮಿ ನೀಡಿ, ನ್ಯಾಯಯುತ ಪರಿಹಾರ ಕೇಳಿದ್ದಕ್ಕೆ ರೈತ ಕುಟುಂಬದ ಮೇಲೆ ಪವರ್‌ಗ್ರಿಡ್ ಅಧಿಕಾರಿಗಳು ಪ್ರಕರಣ ದಾಖಲಿಸಿ ಜೈಲಿಗಟ್ಟಿರುವ ಘಟನೆ ಶಿರಾ ತಾಲೂಕಿನ ಹುಲಿಕುಂಟೆ ಹೋಬಳಿಯ ನಿಡಗಟ್ಟೆ ಗ್ರಾಮದಲ್ಲಿ ನಡೆದಿದೆ.
ನಿಡಗಟ್ಟೆ ಗ್ರಾಮದ ತಿಮ್ಮರಾಜು(30), ಆನಂದ(25), ರಾಧಿಕ(25), ಮುತ್ತುರಾಯಪ್ಪ(60), ಹನುಮಕ್ಕ(50), ಗೋಪಾಲಯ್ಯ(36) ಎಂಬವರ ಮೇಲೆ ಪ್ರಕರಣ ದಾಖಲಿಸಲಾಗಿದ್ದು, 3.ಜನ ರೈತರನ್ನು ಬಂಧಿಸಿರುವ ಪೊಲೀಸರು ಇನ್ನೂ ಮೂವರನ್ನು ಹುಡುಕುತ್ತಿದ್ದಾರೆ.
400.ಕೆವಿ ಸಾರ್ಮಥ್ಯದ ಕೆಪಿಟಿಸಿಎಲ್ ವಿದ್ಯುತ್ ಲೈನ್ ನಿಡಗಟ್ಟೆ ಮಾರ್ಗವಾಗಿ ತುಮಕೂರಿನ ವಸಂತನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಹಾದು ಹೋಗಿದ್ದು, ಸರ್ವೆ ನಂ:22ರ ತಿಮ್ಮರಾಜು ಜಮೀನಿನಲ್ಲಿ 2 ಟವರ್ ಮತ್ತು ಲೈನ್ ಸಂಪರ್ಕ ಕಲ್ಪಿಸಲು ಭೂಮಿ ವಶ ಪಡಿಸಿಕೊಳ್ಳಲಾಗಿದೆ. ಭೂಮಿ ವಶಪಡಿಸಿಕೊಳ್ಳುವಾಗ ಪರಿಹಾರ ನೀಡುತ್ತೇವೆ ಎಂದು ಭರವಸೆ ನೀಡಿದ್ದ ಕೆ.ಪಿ.ಟಿ.ಸಿ.ಎಲ್. ಅಧಿಕಾರಿಗಳು ಕಾಮಗಾರಿ ಪೂರ್ಣಗೊಳ್ಳುತ್ತಾ ಬಂದರೂ ಪರಿಹಾರ ನೀಡಿಲ್ಲ ಎಂದು ರೈತ ಕುಟುಂಬ ಆರೋಪಿಸಿದೆ.
ಜಮೀನಿನಲ್ಲಿ ಕೊರೆಸಿದ್ದ ಕೊಳವೆ ಬಾವಿ ಮತ್ತು ದಾಳಿಂಬೆ ಬೆಳೆಗೆ ಪರಿಹಾರ ನೀಡಬೇಕೆಂಬುದು ರೈತರ ಬೇಡಿಕೆಯಾಗಿದೆ. ಆದರೆ ಪರಿಹಾರ ನೀಡಲು ಅಧಿಕಾರಿಗಳು ಮುಂದಾಗದ ಹಿನ್ನೆಲೆಯಲ್ಲಿ ಭೂಮಿ ಕಳೆದುಕೊಂಡ ರೈತ ಕುಟುಂಬ ಕಾಮಗಾರಿಗೆ ಅಡ್ಡಿಪಡಿಸಿದೆ. ಪರಿಹಾರ ನೀಡದ್ದಕ್ಕಾಗಿ ರೈತ ತಿಮ್ಮರಾಜು ವಿಷ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದರು. ದುಡಿಯುವ ಮಗ ವಿಷ ಸೇವಿಸಿ ಆಸ್ಪತ್ರೆ ಸೇರಿದ್ದರಿಂದ ಸಿಟ್ಟಿಗೆದ್ದ ರೈತ ಕುಟುಂಬ ಕೆ.ಪಿ.ಟಿ.ಸಿ.ಎಲ್. ಕಾಮಗಾರಿಗೆ ಅಡ್ಡಿ ಪಡಿಸಿದೆ. ಆದರೆ ಅಧಿಕಾರಿಗಳು ರೈತ ಕುಟುಂಬದ ವಿರುದ್ಧ ಪ್ರಾಣ ಬೆದರಿಕೆ ಕೇಸು ದಾಖಲಿಸಿದ್ದು, ಪೊಲೀಸರು ಕುಟುಂಬದ ಮೂವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ ಎನ್ನಲಾಗಿದೆ. ಇದರಿಂದ ಹೆದರಿದ ನಿಡಗಟ್ಟೆ ಗ್ರಾಮದ ಎಲ್ಲಾ ಪುರುಷರು ಮನೆ ತೊರೆದಿದ್ದು, ಇಡೀ ಗ್ರಾಮ ಜನರಿಲ್ಲದೆ ಬಿಕೋ ಎನ್ನುತ್ತಿದೆ.
ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ನಾದೂರು ಕೆಂಚಪ್ಪ ಮಾತನಾಡಿ, ಜಿಲ್ಲಾಧಿಕಾರಿಗಳ ಆದೇಶದಂತೆ ಪರಿಹಾರ ನೀಡದ ಕೆಪಿಟಿಸಿಎಲ್ ಅಧಿಕಾರಿಗಳು, ರೈತರನ್ನು ಪೊಲೀಸ್ ಬಲ ಪ್ರದರ್ಶಿಸಿ ಹತ್ತಿಕ್ಕುತ್ತಿದ್ದಾರೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ರೈತರು ರೊಚ್ಚಿಗೇಳುವ ಕಾಲ ದೂರವಿಲ್ಲ ಎಂದಿದ್ದಾರೆ.







