ಉಡುಪಿ ನಗರದಲ್ಲಿ ಪ್ಲಾಸ್ಟಿಕ್ ವಿರುದ್ಧ ಕ್ರಮ: ಫ್ಲೆಕ್ಸ್ಗಳಿಗೆ ನಿರ್ಬಂಧ: ಡಿ.ಮಂಜುನಾಥಯ್ಯ
ಸಾಮಾನ್ಯಸಭೆ

ಉಡುಪಿ, ಎ.28: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆ ವಿರುದ್ಧ ಈಗಾಗಲೇ ಕಠಿಣ ಕ್ರಮಗಳನ್ನು ಜರಗಿಸಲಾಗಿದ್ದು, ಮುಂದಿನ ದಿನಗಳಲ್ಲಿ ಫ್ಲೆಕ್ಸ್ ಗಳಿಗೆ ನಗರದಲ್ಲಿ ನಿಷೇಧ ಹೇರುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು. ಇನ್ನು ಪ್ರತಿಯೊಬ್ಬರು ಫ್ಲೆಕ್ಸ್ ಬ್ಯಾನರ್‌ಗಳ ಬದಲಾಗಿ ಬಟ್ಟೆಯ ಬ್ಯಾನರ್‌ಗಳನ್ನು ಬಳಸಬೇಕು. ಈ ಸಂಬಂಧ ಫ್ಲೆಕ್ಸ್ ತಯಾರಿಸುವ ಅಂಗಡಿಗಳ ಮೇಲೆ ದಾಳಿ ನಡೆಸಲಾಗುವುದು ಎಂದು ಉಡುಪಿ ನಗರಸಭೆ ಪೌರಾಯುಕ್ತ ಡಿ.ಮಂಜುನಾಥಯ್ಯ ತಿಳಿಸಿದ್ದಾರೆ.
ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಾಮಾನ್ಯಸಭೆಯಲ್ಲಿ ಫ್ಲೆಕ್ಸ್ ಬ್ಯಾನರ್‌ಗಳ ವಿರುದ್ಧ ಕ್ರಮಕೈಗೊಳ್ಳುವ ಕುರಿತ ಸದಸ್ಯ ಚಂದ್ರಕಾಂತ್ ಪ್ರಶ್ನೆಗೆ ಅವರು ಈ ಉತ್ತರ ನೀಡಿದರು.
ನಗರದ 3,700 ಪ್ಲಾಸ್ಟಿಕ್ ಮಾರಾಟ ಅಂಗಡಿಗಳಿಗೆ ವೈಯಕ್ತಿಕ ನೋಟೀಸ್ ನೀಡಲಾಗಿದೆ. ಸಂತೆಕಟ್ಟೆ, ಹೆರ್ಗ ಹಾಗೂ ಆದಿಉಡುಪಿ ಸಂತೆಗಳಿಗೆ ದಾಳಿ ನಡೆಸಿ 3.41ಕ್ವಿಂಟಾಲ್ ಪ್ಲ್ಲಾಸ್ಟಿಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕಾರ್ಯಾಚರಣೆಯು ಇನ್ನು ಮುಂದೆ ನಿರಂತರವಾಗಿ ನಡೆಯಲಿದೆ. ಈ ಬಗ್ಗೆ ಒಂದು ತಿಂಗಳ ಕಾಲ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುವುದು. ಅಲ್ಲದೆ ಹೊಟೇಲ್ ಮಾಲಕರ ಸಭೆಯನ್ನು ಕೂಡ ಕರೆಯಲಾಗಿದೆ ಎಂದರು.
ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿ ಹೊರರಾಜ್ಯಗಳಿಂದ ಪ್ಲಾಸ್ಟಿಕ್ ಬಾರದಂತೆ ತಡೆಯಲು ಪೊಲೀಸರಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ. ಅದೇ ರೀತಿ ಪ್ಲಾಸ್ಟಿಕ್ ತಯಾರಿಕಾ ಘಟಕಗಳ ಮೇಲೂ ದಾಳಿ ನಡೆಸಲು ಸೂಚಿಸಲಾಗಿದೆ. ಪ್ಲಾಸ್ಟಿಕ್ ಮಾರಾಟ ಮತ್ತು ಸುಡುವವರ ವಿರುದ್ಧ ದಂಡ ವಿಧಿಸುವ ಬಗ್ಗೆ ಬೈಲಾದಲ್ಲಿ ಸೇರಿಸಿ ಸರಕಾರಕ್ಕೆ ಕಳುಹಿಸಿಕೊಡಲಾಗಿದೆ. ಇದು ಜಾರಿಯಾಗಿ ಬಂದ ನಂತರ ಮಾರಾಟ ಮತ್ತು ಸುಡುವವರಿಗೆ ಸ್ಥಳದಲ್ಲೇ ದಂಡ ವಿಧಿಸಲಾಗುವುದು ಎಂದರು.
ಬೀದಿನಾಯಿ ಹಾವಳಿ ಚರ್ಚೆ: ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಇವುಗಳ ಸಂತಾನಹರಣ ಕಾರ್ಯ ಸರಿಯಾಗಿ ನಡೆಯುತ್ತಿಲ್ಲ ಎಂದು ಯಶ್ಪಾಲ್ ಸುವರ್ಣ ದೂರಿದರು.
ನಗರಸಭೆಗೆ ಸಂತಾನಹರಣದ ಬಗ್ಗೆ ಟೆಂಡರ್ ಕರೆದು ಹಣ ಪಾವತಿಸುವ ಜವಾಬ್ದಾರಿ ಮಾತ್ರ ನೀಡಲಾಗಿದೆ. ಮತ್ತೆಲ್ಲ ಕೆಲಸವನ್ನು ಪಶುವೈದ್ಯರೇ ಮಾಡಬೇಕು. ಒಂದು ನಾಯಿಯ ಸಂತಾನ ಹರಣಕ್ಕೆ 532ರೂ. ಪಾವತಿಸಲಾಗುತ್ತದೆ. ಆದರೂ ನಗರದಲ್ಲಿ ನಾಯಿಗಳ ಸಂಖ್ಯೆ ಹೆಚ್ಚಾಗಲು ಕಾರಣ ನಗರಸಭೆ ಗಡಿಭಾಗದಿಂದ ಬರುವ ನಾಯಿಗಳು ಎಂದು ಪರಿಸರ ಇಂಜಿನಿಯರ್ ರಾಘವೇಂದ್ರ ಸಭೆಗೆ ತಿಳಿಸಿದರು.
ದಾರಿದೀಪಗಳು ಕೆಟ್ಟು ಹೋದ ಬಗ್ಗೆ ದೂರು ನೀಡಿ ಎರಡು ತಿಂಗಳಾದರೂ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಸದಸ್ಯರು ಆರೋಪಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿ, ಈಗ ಹೊಸ ಗುತ್ತಿಗೆದಾರರಿಗೆ ಟೆಂಡರ್ ಆಗಿದ್ದು, ಸದ್ಯವೇ ಎಲ್ಲ ದಾರಿದೀಪಗಳನ್ನು ದುರಸ್ತಿ ಮಾಡಲಾಗುವುದು ಎಂದರು. ಒಳ ಚರಂಡಿ ಕಾಮಗಾರಿ ನಡೆಸುವಾಗ ಸ್ಥಳೀಯ ಸದಸ್ಯರಿಗೆ ಯಾವುದೇ ಮಾಹಿತಿ ನೀಡುವುದಿಲ್ಲ ಎಂದು ಅಮೃತಾ ಕೃಷ್ಣಮೂರ್ತಿ ದೂರಿದರು. ಈಗಾಗಲೇ ಒಳ ಚರಂಡಿ ಕಾಮಗಾರಿಯು ಶೇ.18ರಷ್ಟು ಮುಗಿದಿದ್ದು, ಇನ್ನು ಶೇ.82ರಷ್ಟು ಕಾಮಗಾರಿ ಆಗಬೇಕಾಗಿದೆ ಎಂದು ಪೌರಾಯುಕ್ತರು ತಿಳಿಸಿದರು.
ನಗರದಲ್ಲಿ ವಸತಿ ಸಮುಚ್ಛಯಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ನೀರಿನ ಕೊರತೆ ಕೂಡ ಅಧಿಕವಾಗುತ್ತಿದೆ. ಆದುದರಿಂದ ಭವಿಷ್ಯದ ದೃಷ್ಠಿಯಿಂದ ನಗರದ ಮನೆಗಳಲ್ಲಿ ಮಳೆ ನೀರು ಕೊಯ್ಲು ಮತ್ತು ಜಲ ಮರುಪೂರಣಕ್ಕೆ ಒತ್ತುಕೊಡು ವಂತೆ ನಗರಸಭೆ ಮಾಡಬೇಕು. ಈ ಪ್ರಯತ್ನಕ್ಕೆ ಮುಂದಾದರೆ ಮಾತ್ರ ನಗರ ಸಭೆಯಿಂದ ನೀರಿನ ಸಮಸ್ಯೆ ಬಗೆಹರಿಸಬಹುದು ಎಂದು ಜನಾರ್ದನ ಭಂರ್ಡಾಕರ್ ಸಭೆಯಲ್ಲಿ ತಿಳಿಸಿದರು. ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷೆ ಸಂಧ್ಯಾ ತಿಲಕರಾಜ್, ಸ್ಥಾಯಿ ಸಮಿತಿ ಅಧ್ಯಕ್ಷೆ ಶೋಭಾ ಉಪಸ್ಥಿತರಿದ್ದರು.
ನಗರದಲ್ಲಿ 599 ಮಂದಿ ನಿವೇಶನ ರಹಿತರು
ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ 599 ಮಂದಿ ನಿವೇಶನ ರಹಿತರ ಪಟ್ಟಿಯನ್ನು ಅಂತಿಮಗೊಳಿಸಲಾಗಿದ್ದು, ಇವರಿಗೆ ನಿವೇಶನ ನೀಡಲು ಹೆರ್ಗದಲ್ಲಿ 6ಎಕರೆ ಹಾಗೂ ಬೇರೆ ಕಡೆ 4.30 ಎಕರೆ ಜಾಗವನ್ನು ಮೀಸಲಿರಿಸಲಾಗಿದೆ.ಇದರಲ್ಲಿ ಎಲ್ಲರಿಗೂ ನಿವೇಶನ ನೀಡಲು ಸಾಧ್ಯವಾಗದಿದ್ದರೆ ಉಳಿದವರಿಗೆ ಉಪ್ಪೂರು ಗ್ರಾಪಂ ವ್ಯಾಪ್ತಿಯಲ್ಲಿ ನೀಡಲಾಗುವುದು. ಅಲ್ಲದೆ ಇವರಿಗೆ ಆಶ್ರಯ ಯೋಜನೆಯಲ್ಲಿ ಮನೆ ಕೂಡ ಮಂಜೂರು ಮಾಡಲಾಗುವುದು ಎಂದು ಪೌರಾಯುಕ್ತ ಡಿ.ಮಂಜುನಾಥಯ್ಯ ಸದಸ್ಯ ಜನಾರ್ದನ ಭಂರ್ಡಾಕರ್ ಅವರ ಪ್ರಶ್ನೆಗೆ ಉತ್ತರಿಸುತ್ತ ಈ ಮಾಹಿತಿ ನೀಡಿದರು.
ಹೆಲಿ ಟೂರಿಸಂಗೆ ವಿರೋಧ
ಕಳೆದ ಬಾರಿ ಆದಿಉಡುಪಿ ಮೈದಾನದಲ್ಲಿ ನಡೆಸಲಾದ ಹೆಲಿ ಟೂರಿಸಂಗೆ ಈ ಬಾರಿ ಅಲ್ಲಿ ಅನುಮತಿ ಸಿಗದ ಹಿನ್ನೆಲೆಯಲ್ಲಿ ಅದನ್ನು ಬೀಡಿನಗುಡ್ಡೆಯಲ್ಲಿರುವ ಬಯಲು ರಂಗಮಂದಿರ ಮೈದಾನಕ್ಕೆ ವರ್ಗಾಯಿಸುವ ಕುರಿತ ನಿರ್ಧಾರಕ್ಕೆ ನಗರಸಭೆ ಸದಸ್ಯರು ಆಕ್ಷೇಪ ಸಲ್ಲಿಸಿದರು. ನಗರದ ಜನತೆಗೆ ಕ್ರಿಕೆಟ್ ಆಡಲು ಇರುವ ಒಂದೇ ಒಂದು ಮೈದಾನವನ್ನು ಹೆಲಿ ಟೂರಿಸಂಗೆ ನೀಡಬಾರದು ಎಂದು ಜನಾರ್ದನ ಭಂಡಾರ್ಕರ್, ಯಶ್ಪಾಲ್ ಸುವರ್ಣ ಒತ್ತಾಯಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಪೌರಾಯುಕ್ತರು, ಬೀಡಿನಗುಡ್ಡೆಯಲ್ಲಿ ಹೆಲಿ ಟೂರಿಸಂ ಮಾಡುವುದಕ್ಕೆ ಆಕ್ಷೇಪ ಬಂದಿರುವ ಹಿನ್ನೆಲೆಯಲ್ಲಿ ಅದನ್ನು ಮಣ್ಣಪಳ್ಳದ ಸಮೀಪ ಇರುವ ಮೈದಾನಕ್ಕೆ ವರ್ಗಾಯಿಸುವಂತೆ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗಿದೆ. ಅದರಂತೆ ಸ್ಥಳ ಗುರುತಿಸುವ ಕಾರ್ಯ ಮಾಡಲಾಗಿದೆಎಂದರು. ಇದಕ್ಕೆ ಮಣಿಪಾಲದ ಸದಸ್ಯ ನರಸಿಂಹ ನಾಯಕ್ ಆಕ್ಷೇಪ ಸಲ್ಲಿಸಿ ಮಣ್ಣಪಳ್ಳ ಜನವಸತಿ ಪ್ರದೇಶವಾಗಿರುವುದರಿಂದ ಇಲ್ಲಿಯೂ ಹೆಲಿಟೂರಿಸಂಗೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.







