ಭ್ರಷ್ಟಾಚಾರದ ಆರೋಪ: ಪ್ರತಿಭಟನೆಯಿಂದ ರದ್ದಾದ ಬೆಳ್ತಂಗಡಿ ತಾಪಂ ಸಭೆ
ಬೆಳ್ತಂಗಡಿ, ಎ.28: ತಾಲೂಕು ಕಚೇರಿಯಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ ಎಂದು ಆರೋಪಿಸಿ ಬಿಜೆಪಿ ಬೆಂಬಲಿತ ಸದಸ್ಯರು ತಾಪಂ ಸಾಮಾನ್ಯ ಸಭೆಯನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ನಡೆಯಿತು. ಇದರಿಂದ ಸಭೆ ಆರಂಭಗೊಂಡ ಕೆಲವೇ ಹೊತ್ತಿನಲ್ಲಿ ರದ್ದಾಯಿತು.
ತಾಪಂ ಅಧ್ಯಕ್ಷೆ ದಿವ್ಯಜ್ಯೋತಿ ಅಧ್ಯಕ್ಷತೆಯಲ್ಲಿ ಸಭೆ ಆರಂಭಗೊಳ್ಳುತ್ತಿದ್ದಂತೆ ವಿಷಯ ಪ್ರಸ್ತಾಪಿಸಿದ ಬಿಜೆಪಿ ಸದಸ್ಯರು, ಇಲ್ಲಿನ ತಾಲೂಕು ಕಚೇರಿಯಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ನಿವೃತ್ತ ಯೋಧರಿಗೆ ಜಮೀನು ಮಂಜೂರು ಮಾಡಿ ಆದೇಶಗಳು ಬಂದು ವರ್ಷಗಳೇ ಕಳೆದಿದ್ದರೂ ಅದನ್ನು ನೀಡುವ ಕಾರ್ಯ ನಡೆದಿಲ್ಲ. ಈ ಬಗ್ಗೆ ಕಂದಾಯ ಇಲಾಖೆಯ ಅಧಿಕಾರಿಗಳು ಯಾವುದೇ ಸ್ಪಷ್ಟ ಮಾಹಿತಿ ನೀಡುತ್ತಿಲ್ಲ ಎಂದು ದೂರಿದರು.
ಮಾಜಿ ಸೈನಿಕ ನೆಲ್ಸನ್ ಲಸ್ರಾದೋ ಅವರಿಗೆ ಭೂ ಮಂಜೂರಾತಿಗೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳೊಂದಿಗೆ ಅಜಿ ಸಲ್ಲಿಸಲಾಗಿದ್ದರೂ ಅದು ಮಂಜೂರಾಗದಿರಲು ಕಾರಣವೇನು, ಆ ಕಡತಗಳು ಎಲ್ಲಿ ಎಂದು ಸದಸ್ಯ ಜೋಯಲ್ ಮೆಂಡೋನ್ಸಾ ಪ್ರಶ್ನಿಸಿದರು. ಈ ಬಗ್ಗೆ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಪಷ್ಟ ಉತ್ತರ ನೀಡಲಿಲ್ಲ. ಸೈನಿಕ ವಿಕ್ಟರ್ ರೊಡ್ರಿಗಸ್ ಎಂಬವರಿಗೆ ಭೂ ಮಂಜೂರಾತಿಯ ಆದೇಶ ಬಂದು ವರ್ಷಗಳು ಕಳೆದಿದ್ದರೂ ಇನ್ನೂ ಅವರಿಗೆ ಜಮೀನು ಸಿಕ್ಕಿಲ್ಲ. ಇದಕ್ಕೂ ಕಂದಾಯ ಇಲಾಖೆಯ ಅಧಿಕಾರಿಗಳಿಂದ ಸರಿಯಾದ ಉತ್ತರ ಬರಲಿಲ್ಲ. ಸಭೆಗೆ ತಹಶೀಲ್ದಾರ್ ಗೈರು ಹಾಜರಾಗಿರುವ ಬಗ್ಗೆ ಕಂದಾಯ ಇಲಾಖೆಯಲ್ಲಿನ ಲಂಚಗುಳಿತನದ ಬಗ್ಗೆಯೂ ಬಿಜೆಪಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಕಂದಾಯ ಇಲಾಖೆಯಿಂದ ಸರಿಯಾದ ಮಾಹಿತಿ ಬರುವವರೆಗೆ ಸಭೆ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದರು. ಕಂದಾಯ ಇಲಾಖೆಯ ಅಧಿಕಾರಿಗಳು ನಿರುತ್ತರರಾದಾಗ ಬಿಜೆಪಿ ಸದಸ್ಯರು ಸಭಾತ್ಯಾಗ ನಡೆಸಿದರು. ತಾಪಂ ಸಭಾಂಗಣದ ಹೊರಗೆ ಪ್ರತಿಭಟನೆ ನಡೆಸಿದ ಬಿಜೆಪಿ ಸದಸ್ಯರು ನಿವೃತ್ತ ಸೈನಿಕರು ಸೇರಿದಂತೆ ಜನಸಾಮಾನ್ಯರನ್ನು ಕಾಡುತ್ತಿರುವ ತಾಲೂಕು ಕಚೇರಿ ಸರಿಯಾಗದ ಹೊರತು ಸಭೆ ನಡೆಸಿ ಯಾವುದೇ ಪ್ರಯೋಜನವಿಲ್ಲ ಎಂದು ಸಭೆ ರದ್ದು ಪಡಿಸುವಂತೆ ಆಗ್ರಹಿಸಿದರು .
ಇದಕ್ಕೆ ಕಾಂಗ್ರೆಸ್ ಸದಸ್ಯರಿಂದಲೂ ಬೆಂಬಲ ವ್ಯಕ್ತವಾಯಿತು ಅಂತಿಮವಾಗಿ ಕಂದಾಯ ಇಲಾಖೆಯ ಕಾರ್ಯನಿರ್ವಹಣೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಸಭೆಯನ್ನು ಮುಂದೂಡಲಾಯಿತು. ತಾಪಂ ಕಾರ್ಯನಿರ್ವಹಣಾಧಿಕಾರಿ ಸಿ. ಆರ್ ನರೇಂದ್ರ, ಉಪಾಧ್ಯಕ್ಷೆ ವೇದಾವತಿ ಸ್ಥಾಯಿ ಸಮಿತಿ ಅಧ್ಯಕ್ಷ ಸುಧೀರ್ ಸುವರ್ಣ ಹಾಗೂ ಸದಸ್ಯರು ಇದ್ದರು.







