ಮಾರ್ಷ್ ಏಕಾಂಗಿ ಹೋರಾಟ ವ್ಯರ್ಥ: ಹೈದರಾಬಾದ್ ಜಯಭೇರಿ

ಮೊಹಾಲಿ, ಎ.28: ಶಾನ್ ಮಾರ್ಷ್(84 ರನ್, 50 ಎಸೆತ) ಏಕಾಂಗಿ ಹೋರಾಟದ ಹೊರತಾಗಿಯೂ ಆತಿಥೇಯ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಚಾಂಪಿಯನ್ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಐಪಿಎಲ್ ಪಂದ್ಯವನ್ನು 26 ರನ್‌ಗಳಿಂದ ಸೋತಿದೆ. ಗೆಲುವಿಗೆ 208ರನ್ ಗುರಿ ಪಡೆದಿದ್ದ ಪಂಜಾಬ್ 9 ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿತು.
ಹಿರಿಯ ಬೌಲರ್ ಆಶೀಷ್ ನೆಹ್ರಾ(3-42) ಹಾಗೂ ಸಿದ್ದಾರ್ಥ್ ಕೌಲ್(3-36) ತಲಾ ಮೂರು ವಿಕೆಟ್‌ಗಳನ್ನು ಕಬಳಿಸಿದರೆ, ಭುವನೇಶ್ವರ ಕುಮಾರ್(2-27) ಎರಡು ವಿಕೆಟ್ ಪಡೆದರು.
ಪಂಜಾಬ್ 42 ರನ್‌ಗೆ 2 ವಿಕೆಟ್ ಕಳೆದುಕೊಂಡು ಹೀನಾಯ ಸೋಲಿನತ್ತ ಮುಖ ಮಾಡಿತ್ತು. ಆಗ ನಾಲ್ಕನೆ ವಿಕೆಟ್‌ಗೆ 73 ರನ್ ಜೊತೆಯಾಟ ನಡೆಸಿದ ಶಾನ್ ಮಾರ್ಷ್(84 ರನ್, 50 ಎಸೆತ, 14 ಬೌಂಡರಿ, 2 ಸಿಕ್ಸರ್) ಹಾಗೂ ಇಯಾನ್ ಮೊರ್ಗನ್(26, 21 ಎಸೆತ, 2 ಬೌಂಡರಿ, 1 ಸಿಕ್ಸರ್) ತಂಡದ ಮೊತ್ತವನ್ನು 115ಕ್ಕೆ ತಲುಪಿಸಿದರು.
ಮೊರ್ಗನ್ ಔಟಾದ ಬಳಿಕ ವಿಕೆಟ್‌ಕೀಪರ್ ವೃದ್ದೀಮಾನ್ ಸಹಾ(2) ಕೌಲ್‌ಗೆ ಕ್ಲೀನ್ ಬೌಲ್ಡ್ ಆಗಿ ಕಳಪೆ ಪ್ರದರ್ಶನ ಮುಂದುವರಿಸಿದರು. ಅಕ್ಷರ್ ಪಟೇಲ್(16) ಹಾಗೂ ಅನುರೀತ್ ಸಿಂಗ್(14) ಎರಡಂಕೆ ಸ್ಕೋರ್ ದಾಖಲಿಸಿದರು.
ತಂಡದ ಪರ ಅಗ್ರ ಸ್ಕೋರರ್ ಎನಿಸಿಕೊಂಡ ಮಾರ್ಷ್‌ಗೆ ಮೊರ್ಗನ್ ಹೊರತುಪಡಿಸಿ ಉಳಿದ ಬ್ಯಾಟ್ಸ್‌ಮನ್‌ಗಳು ಸಾಥ್ ನೀಡಲಿಲ್ಲ. ಪಂಜಾಬ್ ಈ ವರ್ಷದ ಐಪಿಎಲ್‌ನಲ್ಲಿ 5ನೆ ಸೋಲು ಕಂಡಿತು. ಮತ್ತೊಂದೆಡೆ 9ನೆ ಪಂದ್ಯ ಆಡಿದ್ದ ಹೈದರಾಬಾದ್ 5ನೆ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ 3ನೆ ಸ್ಥಾನ ಕಾಯ್ದುಕೊಂಡಿತು.
ಹೈದರಾಬಾದ್ 207/3:
ಇದಕ್ಕೆ ಮೊದಲು ಪಂಜಾಬ್‌ನಿಂದ ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಸನ್‌ರೈಸರ್ಸ್ ಹೈದರಾಬಾದ್ ತಂಡ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 207 ರನ್ ಗಳಿಸಿತು.
ಶಿಖರ್ ಧವನ್‌ರೊಂದಿಗೆ ಇನಿಂಗ್ಸ್ ಆರಂಭಿಸಿದ ನಾಯಕ ಡೇವಿಡ್ ವಾರ್ನರ್ 10 ಓವರ್‌ಗಳಲ್ಲಿ 107 ರನ್ ಜೊತೆಯಾಟ ನಡೆಸಿ ಬೃಹತ್ ಮೊತ್ತಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು.
ವಾರ್ನರ್‌ರನ್ನು(51 ರನ್, 27 ಎಸೆತ, 4 ಬೌಂಡರಿ, 4 ಸಿಕ್ಸರ್)ಕ್ಲೀನ್‌ಬೌಲ್ಡ್ ಮಾಡಿದ ಪಂಜಾಬ್ ನಾಯಕ ಮ್ಯಾಕ್ಸ್‌ವೆಲ್ ಹೈದರಾಬಾದ್‌ನ ಮೊದಲ ವಿಕೆಟ್ ಜೊತೆಯಾಟಕ್ಕೆ ಬ್ರೇಕ್ ಹಾಕಿದರು.
ವಾರ್ನರ್ ಔಟಾದ ಬಳಿಕ ಕೇನ್ ವಿಲಿಯಮ್ಸನ್(ಅಜೇಯ 54 ರನ್, 27 ಎಸೆತ, 4 ಬೌಂಡರಿ, 2 ಸಿಕ್ಸರ್)ಅವರೊಂದಿಗೆ ಕೈಜೋಡಿಸಿದ ಧವನ್ 2ನೆ ವಿಕೆಟ್‌ಗೆ 40 ರನ್ ಸೇರಿಸಿದರು. ತಂಡದ ಪರ ಸರ್ವಾಧಿಕ ರನ್ ಗಳಿಸಿದ ಧವನ್(77 ರನ್, 48 ಎಸೆತ, 9 ಬೌಂಡರಿ, 1 ಸಿಕ್ಸರ್) ಮನೀಷ್ ಶರ್ಮಗೆ ವಿಕೆಟ್ ಒಪ್ಪಿಸಿದರು.
ಯುವರಾಜ್ ಸಿಂಗ್ ಕೇವಲ 15 ರನ್ ಗಳಿಸಿ ಕಳಪೆ ಬ್ಯಾಟಿಂಗ್ ಮುಂದುವರಿಸಿದರು. ಹೆನ್ರಿಕ್ಸ್ ಅಜೇಯ 7 ರನ್ ಗಳಿಸಿದರು.
ಪಂಜಾಬ್‌ನ ಪರ ಮ್ಯಾಕ್ಸ್‌ವೆಲ್(2-29)ಯಶಸ್ವಿ ಬೌಲರ್ ಎನಿಸಿಕೊಂಡರು.
ಸಂಕ್ಷಿಪ್ತ ಸ್ಕೋರ್
ಸನ್‌ರೈಸರ್ಸ್ ಹೈದರಾಬಾದ್: 20 ಓವರ್‌ಗಳಲ್ಲಿ 207/3
(ಧವನ್ 77, ವಿಲಿಯಮ್ಸನ್ ಅಜೇಯ 54, ವಾರ್ನರ್ 51, ಮ್ಯಾಕ್ಸ್‌ವೆಲ್ 2-29)
ಕಿಂಗ್ಸ್ ಇಲೆವೆನ್ ಪಂಜಾಬ್:20 ಓವರ್‌ಗಳಲ್ಲಿ 181/9
(ಶಾನ್ ಮಾರ್ಷ್ 84, ಮೊರ್ಗನ್ 26, ನೆಹ್ರಾ 3-42, ಕೌಲ್ 3-36, ಕುಮಾರ್ 2-27)







