ಗೂಗಲ್ ಸಿಇಒ ಸುಂದರ್ ರ ಕಳೆದ ವರ್ಷದ ವೇತನದ ಮೊತ್ತ ಕೇಳಿದರೆ ನೀವು ಹೌಹಾರುವಿರಿ

ಹೌಸ್ಟನ್,ಎ.29 : ಗೂಗಲ್ ಸಿಇಒ ಭಾರತೀಯ ಮೂಲದ 44 ವರ್ಷದ ಸುಂದರ್ ಪಿಚೈ ಅವರ ಕಳೆದ ವರ್ಷದ ವೇತನ ಎಷ್ಟೆಂದು ತಿಳಿದರೆ ಯಾರಿಗಾದರೂ ಅಚ್ಚರಿಯಾಗದೇ ಇರದು. ಕಳೆದ ವರ್ಷ ಅವರಿಗೆ ಸುಮಾರು 6,50,000 ಅಮೆರಿಕನ್ ಡಾಲರ್ ವೇತನ ದೊರೆತಿದೆ. ಗೂಗಲ್ ಸೇವೆಯಲ್ಲಿ ಬಹಳಷ್ಟು ಸಮಯದಿಂದಿರುವ ಹಾಗೂ ಆಗಸ್ಟ್ 2015ರಲ್ಲಿ ಸಿಇಒ ಆಗಿ ನೇಮಕಗೊಂಡಿರುವ ಪಿಚೈ 2016ರಲ್ಲಿ 198.7 ಮಿಲಿಯನ್ ಅಮೆರಿಕನ್ ಡಾಲರ್ ಸ್ಟಾಕ್ ಅವಾರ್ಡ್ ಪಡೆದಿದ್ದರೆ, 2015ರಲ್ಲಿ ಅವರು ಪಡೆದಿದ್ದ ಮೊತ್ತಕ್ಕಿಂತ ( 99.8 ಮಿಲಿಯನ್ ಅಮೆರಿಕನ್ ಡಾಲರ್) ಇದು ದ್ವಿಗುಣವಾಗಿದೆ. ಈ ರೀತಿಯಾಗಿ ಕಳೆದ ವರ್ಷ ಅವರು ಪಡೆದ ಒಟ್ಟು ಕಂಪೆನ್ಸೇಶನ್ ಸುಮಾರು 200 ಮಿಲಿಯನ್ ಡಾಲರ್ ಆಗಿದ್ದು ಇದು 2015ಕ್ಕೆ ಹೋಲಿಸಿದಲ್ಲಿ ಎರಡು ಪಟ್ಟು ಅಧಿಕವಾಗಿದೆ.
ಗೂಗಲ್ ಹಲವಾರು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಿರುವುದು ಹಾಗೂ ಕಾರ್ಯಕ್ಷಮತೆ ಹೆಚ್ಚಿಸಿರುವುದನ್ನು ಪರಿಗಣಿಸಿ ಪಿಚೈ ಅವರ ಸಂಭಾವನೆ ನಿಗದಿಪಡಿಸಲಾಗಿದೆ ಎಂದು ಕಂಪೆನಿಯ ಸಮಿತಿ ತಿಳಿಸಿದೆ.
ಪಿಚೈ ಅವರ ನೇತೃತ್ವದಲ್ಲಿ ಗೂಗಲ್ ಸಂಸ್ಥೆ ಜಾಹೀರಾತುಗಳ ಮೂಲಕ ಹಾಗೂ ಯುಟ್ಯೂಬ್ ಬಿಸಿನೆಸ್ ಮೂಲಕ ಸಾಕಷ್ಟು ಆದಾಯ ವೃದ್ಧಿಸಿದೆ. ಮಶೀನ್ ಲರ್ನಿಂಗ್, ಹಾರ್ಡ್ ವೇರ್ ಹಾಗೂ ಕ್ಲೌಡ್ ಕಂಪ್ಯೂಟಿಂಗ್ ನಲ್ಲೂ ಅದು ಸಾಕಷ್ಟು ತನ್ನನ್ನು ತೊಡಗಿಸಿಕೊಂಡಿದೆ.
2016ರಲ್ಲಿ ಗೂಗಲ್ ಹೊಸ ಸ್ಮಾರ್ಟ್ ಫೋನ್, ರೂಟರ್ ಹಾಗೂ ವಾಯ್ಸ್ ಕಂಟ್ರೋಲ್ಡ್ ಸ್ಮಾರ್ಟ್ ಸ್ಪೀಕರ್ ಬಿಡುಗಡೆ ಮಾಡಿದೆ. ಗೂಗಲ್ ಹಾರ್ಡ್ ವೇರ್ ಮತ್ತು ಕ್ಲೌಡ್ ಸರ್ವಿಸಸ್ ಮೂಲಕ 3.1 ಬಿಲಿಯನ್ ಅಮೆರಿಕನ್ ಡಾಲರ್ ಆದಾಯವನ್ನು ಕಳೆದ ತ್ರೈಮಾಸಿಕದಲ್ಲಿ ದಾಖಲಿಸಿದೆ.







