ಪಾಕಿಸ್ತಾನಿ ಗುಪ್ತಚರನಿಗೆ 10 ವರ್ಷ ಜೈಲು ಶಿಕ್ಷೆ

ಕಾನ್ಪುರ,ಎ.29: ಪಾಕಿಸ್ತಾನದ ಗುಪ್ತಚರ ವಕಾಸ್ ಮಹಮೂದ್ ಎಂಬಾತನನ್ನು ದೋಷಿಯೆಂದು ಘೋಷಿಸಿರುವ ಇಲ್ಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು 10 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. ಭಾರತದಲ್ಲಿಯ ಮಿಲಿಟರಿ ಸ್ಥಾವರಗಳ ಬಗ್ಗೆ ಪಾಕ್‌ಗೆ ಮಾಹಿತಿಗಳನ್ನು ರವಾನಿಸುತ್ತಿದ್ದ ಆರೋಪದಲ್ಲಿ ಎಂಟು ವರ್ಷಗಳ ಹಿಂದೆ ಆತನನ್ನು ಬಂಧಿಸಲಾಗಿತ್ತು.
ವಕಾಸ್‌ಗೆ ಆಶ್ರಯ ನೀಡಿದ್ದ ಭಾರತೀಯ ಮಹಿಳೆ ಸಿತಾರಾ ಬೇಗಂ ಎಂಬಾಕೆಗೂ ನ್ಯಾಯಾಲಯವು ಆರು ವರ್ಷ ಹತ್ತು ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.
ಪಾಕಿಸ್ತಾನದ ಲಾಹೋರ್ ನಿವಾಸಿ ವಕಾಸ್‌ನನ್ನು ಐಎಸ್‌ಐ ಏಜಂಟ್ ಎಂಬ ಆರೋಪದಲ್ಲಿ ಉತ್ತರ ಪ್ರದೇಶ ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್)ವು 2009, ಮೇ 27ರಂದು ಕಾನ್ಪುರ ಜಿಲ್ಲೆಯ ಬಿಥೂರ್‌ನಲ್ಲಿ ಬಂಧಿಸಿತ್ತು.
ನಕಲಿ ಗುರುತಿನೊಂದಿಗೆ ಕಾನ್ಪುರದಲ್ಲಿ ವಾಸವಿದ್ದ ವಕಾಸ್ ಭಾರತೀಯ ಸೇನಾ ಸ್ಥಾವರ ಗಳ ಕುರಿತು ರಹಸ್ಯ ಮಾಹಿತಿಗಳನ್ನು ಸಂಗ್ರಹಿಸಿ ಐಎಸ್‌ಐಗೆ ದಾಟಿಸುತ್ತಿದ್ದು, ಬಂಧನದ ವೇಳೆ ಆತನ ಬಳಿಯಿಂದ ಚಕೇರಿ ವಾಯುನೆಲೆಯ ನಿರ್ಬಂಧಿತ ನಕಾಶೆಗಳು ಸೇರಿದಂತೆ ರಹಸ್ಯ ದಾಖಲೆಗಳು, ನಕಲಿ ವಾಹನ ಚಾಲನೆ ಪರವಾನಿಗೆ ಮತ್ತು ಮೊಬೈಲ್ ಪೋನ್ ಗಳನ್ನು ಎಟಿಎಸ್ ವಶಪಡಿಸಿಕೊಂಡಿತ್ತು.
ವಕಾಸ್ ಇಬ್ರಾಹಿಂ ಖಾನ್ ಎಂಬ ಸುಳ್ಳು ಹೆಸರಿನಲ್ಲಿ ಕಾನ್ಪುರದ ಕಲ್ಯಾಣಪುರ ಪ್ರದೇಶದಲ್ಲಿರುವ ಸಿತಾರಾ ಬೇಗಂ ಮನೆಯಲ್ಲಿ ಬಾಡಿಗೆ ಆಧಾರದಲ್ಲಿ ನೆಲೆಸಿದ್ದ.
ಸಿತಾರಾ ಬೇಗಂ ಸೇರಿದಂತೆ 19 ಶಂಕಿತ ಭಯೋತ್ಪಾದನೆ ಆರೋಪಿಗಳ ವಿರುದ್ಧದ ಪ್ರಕರಣಗಳನ್ನು ಹಿಂದೆಗೆದುಕೊಳ್ಳಲು ಹಿಂದಿನ ಅಖಿಲೇಶ ಯಾದವ ಸರಕಾರವು 2013ರಲ್ಲಿ ನಿರ್ದೇಶ ನೀಡಿತ್ತಾದರೂ, ಅಲಹಾಬಾದ್ ಉಚ್ಚ ನ್ಯಾಯಾಲಯವು ಅದನ್ನು ತಡೆಹಿಡಿದಿತ್ತು.







