ಕಾಶ್ಮೀರದ ಮೇಲೆಯೇ ಬಾಂಬ್ ದಾಳಿ ಮಾಡಿ ಎಂದ ಪ್ರವೀಣ್ ತೊಗಾಡಿಯಾ
.jpg)
ವಡೋದರ, ಎ. 29: ಭದ್ರತಾ ಪಡೆಗಳ ಮೇಲೆ ಉಗ್ರವಾದಿಗಳು ದಾಳಿ ನಡೆಸುವುದನ್ನು ನಿಲ್ಲಿಸಲು ಸರಕಾರ ಕಾಶ್ಮೀರ ಕಣಿವೆಯಲ್ಲಿ ‘ಕಾರ್ಪೆಟ್ ಬಾಂಬಿಂಗ್’ ನಡೆಸಬೇಕೆಂದು ವಿಶ್ವ ಹಿಂದೂ ಪರಿಷದ್ ನಾಯಕ ಪ್ರವೀಣ್ ತೊಗಾಡಿಯಾ ಆಗ್ರಹಿಸಿದ್ದಾರೆ.
ಪರಶುರಾಮ ಜಯಂತಿಯ ಸಂದರ್ಭ ಇಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಸಮಾರಂಭವೊಂದರಲ್ಲಿ ಮಾತನಾಡಿದ ತೊಗಾಡಿಯಾ ‘‘ಉರಿ ಹಾಗೂ ಕುಪ್ವಾರ ಸೇನಾ ಶಿಬಿರಗಳ ಮೇಲಿನ ದಾಳಿಯ ಹಿನ್ನೆಲೆಯಲ್ಲಿ ಇಂತಹ ದಾಳಿಗಳನ್ನು ನಿಲ್ಲಿಸಲು ಕಾರ್ಪೆಟ್ ಬಾಂಬಿಂಗ್ ನಡೆಸಬೇಕು. ಸೇನಾ ಶಿಬಿರಗಳ ಮೇಲಿನ ದಾಳಿ ಹಾಗೂ ಕಲ್ಲು ತೂರಾಟ ಪ್ರಕರಣಗಳನ್ನು ಸರಕಾರದ ವಿರುದ್ಧ ಯುದ್ಧ ಎಂದು ಪರಿಗಣಿಸಬೇಕು,’’ ಎಂದರು.
ಭದ್ರತಾ ಪಡೆಗಳೊಂದಿಗೆ ಯುದ್ಧದಲ್ಲಿರುವ ಉಗ್ರವಾದಿಗಳನ್ನು ಸದೆಬಡಿಯುವಂತೆಯೂ ಅವರು ಸರಕಾರವನ್ನು ಆಗ್ರಹಿಸಿದ್ದಾರೆ. ನಾಗರಿಕರು ಮತ್ತು ಸೇನಾ ಸಿಬ್ಬಂದಿ ನಡುವೆ ವೈರತ್ವವೂ ಕಾಶ್ಮೀರದಲ್ಲಿ ಹೆಚ್ಚುತ್ತಿದೆ ಎಂದವರು ಹೇಳಿದರು.
‘‘ಅವರಿಗೆ ಯಾವುದೇ ದಯೆ ತೋರಿಸದೆ ಬಾಂಬ್ ದಾಳಿ ನಡೆಸಬೇಕು, ಇಲ್ಲದೇ ಹೋದಲ್ಲಿ ಅವರು ಇತರ ರಾಜ್ಯಗಳಿಗೂ ನುಗ್ಗಿ ಈ ದೇಶವನ್ನು ಚೂರುಚೂರಾಗಿಸಬಹುದು,’’ ಎಂದು ತೊಗಾಡಿಯಾ ಹೇಳಿದರು.





