ಹತ್ಯೆಗಳನ್ನು ರಾಜಕೀಯಗೊಳಿಸುವ ಬಿಜೆಪಿ ಬಣ್ಣ ಬಯಲು: ಸುಹೈಲ್ ಕಂದಕ್
ಮಂಗಳೂರು, ಎ.29: ಕೊಣಾಜೆ ಪಜೀರು ನಿವಾಸಿ ಕಾರ್ತಿಕ್ ರಾಜ್ ಹತ್ಯೆಯ ನೈಜ ಆರೋಪಿಗಳಾದ ಆತನ ಸಹೋದರಿ ಮತ್ತು ಆಕೆಯ ಪ್ರಿಯತನನನ್ನು ಬಂಧಿಸಿದ ಪೋಲೀಸರ ಕಾರ್ಯಾಚರಣೆ ಶ್ಲಾಘನೀಯವಾಗಿದ್ದು, ಇದು ಹತ್ಯೆಗಳನ್ನು ರಾಜಕೀಯ ಮಾಡುವ ಶಕ್ತಿಗಳ ಕರಾಳ ಮುಖವನ್ನು ಅನಾವರಣಗೊಳಿಸಿದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಹೈಲ್ ಕಂದಕ್ ಹೇಳಿದ್ದಾರೆ.
ಕಾರ್ತಿಕ್ ಕೊಲೆ ಪ್ರಕರಣವನ್ನು ಜಿಲ್ಲೆಯ ಕೋಮುಸಾಮರಸ್ಯ ಕದಡಲು ಮತ್ತು ರಾಜಕೀಯಗೊಳಿಸಿ ಸಚಿವ ಯು.ಟಿ. ಖಾದರ್ ಅವರ ವರ್ಚಸ್ಸಿಗೆ ಮಸಿ ಬಳಿಯಲು ಪ್ರಯತ್ನಿಸಿದ ಎಲ್ಲಾ ವಂಚಕರ ಬಣ್ಣ ಈ ಮೂಲಕ ಬಯಲಾಗಿದೆ. ಕಾರ್ತಿಕ್ ರಾಜ್ ಪ್ರಕರಣದಲ್ಲಿ "ಜಿಲ್ಲೆಗೆ ಬೆಂಕಿ ಹಚ್ಚುತ್ತೇನೆ" ಎಂದಿದ್ದ ಸಂಸದ ನಳಿನ್ ಕುಮಾರ್ ಕಟೀಲ್ ಈಗ ಬೆಂಕಿಯನ್ನು ಎಲ್ಲಿಗೆ ಹಚ್ಚುತ್ತಾರೆ ಎಂಬುವುದನ್ನು ಜನರಿಗೆ ವಿವರಿಸಬೇಕಾಗಿದೆ ಎಂದ ಸುಹೈಲ್ ಕಂದಕ್, ಪೊಲೀಸರ ಪ್ರಾಮಾಣಿಕ ಮತ್ತು ದಕ್ಷ ಕಾರ್ಯಾಚರಣೆ ರಾಜ್ಯ ಸರಕಾರದ ನ್ಯಾಯ ಸಮಾನತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅಭಿಪ್ರಾಯಿಸಿದ್ದಾರೆ.
ಬಂಟ್ವಾಳದ ಹರೀಶ್ ಎಂಬ ಅಮಾಯಕನ ಹತ್ಯೆಯಲ್ಲೂ ಬಿಜೆಪಿಗರು ಮತ್ತು ಸಂಘಪರಿವಾರದ ನಾಯಕರು ರಾಜಕೀಯ ಮಾಡಿದ್ದರು. ಅದೇ ರೀತಿ ಸವಣೂರಿನಲ್ಲಿ ತಮ್ಮದೇ ಕಾರ್ಯಕರ್ತರ ಮೂಲಕ ಹಿಂದೂ ಸಮಾಜೋತ್ಸವ ಬ್ಯಾನರನ್ನು ಹಾನಿಗೊಳಿಸಿ ಗಲಭೆಗೆ ಸಂಚು ರೂಪಿಸಿ ವಿಫಲವಾದರು. ಕರೋಪಾಡಿ ಜಲೀಲ್ ರವರ ಹತ್ಯೆಯನ್ನು ಪರಿವಾರ ಯುವಕರಿಂದ ಮಾಡಿಸಿ ಕರಾವಳಿಯಲ್ಲಿ ಕೋಮು ವೈಷಮ್ಯ ಹೆಚ್ಚುವಂತೆ ಮಾಡಿದೆ. ಸರ್ವ ಧರ್ಮೀಯರ ಸೌಹಾರ್ದತೆ ಕದಡಲು ಮತ್ತು ರಾಜಕೀಯ ಅಸ್ತಿತ್ವವನ್ನು ಉಳಿಸಲು ಇವರು ಅಮಾಯಕ ಹಿಂದೂ ಯುವಕರ ಬದುಕನ್ನೂ ನಾಶ ಮಾಡುತ್ತಿದ್ದಾರೆ ಎಂದವರು ಪ್ರಕಟನೆಯಲ್ಲಿ ಹೇಳಿದ್ದಾರೆ.







