ಪರಿಶಿಷ್ಟರ ಅನುದಾನ ಬಳಕೆಗೆ ವಿಶೇಷ ಕ್ರಮ: ಸಚಿವ ರೈ

ಮಂಗಳೂರು, ಎ.29: ರಾಜ್ಯ ಸರಕಾರ ತನ್ನ ಬಜೆಟ್‌ನಲ್ಲಿ ಈ ಬಾರಿ ಪರಿಶಿಷ್ಟರ ಅಭಿವೃದ್ಧಿಗಾಗಿ ವಿಶೇಷವಾದ ಅನುದಾನವನ್ನು ನೀಡಿದೆ. ಅಧಿಕಾರಿಗಳು ಅನುದಾನವನ್ನು ಸಮರ್ಪಕವಾಗಿ ಬಳಸದಿದ್ದಲ್ಲಿ ವರ ಮೇಲೆ ಕ್ರಮಿನಲ್ ಪ್ರಕರಣ ದಾಖಲಿಸುವ ವಿಶೇಷ ಅಧಿಕಾರವಿರುವ ಮಸೂದೆ ಜಾರಿಯಲ್ಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.
ಅವರು ಶನಿವಾರ ನಗರದ ನೆಹರೂ ಮೈದಾನದಲ್ಲಿ ಜಿಲ್ಲಾ ಆದಿದ್ರಾವಿಡ ಸಮಾಜ ಸೇವಾ ಸಂಘದ ದಶಮಾನೋತ್ಸವದ ಬೃಹತ್ ಸಮಾವೇಶ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ 126ನೇ ಜನ್ಮೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದುರ್ಬಲರಿಗೆ ಮೀಸಲಾತಿಯ ಮೂಲಕ ಸಹಾಯವಾದರೆ ಪ್ರಬಲರಿಗೆ ಇದರಿಂದ ತೊಂದರೆಯಾಗುತ್ತದೆ ಎನ್ನುವ ಮನೋಭಾವವಿದೆ. ಇಂತಹ ಸಮಯದಲ್ಲಿ ಇಬ್ಬರೂ ಅರ್ಥಮಾಡಿಕೊಂಡು ಹೊಂದಾಣಿಕೆಯಿಂದ ಬದುಕುವುದನ್ನು ಕಲಿುಬೇಕು ಎಂದು ಅವರು ಹೇಳಿದರು.
ಮೈಸೂರಿನ ಭಾವೈಕ್ಯ ಕೇಂದ್ರ ಶ್ರೀಬಸವಧ್ಯಾನ ಮಂದಿರದ ಶ್ರೀ ಬಸವಲಿಂಗ ಮೂರ್ತಿ ಸ್ವಾಮೀಜಿ ಆರ್ಶೀವಚನ ನೀಡುತ್ತಾ ಮಾತನಾಡಿ, ಬುದ್ಧ, ಬಸವಣ್ಣ ಸಮಾಜದ ಆದರ್ಶ ಪುರುಷರು. ಸಾಮಾಜಿಕ ಸ್ಥಾನಮಾನವನ್ನು ಕಂಡುಕೊಳ್ಳಲು ಅವರು ಾಡಿದ ಕೆಲಸಗಳು ಅಪಾರ ಎಂದರು.
ಕೇಮಾರು ಶ್ರೀಈಶ ವಿಠಲದಾಸ ಸ್ವಾಮೀಜಿ ಮಾತನಾಡಿ, ಸಮಾಜ ಒಳ್ಳೆಯದಾಗಬೇಕಾದರೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಶಿಕ್ಷಣ ಒದಗಿಸಬೇಕು. ಧಾರ್ಮಿಕ ಆಚಾರ ವಿಚಾರಗಳಲ್ಲಿ ಅಸ್ಪಶೃಶ್ಯತೆ ಎನ್ನುವ ಕೀಳು ವಿಚಾರ ಬಿಟ್ಟು ಸಮಾನತೆಗಾಗಿ ಹೋರಾಟ ನಡೆಯಬೇಕು ಎಂದರು.
ಈ ಸಂದರ್ಭ ಸಂಸದ ನಳಿನ್ ಕುಮಾರ್ ಕಟೀಲ್, ಮೇಯರ್ ಕವಿತಾ ಸನಿಲ್, ಉಪಮೇಯರ್ ರಜನೀಶ್,ವಿಧಾನಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ, ಕ್ಯಾ. ಗಣೇಶ್ ಕಾರ್ನಿಕ್, ಮಾಜಿ ಸಚಿವ ಅಮರನಾಥ್ ಶೆಟ್ಟಿ, ಜಿ.ಪಂ.ಮಾಜಿ ಅಧ್ಯಕ್ಷ ಸೋಮನಾಥ ಉಪ್ಪಿನಂಗಡಿ, ಕಾರ್ಪೊರೇಟರ್‌ಗಳಾದ ಎ.ಸಿ. ವಿನಯರಾಜ್, ಅಬ್ದುಲ್ ಲತ್ೀ, ಮನಪಾ ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ನಾಗವೇಣಿ, ಗುರುವಾಯನಕೆರೆ ನಾಗರಿಕ ಸೇವಾ ಟ್ರಸ್ಟ್ ಸೋಮನಾಥ್ ನಾಯಕ್, ಜಿಲ್ಲಾ ಆದಿದ್ರಾವಿಡ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಶೇಖರ್ ಬಳ್ಳಾಲ್‌ಭಾಗ್, ಜಿಲ್ಲಾ ಅಧ್ಯಕ್ಷ ಮೋಹನ್ ನೆಲ್ಲಿಗುಂಡಿ ಮೊದಲಾದವರು ಉಪಸ್ಥಿತರಿದ್ದರು.
ಈಬಳಿಕ ಆದಿದ್ರಾವಿಡ ಸಮಾಜದ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು. ಸಂಘದ ಸದಸ್ಯ ರಾಮ್ ಕುಮಾರ್ ಆದಿದ್ರಾವಿಡ ಸಮಾಜದ ಹಕ್ಕೋತ್ತಾಯವನ್ನು ಮಂಡಿಸಿದರು.
ಪ್ರತಿಭಾವಂತರಿಗೆ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ, ಅಶಕ್ತರಿಗೆ ಧನಸಹಾಯ, ನಾನಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಸಭಾ ಕಾರ್ಯಕ್ರಮಕ್ಕೆ ಮೊದಲು ನಗರದ ಜ್ಯೋತಿಯಿಂದ ನೆಹರೂ ಮೈದಾನದ ವರೆಗೆ ಭವ್ಯ ಮೆರವಣಿಗೆ ನಡೆಯಿತು.







