ಭೂವಿವಾದದ ಸುಳಿಯಲ್ಲಿ ಇನ್ನೋರ್ವ ಮಹಾರಾಷ್ಟ್ರ ಸಚಿವ

ಮುಂಬೈ,ಎ.29: ಭೂ ವಿವಾದದಿಂದಾಗಿ ಏಕನಾಥ ಖಾಡ್ಸೆ ಅವರು ಸಚಿವ ಸ್ಥಾನವನ್ನು ಕಳೆದುಕೊಂಡ ಬಳಿಕ ಇದೀಗ ಮಹಾರಾಷ್ಟ್ರದ ಫಡ್ನವೀಸ್ ಸರಕಾರದ ಇನ್ನೋರ್ವ ಸಚಿವ ರಾಮದಾಸ್ ಕದಂ ಅವರು ಭೂವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ. ಕದಂ ಅವರು ಕೆಲವು ವರ್ಷಗಳ ಹಿಂದೆ ವಿದ್ಯಾರ್ಥಿಗಳ ಹಾಸ್ಟೆಲ್ ನಿರ್ಮಾಣಕ್ಕಾಗಿ ರತ್ನಾಗಿರಿ ಜಿಲ್ಲೆಯ ಖೇಡ್ ತಾಲೂಕಿನಲ್ಲಿಯ ತನ್ನ ಕೃಷಿಭೂಮಿಯನ್ನು ಕಬಳಿಸಿದ್ದಾರೆ ಎಂದು ನಿವೃತ್ತ ಸರಕಾರಿ ಅಧಿಕಾರಿ ಆತ್ಮರಾಮ ಭುವಾಡ್ ಆರೋಪಿಸಿದ್ದಾರೆ.
ಭುವಾಡ್ ಹೇಳಿಕೆ ಅಪ್ಪಟ ಸುಳ್ಳು. ಅವರು ಈ ಭೂಮಿಗೆ ಸಂಬಂಧಿಸಿದಂತೆ ಈಗಾಗಲೇ ಎರಡು ನ್ಯಾಯಾಲಯಗಳಲ್ಲಿ ಎರಡು ಪ್ರಕರಣಗಳನ್ನು ಸೋತಿದ್ದಾರೆ. ಉದ್ದೇಶಪೂರ್ವಕವಾಗಿ ತನ್ನ ಹೆಸರು ಕೆಡಿಸುತ್ತಿರುವುದಕ್ಕಾಗಿ 10 ಕೋ.ರೂ.ಪರಿಹಾರ ಕೋರಿ ಅವರ ವಿರುದ್ಧ ಮಾನನಷ್ಟ ಪ್ರಕರಣವನ್ನು ದಾಖಲಿಸುವುದಾಗಿ ಕದಂ ಪ್ರತಿಕ್ರಿಯಿಸಿದ್ದಾರೆ. ಶಿವಸೇನೆಯ ಹಿರಿಯ ನಾಯಕರಾಗಿರುವ ಕದಂ ಪರಿಸರ ಖಾತೆಯನ್ನು ಹೊಂದಿದ್ದಾರೆ.
ಈ ಹಿಂದೆ ಫಡ್ನವೀಸ್ ಸರಕಾರದಲ್ಲಿ ಕಂದಾಯ ಸಚಿವರಾಗಿದ್ದ ಏಕನಾಥ ಖಾಡ್ಸೆ ಅವರು ಪುಣೆಯಲ್ಲಿನ ನಿವೇಶನವೊಂದರ ವಿವಾದದಲ್ಲಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. ಅವರ ವಿರುದ್ಧ ಇತ್ತೀಚಿಗೆ ಪೊಲೀಸ್ ದೂರು ಸಹ ದಾಖಲಾಗಿದೆ.
ಕದಂ 2008ರಲ್ಲಿ ರಾಜ್ಯ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಿದ್ದಾಗ ತನ್ನ ಕುಟುಂಬಕ್ಕೆ ಸೇರಿದ 1.02 ಎಕರೆ ಜಮೀನನ್ನು ಕಬಳಿಸಿದ್ದರು ಮತ್ತು ಅಲ್ಲಿ ಅವರು ನಡೆಸುತ್ತಿರುವ ಶಿವತೇಜ್ ಆರೋಗ್ಯ ಸಂಸ್ಥಾ ತನ್ನ ಯೋಗಿತಾ ಡೆಂಟಲ್ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್‌ವೊಂದನ್ನು ನಿರ್ಮಿಸಿದೆ ಎಂದು ಭುವಾಡ್ ಆರೋಪಿಸಿದ್ದಾರೆ.
ಭೂಮಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಪ್ರತಿಪಕ್ಷ ನಾಯಕ ಧನಂಜಯ ಮುಂಢೆ ಅವರಿಗೆ ಕಳುಹಿಸಲು ತಾನು ಸಿದ್ಧನಿದ್ದೇನೆ ಎಂದು ಕದಂ ನುಡಿದರು.
ಭುವಾಡ್ ಆರೋಪದ ಹಿನ್ನೆಲೆಯಲ್ಲಿ ಮುಂಢೆ ಅವರು ಕದಂ ರಾಜೀನಾಮೆಗೆ ಆಗ್ರಹಿಸಿದ್ದಾರೆ.







