ಅರಿವು ಯೋಜನೆಯ ಮೂಲಕ ಅಲ್ಪ ಸಂಖ್ಯಾತ ವಿದ್ಯಾರ್ಥಿಗಳಿಗೆ 100 ಕೋಟಿ ರೂ. ಶೂನ್ಯ ಬಡ್ಡಿದರದ ಸಾಲ ಯೋಜನೆ : ಎಂ.ಎ.ಗಫೂರ್
ಬಿಐಟಿಯಲ್ಲಿ ಟ್ಯಾಲೆಂಟ್ ಹಂಟ್ ವಿದ್ಯಾರ್ಥಿ ವೇತನ 2017 ಕಾರ್ಯಕ್ರಮ

ಮಂಗಳೂರು,ಎ.29:ಕರ್ನಾಟಕ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮ ನಿ.ವತಿಯಿಂದ ಅರಿವು ಯೋಜನೆಗಾಗಿ 100 ಕೋಟಿ ಅನುದಾನವನ್ನು ಈ ವರ್ಷ ಖರ್ಚು ಮಾಡಲು ನಿಗದಿ ಪಡಿಸಲಾಗಿದೆ.ಈಗಾಗಲೇ ಸಿಇಟಿ ಅಭ್ಯರ್ಥಿಗಳಿಗಾಗಿ ಈ ಯೋಜನೆಯಿಂದ 20ಕೋಟಿ ರೂ. ವೆಚ್ಚ ಮಾಡಲಾಗಿದೆ.ಅರಿವು ಯೋಜನೆ ವೃತ್ತಿ ಪರ ಶಿಕ್ಷಣ ಮುಂದುವರಿಸಲು ಅಲ್ಪ ಸಂಖ್ಯಾತ ವಿದ್ಯಾರ್ಥಿಗಳಿಗೆ ಸಹಕಾರಿಯಾಗಿದೆ ಎಂದು ಕರ್ನಾಟಕ ಅಲ್ಪ ಸಂಖ್ಯಾತರ ಅಧ್ಯಕ್ಷ ಎಂ.ಎ.ಗಫೂರ್ ತಿಳಿಸಿದ್ದಾರೆ.
ಅವರು ಇಂದು ಇನೋಳಿಯ ಬಿಐಟಿ ಆವರಣದ ಹಮ್ಮಿಕೊಂಡ ಟ್ಯಾಲೆಂಟ್ ಹಂಟ್ ಸ್ಕಾಲರ್ ಶಿಫ್ 2017 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕರ್ನಾಟಕ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ವಿವಿಧ ಯೋಜನೆಗೆ ಸಂಬಂಧಿಸಿದಂತೆ ಒಟ್ಟು 330 ಕೋಟಿ ರೂಗಳ ಯೋಜನೆಯನ್ನು ಹೊಂದಿದೆ .ಅರಿವು ಯೋಜನೆಯಲ್ಲಿ ಪಿಯುಸಿ ಪಾಸಾದ ವಿದ್ಯಾರ್ಥಿಗಳು ವೃತ್ತಿಪರ ಶಿಕ್ಷಣ ಅಂದರೆ ವೈದ್ಯಕೀಯ ,ದಂತ ವೈದ್ಯಕೀಯ,ಇಂಜಿನಿಯರಿಂಗ್,ಪದವಿ,ಡಿಪ್ಲೋಮಾ,ಐಟಿಐ ಮುಂತಾದ ಕೋರ್ಸ್ ಮಾಡಲು ಬಯಸುವವರಿಗೆ 2ಲಕ್ಷದಿಂದ 20 ಲಕ್ಷದವರಿಗೆ ವಿದೇಶದಲ್ಲಿ ವ್ಯಾಸಂಗ ಮಾಡಬಯಸುವವರಿಗೆ 20ರಿಂದ 40 ಲಕ್ಷದವರೆಗೆ ರೂಗಳವರೆಗೆ ಸಾಲ ಸಹಾಯ ನಿಡಲಾಗುವುದು.ಸಂಜೆ ಕಾಲೇಜಿನಲ್ಲಿ ಕಲಿಯುತ್ತಿರುವವರಿಗೂ ಸಾಲ ಸಹಾಯ ನೀಡಲಾಗುತ್ತದೆ .ಸರಕಾರದ ಸೀಟ್ ಸಿಗದೆ ಇರುವ ವಿದ್ಯಾರ್ಥಿಗಳಿಗೆ ಶೇ 75 ಟ್ಯೂಶನ್ ಫೀಸ್ ಶೂನ್ಯ ಬಡ್ಡಿ ದರದಲ್ಲಿ ನಿಗಮದಿಂದ ನೀಡಲಾಗುವುದು ಎಂದು ಗಫೂರ್‌ತಿಳಿಸಿದರು.
ಆನ್ ಲೈನ್‌ನಲ್ಲಿಯೂ ಅರ್ಜಿ ಸ್ವೀಕರಿಸಲಾಗುತ್ತದೆ ಎಂದು ಗಫೂರ್ ತಿಳಿಸಿದರು.ಅಲ್ಪ ಸಂಖ್ಯಾತರ ಸಣ್ಣ ಗುಂಪುಗಳಿಗೂ ಸಾಲ ಸಹಾಯ ನೀಡಲಾಗುತ್ತದೆ.ಬಿಐಟಿಯಲ್ಲಿ ಪುಟ್ಟ ಭಾರತವೇ ನಿರ್ಮಾಣವಾಗಿದೆ .ಶಿಕ್ಷಣದಿಂದ ಸಮುದಾಯದ ಅಭಿವೃದ್ಧಿ ಸಾಧ್ಯ ಎಂದು ಗಫೂರ್ ತಿಳಿಸಿದರು.
ಸಮಾರಂಭದ ಅಧ್ಯಕ್ಷತೆವಹಿಸಿದ್ದ ಬ್ಯಾರೀಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಸೈಯ್ಯದ್ ಮುಹಮ್ಮದ್ ಬ್ಯಾರಿ ಮಾತನಾಡುತ್ತಾ,ಒಂದು ಸಣ್ಣ ಗುಡಿಸಲಿನಿಂದ ಆರಂಬಗೊಂಡ ಕೋಡಿಯ ಬ್ಯಾರೀಸ್ ಶಿಕ್ಷಣ ಸಂಸ್ಥೆ ತನ್ನ ದೂರದೃಷ್ಟಿಯ ಫಲವಾಗಿ ಬಿಐಟಿಯಂತಹ ಉನ್ನತ ಶಿಕ್ಷಣ ಸಂಸ್ಥೆಯನ್ನು ಹೊಂದಲು ಸಾಧ್ಯವಾಗಿದೆ.ಅನುಭವಿಗಳ ಮಾರ್ಗದರ್ಶನದಿಂದ ಬಿಐಟಿ ಪ್ರಥಮವರ್ಷದಲ್ಲಿ ಶೇ 80 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್,ಶೇ 19 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಫಲಿತಾಂಶ ಸಾಧ್ಯವಾಗಿದೆ.ಬಿಐಟಿ ಸಂಸ್ಥೆಯಲ್ಲಿ ಎಲ್ಲಾ ಜಾತಿ ಧರ್ಮದ ಜನರು ಶೈಕ್ಷಣಿಕ ಸಾಧನೆ ಮಾಡಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ ಎಂದು ಮುಹಮ್ಮದ್ ಬ್ಯಾರಿ ತಿಳಿಸಿದ್ದಾರೆ.
ಬಿಐಟಿಯ ಹಿರಿಯ ಸಲಹೆಗಾರ ಡಾ.ಎಸ್.ಕೆ.ರಾಯ್ಕರ್ ಮಾತನಾಡುತ್ತಾ ಶಿಕ್ಷಣ ಕ್ಷೇತ್ರ ವಾಣಿಜ್ಯ ಉದ್ಯಮ ಕ್ಷೇತ್ರವಾಗಿ,ವ್ಯಾವಹಾರಿಕ ಕ್ಷೇತ್ರಗಳಾಗಿ ಬೆಳೆಯುತ್ತಿರುವ ಸಂದರ್ಭದಲ್ಲಿ ಬ್ಯಾರೀಸ್ ನಂತಹ ಕೆಲವೇ ಸಂಸ್ಥೆಗಳು ಇಂದಿಗೂ ಶಿಕ್ಷಣ ಕ್ಷೇತ್ರವನ್ನು ಸೇವಾ ಕ್ಷೇತ್ರವಾಗಿ ಉಳಿಸಿಕೊಂಡಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಟ್ಯಾಲೆಂಟ್ ಹಂಟ್ ವಿಭಾಗದಲ್ಲಿ ಆಯ್ಕೆಯಾದ 17 ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ಪತ್ರ ನೀಡಲಾಯಿತು.3ವಿದ್ಯಾರ್ಥಿಗಳಿಗೆ ಸಂಪೂರ್ಣ ಶುಲ್ಕ ವಿನಾಯಿತಿಯ ಪತ್ರ ನೀಡಲಾಯಿತು.ಬಿಐಟಿ ಪಾಂಶುಪಾಲ ಡಾ.ಅಬ್ದುಲ್ ಕರೀಂ ಬೀಡ್ಸ್ ಪ್ರಾಂಶುಪಾಲ ಬಾವಿಶ್ ಮೆಹ್ತಾ,ಬಿಐಟಿ ಪಾಲಿಟೆಕ್ನಿಕ್‌ನ ಪಾಂಶುಪಾಲ ಅಝೀಝ್ ಮುಸ್ತಾಫ,ಮುಸ್ತಾಫ ಬಸ್ತಿಕೋಡಿ ಸ್ವಾಗತಿಸಿದರು. ಸಂಯೋಜಕ ಝಮೀಲ್ ಅಹಮ್ಮದ್ ವಂದಿಸಿದರು.ಫಾಹಿಮಾ.ಎ.ಎಸ್ ಕಾರ್ಯಕ್ರಮ ನಿರೂಪಿಸಿದರು. ಡಾ.ಪ್ರಮೀಳಾ ಟ್ಯಾಲೆಂಟ್ ಹಂಟ್ ಸ್ಕಾಲರ್ ಶಿಪ್ 2017ರಲ್ಲಿ ಆಯ್ಕೆಯಾದವರ ವಿವರ ನೀಡಿದರು.







