ಮಂಗಳೂರು: ವಿಶ್ವ ನೃತ್ಯ ದಿನಾಚರಣೆ

ಮಂಗಳೂರು, ಎ.29: ಕರ್ನಾಟಕ ಸಂಗೀತ ನೃತ್ಯ ಅಕಾಡಮಿ ವತಿಯಿಂದ ಶನಿವಾರ ನಗರದ ಪುರಭವನದಲ್ಲಿ ವಿಶ್ವ ನೃತ್ಯ ದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಸಾಪ ದ.ಕ.ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರಾ ಬೃಹತ್ ಕಟ್ಟಡಗಳು, ಕಾಂಕ್ರಿಟ್ ರಸ್ತೆಗಳು ದೇಶದ ಸಂಸ್ಕೃತಿಯನ್ನು ಯಾವ ಕಾರಣಕ್ಕೂ ಬಿಂಬಿಸುವುದಿಲ್ಲ. ಇಲ್ಲಿನ ಕಲೆ, ಸಾಹಿತ್ಯ, ಯಕ್ಷಗಾನ, ಭರತನಾಟ್ಯ ಇತ್ಯಾದಿ ಸಂಸ್ಕೃತಿಯ ಪ್ರತೀಕವಾಗಿದೆ.ಇವುಗಳನ್ನು ಆರ್ಥಿಕ ನೆಲೆಯಲ್ಲಿ ನೋಡದೆ ಭಾವನಾತ್ಮಕ ಸಂಬಂಧ ಬೆಸೆಯುವಂತಹ ಪ್ರಕ್ರಿಯೆಗೆ ಒಳಪಡಿಸಬೇಕಾಗಿದೆ ಎಂದರು.
ಶಾಸ್ತ್ರೀಯ ವ್ಯವಸ್ಥೆಯ ಸಂಕೇತದಂದಿರುವ ನೃತ್ಯದಲ್ಲಿ ಅನೇಕ ವೈಶಿಷ್ಟಗಳಿವೆ. ಅವುಗಳಿಗೆ ರಾಮಾಯಣ, ಮಹಾಭಾರತದ ಕಾಲಕ್ಕೂ ಕೊಂಡೊಯ್ಯುವ ಶಕ್ತಿ ಇದೆ. ಯುವ ಜನಾಂಗ ಸಾತ್ವಿಕ ಅಪೇಕ್ಷೆಯನ್ನಿಟ್ಟುಕೊಂಡು ನೃತ್ಯವನ್ನು ಆರಾಧಿಸುವ ಮತ್ತು ಸಾಧಿಸುವ ಛಲ ಹೊಂದಿರಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಚಂದ್ರಶೇಖರ ಶೆಟ್ಟಿ, ಶಾರದಾ ಮಣಿ ಶೇಖರ್, ಸುಧೀರ್, ಚಂದ್ರಶೇಖರ ನಾವಡ, ಕೆ.ವಿ.ರಮಣ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಕುಮಾರ್ ಭಾಗವಹಿಸಿದ್ದರು.
ಅಕಾಡಮಿಯ ರಿಜಿಸ್ಟ್ರಾರ್ ಬನಶಂಕರಿ ವಿ. ಅಂಗಡಿ ಸ್ವಾಗತಿಸಿದರು. ಉಪನ್ಯಾಸಕಿ ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.







