ಉಳ್ಳಾಲ ಸೈಯದ್ ಮದನಿ ಟ್ರಸ್ಟ್‌ನಿಂದ ಮದ್ರಸ ಪರೀಕ್ಷೆ

ಉಳ್ಳಾಲ, ಎ.29: ಸೈಯದ್ ಮದನಿ ಅರಬಿಕ್ ಎಜುಕೇಶನ್ ಟ್ರಸ್ಟ್ ಆಶ್ರಯದಲ್ಲಿ ಮದ್ರಸ ಪಬ್ಲಿಕ್ ಪರೀಕ್ಷೆ ಶನಿವಾರ ಆರಂಭಗೊಂಡಿದ್ದು, ಪ್ರಥಮ ಬಾರಿಗೆ ಟ್ರಸ್ಟ್ ವಿದ್ಯಾರ್ಥಿಗಳು ನಿಗದಿತ ಕೇಂದ್ರಗಳಲ್ಲಿ ಪರೀಕ್ಷೆ ಬರೆದರು.
5, 7 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಇದೇ ಮೊದಲ ಬಾರಿಗೆ ಉಳ್ಳಾಲ ಹಝ್ರತ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪರೀಕ್ಷಾ ಕೇಂದ್ರಗಳನ್ನು ಆರಂಭಿಸಲಾಗಿದೆ. ಪಬ್ಲಿಕ್ ಪರೀಕ್ಷೆ ಇದಾಗಿರುವುದರಿಂದ ಶಾಲೆಯಲ್ಲಿ ನಡೆಯುವಂತೆ ಪರೀಕ್ಷೆ ಬರೆಯುವ ಮಕ್ಕಳಿಗರ ಗುರುತು ಚೀಟಿ, ಹಾಲ್ ಟಿಕೆಟ್ ವ್ಯವಸ್ಥೆ ಮಾಡಲಾಗಿದ್ದು, ಧಾರ್ಮಿಕ ಶಿಕ್ಷಣದಲ್ಲಿ ಹೊಸ ಪರಿಕಲ್ಪನೆಗೆ ನಾಂದಿ ಹಾಡಲಾಗಿದೆ.
ದರ್ಗಾ ಅಧೀನದಲ್ಲಿ ಚಾರಿಟೇಬಲ್ ಹಾಗೂ ಅರಬಿಕ್ ಎಜುಕೇಶನ್ ಟ್ರಸ್ಟ್ ಎನ್ನುವ ಪ್ರತ್ಯೇಕ ವಿಭಾಗಗಳಿದ್ದು ದರ್ಗಾ ಅಧ್ಯಕ್ಷರು ಇದರ ಮುಖ್ಯಸ್ಥರಾಗಿದ್ದರೆ, ಉಳಿದೆರೆಡು ಟ್ರಸ್ಟ್‌ಗಳಿಗೆ ಉಪಾಧ್ಯಕ್ಷರ ಸಹಿತ ಪದಾಧಿಕಾರಿಗಳು, ಟ್ರಸ್ಟಿಗಳಿದ್ದಾರೆ. ಇಲ್ಲಿನ ಯೋಜನೆಗಳನ್ನು ಪದಾಧಿಕಾರಿಗಳು ಚರ್ಚಿಸಿ ಕೈಗೊಳ್ಳುತ್ತಿದ್ದು, ದರ್ಗಾ ಸಮಿತಿಯ ಅನುಮತಿ ಬಳಿಕ ಕಾರ್ಯ ರೂಪಕ್ಕೆ ಬರುತ್ತದೆ. ಹಿಂದೆ ಆಯಾ ಮದ್ರ ಸಗಳಲ್ಲಿ ಪರೀಕ್ಷೆ ನಡೆಯುತ್ತಿತ್ತು. ಟ್ರಸ್ಟ್ ಅಧೀನದಲ್ಲಿ 33 ಮದ್ರಸಗಳಿದ್ದು, 1,200 ಮಕ್ಕಳು ಪರೀಕ್ಷೆ ಬರೆಯಲಿದ್ದಾರೆ.
ಶನಿವಾರ ಮೊದಲ ಪರೀಕ್ಷೆ ಆರಂಭಗೊಂಡಿದ್ದು, ಕೇಂದ್ರಕ್ಕೆ ಬರುವ ಮುನ್ನ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್, ಅರಬಿಕ್ ಎಜ್ಯುಕೇಶನ್ ಟ್ರಸ್ಟ್ ಉಪಾಧ್ಯಕ್ಷ ಮುಹಮ್ಮದ್, ಪ್ರಮುಖರಾದ ಅಮೀರ್ ಪಟ್ಣ, ಆಸಿಫ್ ಅಬ್ದುಲ್ಲಾ, ಅಬ್ಬಾಸ್, ಯು.ಟಿ.ಇಲ್ಯಾಸ್, ಯು.ಬಿ.ಯೂಸುಫ್, ಸುಲೈಮಾನ್ ಸಖಾಫಿ, ಟ್ರಸ್ಟಿ ಅಯೂಬ್ ಯು.ಬಿ., ಜಬ್ಬಾರ್ ಮೇಲಂಗಡಿ, ಹಮೀದ್ ಕೋಡಿ, ಯು.ಕೆ.ಮುಹಮ್ಮದ್ ಮುಸ್ತಫಾ, ಮೊಯಿನಬ್ಬ ಬೊಟ್ಟು, ಮುಸ್ತಫಾ ಇಸ್ಮಾಯೀಲ್ ಭೇಟಿ ನೀಡಿ ಪರಿಶೀಲಿಸಿದರು