ಕಾರ್ತಿಕ್ ರಾಜ್ ಕೊಲೆ ಪ್ರಕರಣ - ಬಿಜೆಪಿಯ ಬಣ್ಣ ಬಯಲು: ಲುಕ್‌ಮಾನ್ ಬಂಟ್ವಾಳ

ಮಂಗಳೂರು, ಎ.29: ಕೊಣಾಜೆ ಪೊಲೀಸ್ ಠಾಣೆಯ ಸಮೀಪ ನಡೆದ ಕಾರ್ತಿಕ್ ರಾಜ್ ಕೊಲೆ ಪ್ರಕರಣವನ್ನು ಮುಂದಿಟ್ಟು ರಾಜಕೀಯ ಲಾಭ ಪಡೆಯಲು ಯತ್ನಿಸಿದ್ದ ಬಿಜೆಪಿಯ ಬಣ್ಣ ಬಯಲಾಗಿದೆ ಎಂದು ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಲುಕ್‌ಮಾನ್ ಬಂಟ್ವಾಳ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕೊಲೆ ನಡೆದ ಬಳಿಕ ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲ್ ಸಹಿತ ಸಂಘಪರಿವಾರ ಮುಖಂಡರು, ಕಾರ್ಯಕರ್ತರು ಠಾಣೆಯ ಮುಂದೆ ಪ್ರತಿಭಟನೆ ನಡೆಸಿ ಒಂದು ಸಮುದಾಯವನ್ನು ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸಲು ಪ್ರಯತ್ನಿಸಿದ್ದರು. ಆದರೆ ಸಿಸಿಬಿ ಪೊಲೀಸರು ತಡವಾಗಿಯಾದರೂ ಆರೋಪಿಗಳನ್ನು ಬಂಧಿಸುವ ಮೂಲಕ ವಾಸ್ತವ ಸಂಗತಿ ಏನು ಎಂಬುದನ್ನು ಸಾರ್ವಜನಿಕರು ತಿಳಿಯುವಂತೆ ಮಾಡಿದೆ. ಪೊಲೀಸರ ಈ ಕಾರ್ಯಾಚರಣೆಗೆ ಅಭಿನಂದನೆ ಸಲ್ಲಿಸಿರುವ ಲುಕ್‌ಮಾನ್ ಬಂಟ್ವಾಳ, ಇನ್ನಾದರೂ ಬಿಜೆಪಿಗರು, ಸಂಘಪರಿವಾರವು ಇಂತಹ ಸೂಕ್ಷ್ಮ ವಿಚಾರದಲ್ಲಿ ರಾಜಕೀಯ ಬೇಳೆ ಬೇಯಿಸದಂತೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಂಸದರ ರಾಜೀನಾಮೆಗೆ ಆಗ್ರಹ
ಕೊಣಾಜೆ ಪೊಲೀಸ್ ಠಾಣೆಯ ಸಮೀಪ ಕೊಲೆಗೀಡಾದ ಪಜೀರ್ ನಿವಾಸಿ ಕಾರ್ತಿಕ್‌ರಾಜ್ ಪ್ರಕರಣದ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸುವ ಮುಖಾಂತರ ಪ್ರಕಣದ ಹಿಂದಿದ್ದ ಸಂಶಯ ನಿವಾರಿಸಿದ್ದಾರೆ.
ಈ ವಿಚಾರವನ್ನು ಮುಂದಿಟ್ಟುಕೊಂಡು ಹಲವು ಬಾರಿ ಪ್ರತಿಭಟನೆ ನಡೆಸಿ ನಿರ್ದಿಷ್ಟ ಸಮುದಾಯದ ಮೇಲೆ ಪ್ರಕರಣವನ್ನು ಎತ್ತಿಕಟ್ಟುವ ಪ್ರಯತ್ನ ಮಾಡಿ ಜಿಲ್ಲೆಯ ಶಾಂತಿಯ ವಾತಾವರಣ ಕೆಡಿಸಿ, ರಾಜಕೀಯ ಲಾಭ ಪಡೆಯಲು ಯತ್ನಿಸಿದ ಸಂಸದ ನಳಿನ್ ಕುಮಾರ್ ಕಟೀಲ್ ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ. ತಮ್ಮ ಘನತೆಯನ್ನು ಉಳಿಸಿಕೊಳ್ಳಲು ವಿಫಲರಾಗಿರುವ ಅವರು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ ಜಿಲ್ಲೆಯ ನೆಮ್ಮದಿ ಕಾಪಾಡಲಿ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಫಾರೂಕ್ ಉಳ್ಳಾಲ್ ಒತ್ತಾಯಿಸಿದ್ದಾರೆ.
ಸಂಘ ಪರಿವಾರ ಈಗ ಏನು ಹೇಳುತ್ತದೆ? : ಮುಸ್ಲಿಂ ವರ್ತಕರ ಸಂಘ ಪ್ರಶ್ನೆ
ಕೊಣಾಜೆ ಪೊಲೀಸ್ ಠಾಣೆಯ ಮುಂದೆ ನಡೆದ ಕಾರ್ತಿಕ್ ರಾಜ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸಂಸದ ನಳಿನ್ ಕುಮಾರ್ ಕಟೀಲ್ ಜಿಲ್ಲೆಗೆ ಬೆಂಕಿ ಹಚ್ಚುವ ಮಾತುಗಳನ್ನಾಡಿದ್ದರು. ಸಂಘಪರಿವಾರದ ನಾಯಕರು ಪ್ರತಿಭಟನೆ ನಡೆಸಿ ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ಆರೋಪಿಸಿದ್ದರು. ಈ ಮಧ್ಯೆ ಉದ್ಯಮಿಯೊಬ್ಬರು ಆರೋಪಿಗಳ ಸುಳಿವು ನೀಡಿದರೆ 1 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಿಸಿದ್ದರು. ಇದೀಗ ಸಿಸಿಬಿ ಪೊಲೀಸರು ಪ್ರಕರಣದ ಸತ್ಯಾಂಶ ಬಯಲಿಗೆಳೆದಿದ್ದು, ಮೂವರನ್ನು ಬಂಧಿಸಿದ್ದಾರೆ. ಈ ಬಗ್ಗೆ ಸಂಘಪರಿವಾರ ಏನು ಹೇಳುತ್ತದೆ ಎಂದು ಮುಸ್ಲಿಂ ವರ್ತಕರ ಸಂಘದ ಅಧ್ಯಕ್ಷ ಆಲಿ ಹಸನ್ ಪ್ರಶ್ನಿಸಿದ್ದಾರೆ.
ಕಾರ್ತಿಕ್ ರಾಜ್ ಬಿಜೆಪಿ ಮುಖಂಡನ ಪುತ್ರನಾದ ಕಾರಣಕ್ಕೆ ಬಿಜೆಪಿಗರು, ಸಂಘಪರಿವಾರ ಇದರ ರಾಜಕೀಯ ಲಾಭ ಪಡೆಯಲು ಯತ್ನಿಸಿತ್ತು. ಕೊಣಾಜೆ ಪೊಲೀಸ್ ಅಧಿಕಾರಿಗಳಿಗೆ ವಾಸ್ತವ ಸಂಗತಿ ತಿಳಿದಿದ್ದರೂ ಕೂಡ ಅದರ ಬಗ್ಗೆ ಸೊಲ್ಲೆತ್ತದೆ ವೌನ ತಾಳಿರುವುದು ಕೂಡ ಗಮನಾರ್ಹ. ಈ ನಿಟ್ಟಿನಲ್ಲಿ ಉನ್ನತ ಅಧಿಕಾರಿಗಳು ತನಿಖೆ ನಡೆಸಬೇಕು ಎಂದು ಅಲಿ ಹಸನ್ ಒತ್ತಾಯಿಸಿದ್ದಾರೆ.







