ರಾಷ್ಟ್ರ ಪ್ರಶಸ್ತಿ ಸಿಗದ ಬಗ್ಗೆ ಮನೋಜ್ ಬಾಜಪೇಯಿ ಹೇಳಿಕೆ ಏನು ಗೊತ್ತೇ ?
ಅಪ್ಪಟ ಕಲಾವಿದ ಮಾತ್ರ ಹೇಳಬಲ್ಲ ಮಾತಿದು

ಮುಂಬೈ, ಎ. 29 : ಈ ವರ್ಷ ಇದೇ ಮೊದಲ ಬಾರಿ ಅಕ್ಷಯ್ ಕುಮಾರ್ ಅತ್ಯುತ್ತಮ ನಟ ರಾಷ್ಟ್ರೀಯ ಪ್ರಶಸ್ತಿ ಪಡೆದಾಗ ದೊಡ್ಡ ವಿವಾದವೇ ಸೃಷ್ಟಿಯಾಯಿತು. ಅಕ್ಷಯ್ ಗಿಂತ ಈ ಪ್ರಶಸ್ತಿಗೆ ಆಲಿಗಡ್ ಚಿತ್ರದ ನಟನೆಗಾಗಿ ಮನೋಜ್ ಬಾಜಪೇಯಿ ಹೆಚ್ಚು ಅರ್ಹರಾಗಿದ್ದರು ಎಂದು ಹಲವರು ಹೇಳಿದರು. ಆದರೆ ಮನೋಜ್ ಮಾತ್ರ ಈ ಬಗ್ಗೆ ಮಾತನಾಡಿರಲಿಲ್ಲ. ಇದೀಗ ಅವರು ತಮ್ಮ ಮೌನ ಮುರಿದಿದ್ದಾರೆ.
" ನಾನು ಇನ್ನೂ ಈ ರಂಗದಲ್ಲಿ ಸರಿಯಾಗಿ ಆರಂಭವನ್ನೇ ಮಾಡಿಲ್ಲ. ಇದು ಫ್ಯಾಶನ್ ಗಾಗಿ ನೀಡುವ ಹೇಳಿಕೆಯಲ್ಲ. ಇಷ್ಟರೊಳಗೆ ತನ್ನ 75% ಪ್ರತಿಭೆಯನ್ನು ಬಳಸಿಕೊಂಡು ಆಗಿರಬೇಕಿತ್ತು ಎಂದು ಬಯಸುವ ವ್ಯಕ್ತಿಯೊಬ್ಬನ ಅನಿಸಿಕೆ ಇದು. ನಾನು ನನ್ನ ಪ್ರತಿಭೆಯನ್ನು 25% ಮಾತ್ರ ಬಳಸಿದ್ದೇನೆ ಎಂಬುದು ನನ್ನೊಳಗಿನ ನಟನ ಅನಿಸಿಕೆ. ನಾನು ನಿರಂತರ ಹೊಸ ನಿರ್ದೇಶಕ , ಹೊಸ ನಿರೂಪಣೆ , ಹೊಸ ಪಾತ್ರದ ಅನ್ವೇಷಣೆಯಲ್ಲಿರುತ್ತೇನೆ " ಎಂದು ಮನೋಜ್ ಹೇಳಿದ್ದಾರೆ.
" ನಾನು ಪ್ರತಿ ಬಾರಿ 100% ನಿರ್ವಹಣೆ ನೀಡುತ್ತೇನೆ. ಆದರೆ ಕಳೆದ ಐದು ವರ್ಷಗಳಲ್ಲಿ ಹಲವಾರು ಬದಲಾವಣೆಗಳಾಗಿವೆ. ಇದರಿಂದ ಒಳ್ಳೆಯದಾಗಿದೆ. ಆದ್ದರಿಂದ ಸಿನಿಮಾ ಕ್ಷೇತ್ರದಲ್ಲಿರ ನಿಮ್ಮ ಕೊಡುಗೆ ನೀಡಲು ಇದು ಅತ್ಯುತ್ತಮ ಸಮಯ " ಎಂದಿದ್ದಾರೆ ಮನೋಜ್.
ನೀರಜ್ ಪಾಂಡೆ ನಿರ್ದೇಶನದ ಹೊಸ ಚಿತ್ರ ಐಯಾರಿಯಲ್ಲಿ ಮನೋಜ್ ಇದೇ ಮೊದಲ ಬಾರಿ ಸಿದ್ಧಾರ್ಥ್ ಮಲ್ಹೋತ್ರ ಜೊತೆ ನಟಿಸುತ್ತಿದ್ದಾರೆ.