ಸಾಧನೆಯಿಂದ ಸಿದ್ಧಿ ಸಾಧ್ಯ: ವಾಸುದೇವ ಭಟ್ಟ
ಗೋಪಾಲಕೃಷ್ಣ ಶ್ಯಾನುಭಾಗರ 2 ಕೃತಿ ಬಿಡುಗಡೆ

ಉಡುಪಿ, ಎ.29: ಕಾರ್ಕಳ ಹೊಸಸಂಜೆ ಪ್ರಕಾಶನ ಪ್ರಕಟಿಸಿದ ಮಣಿಕ್ಕಾರ ಗೋಪಾಲಕೃಷ್ಣ ಶ್ಯಾನುಭಾಗ್‌ರ ‘ಭಾರತೀಯ ಸಂಗೀತ ಪರಂಪರೆ’ (ಕನ್ನಡ) ಹಾಗೂ ‘ಉಡ್ಗಾಸು’ (ಕೊಂಕಣಿ) ಎರಡು ಕೃತಿಗಳ ಲೋಕಾರ್ಪಣೆ ಇಂದು ನಗರದ ಹೊಟೇಲ್ ಕಿದಿಯೂರಿನ ಮಹಾಜನ ಹಾಲ್‌ನಲ್ಲಿ ನಡೆಯಿತು.
ಉಡುಪಿಯ ಸುಹಾಸಂ ಆಯೋಜಿಸಿದ ಸಮಾರಂಭದಲ್ಲಿ ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಖ್ಯಾತ ಸಂಗೀತಕಾರ ಹಾಗೂ ಉಡುಪಿ ನಾದವೈಭವಂನ ಉಡುಪಿ ವಾಸುದೇವ ಭಟ್ಟ, ಸಂಗೀತದಲ್ಲಿ ಸಿದ್ಧಿ ಬೇರೆ, ಪ್ರಸಿದ್ಧಿ ಬೇರೆ. ಕೇವಲ ಸತತ ಸಾಧನೆಯಿಂದ ಮಾತ್ರ ಸಿದ್ಧಿ ಪಡೆಯಲು ಸಾಧ್ಯ. ಆದರೆ ಇಂದು ಇದಕ್ಕೆ ವ್ಯತಿರಿಕ್ತವಾದುದನ್ನು ನೋಡುತಿದ್ದೇವೆ ಎಂದರು.
ಸರಿಗಮಪದನಿಸವನ್ನು 72 ಶೈಲಿಯಲ್ಲಿ ಹಾಡಲು ಸಾಧ್ಯ. ಇವುಗಳೆಲ್ಲವನ್ನೂ ಹೆಸರಿಸುವವರು ನಿಜವಾದ ಸಂಗೀತಕಾರರು. ಸಂಗೀತದ ರಾಗಗಳು ಎಂದಿಗೂ ಬದಲಾಗುವುದಿಲ್ಲ. ಎಲ್ಲಾ ರಾಗಗಳೂ ಆರಂಭದಿಂದ ಇಂದಿನವರೆಗೆ ಹಾಗೆಯೇ ಇರುತ್ತದೆ. ಇಂದು ಸಂಗೀತದ ಶ್ರೇಷ್ಠತೆ ಎಂದವರು ನುಡಿದರು.
ಸಂಗೀತ ಬೆಳೆಯುತ್ತಾ ಹೋದಂತೆ ವಾಗ್ಗೇಯಕಾರರು, ವಚನಕಾರರು ಹಾಗೂ ದಾಸಶ್ರೇಷ್ಠರು ಸಂಗೀತಕ್ಕೊಂದು ಹೊಸ ದಿಕ್ಕನ್ನು ತೋರಿಸಿದರು. ಸಂಗೀತ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಬೇಕಾಗಿದೆ. ಪ್ರಸಿದ್ಧಿಯ ಹಿಂದೆ ಓಡುವುದಲ್ಲ ಎಂದರು.
ಹಿರಿಯ ಪತ್ರಕರ್ತರಾದ ಕಾರ್ಕಳದ ಕೆ.ಶ್ರೀಕರ ಭಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಲೇಖಕ ಮಣಿಕ್ಕಾರ ಗೋಪಾಲಕೃಷ್ಣ ಶ್ಯಾನುಭಾಗ ಉಪಸ್ಥಿತರಿದ್ದರು.
ಸುಹಾಸಂನ ಅಧ್ಯಕ್ಷ ಎಚ್.ಶಾಂತರಾಜ ಐತಾಳ್ ಅತಿಥಿಗಳನ್ನು ಸ್ವಾಗತಿಸಿದರೆ, ಎಚ್.ಗೋಪಾಲ ಭಟ್ಟ (ಕು.ಗೋ.) ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀನಿವಾಸ ಉಪಾಧ್ಯ ಕಾರ್ಯಕ್ರಮ ನಿರ್ವಹಿಸಿದರು.