ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಭೂಮಿ ದಿಢೀರ್ ಬಿಸಿ
ಆತಂಕಗೊಂಡಿದ್ದ ಹಂಗರಗಾ ಗ್ರಾಮಸ್ಥರು ನಿರಾಳ

ಬೆಳಗಾವಿ, ಎ. 29: ತಾಲೂಕಿನ ಹಂಗರಗಾ ಗ್ರಾಮದ ಮನೆಯೊಂದರ ಭೂಮಿ ಅತೀವ ಬಿಸಿಯಾಗುತ್ತಿರುವ ಅಚ್ಚರಿಯ ಘಟನೆಯೊಂದು ಬೆಳಕಿಗೆ ಬಂದಿದ್ದು, ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಭೂಮಿ ಬಿಸಿಯಾಗಿರುವುದು ಖಚಿತ ಆಗಿದೆ.
ಇಲ್ಲಿನ ಭೀಮಸೇನ್ ಕಾಂಬ್ಳೆ ಎಂಬವರ ಮನೆಯ ಒಂದು ಅಡಿ ಜಾಗದಲ್ಲಿ ದಿಢೀರ್ ಅತೀವವಾಗಿ ಬಿಸಿಯಾಗುತ್ತಿದ್ದು, ಕುಟುಂಬಸ್ಥರನ್ನು ಬೆರಗುಗೊಳಿಸಿತ್ತು. ಆ ಹಿನ್ನೆಲೆಯಲ್ಲಿ ಆ ಜಾಗವನ್ನು ಅಗೆದು ಗಣಿ ಮತ್ತು ಭೂಮಿ ವಿಜ್ಞಾನಿಗಳು ಪರಿಶೀಲನೆ ನಡೆಸಿದರು.
ಕಾಂಬ್ಳೆ ಅವರ ಪಕ್ಕದ ಮನೆಯವರು ಮದುವೆ ಸಮಾರಂಭ ನಿಮಿತ್ತ ಲೈಟಿಂಗ್ ವ್ಯವಸ್ಥೆಗೆ ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದು, ಆ ವೈಯರ್‌ನಿಂದ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಈ ಅವಘಡ ಸಂಭವಿಸಿದೆ ಎಂಬುದು ಖಚಿತವಾಗಿದೆ ಎಂದು ಉಪ ವಿಭಾಗಾಧಿಕಾರಿ ರಾಜಶ್ರೀ ಜೈನಾಪೂರ್ ತಿಳಿಸಿದ್ದಾರೆ.
ವಿದ್ಯುತ್ ನೆಲಕ್ಕೆ ಹರಿದ ಪರಿಣಾಮ ಭೂಮಿ ಬಿಸಿಯಾಗಿದೆ. ಈ ಬಗ್ಗೆ ಗ್ರಾಮಸ್ಥರು ಯಾವುದೇ ರೀತಿಯಲ್ಲಿಯೂ ಆತಂಕಪಡುವ ಅಗತ್ಯವಿಲ್ಲ. ಈಗಾಗಲೇ ಆ ಪ್ರದೇಶದಲ್ಲಿದ್ದ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದು, ಭೂಮಿ ಕೂಡಲೇ ತಣ್ಣಗಾಗಿದೆ ಎಂದು ರಾಜಶ್ರೀ ಮಾಧ್ಯಮಗಳಿಗೆ ಸ್ಪಷ್ಟಣೆ ನೀಡಿದರು.
ಭೂಮಿಯೊಳಗಿನ ಲಾವಾರಸ ಸ್ಫೋಟಗೊಂಡ ಪರಿಣಾಮ ಭೂಮಿ ಬಿಸಿಯಾಗಿದೆ, ಬಿಸಿ ಹೊಗೆ ಹೊರಬರುತ್ತಿದೆ ಎಂಬುದಕ್ಕೆ ಯಾವುದೇ ಆಧಾರಗಳಿಲ್ಲ. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಲೇ ಭೂಮಿಗೆ ವಿದ್ಯುತ್ ಹರಿದ ಪರಿಣಾಮ ಭೂಮಿ ಬಿಸಿಯಾಗುತ್ತಿತ್ತು ಎಂಬುದು ಪರಿಶೀಲನೆಯಿಂದ ದೃಢಪಟ್ಟಿದೆ ಎಂದು ರಾಜಶ್ರೀ ತಿಳಿಸಿದರು.
ದಿಢೀರ್ ಭೂಮಿ ಬಿಸಿಯಾಗುತ್ತಿದೆ ಎಂಬ ಸುದ್ದಿ ಹಿನ್ನೆಲೆಯಲ್ಲಿ ಗ್ರಾಮಸ್ಥರು ತಂಡೋಪತಂಡವಾಗಿ ಬಂದು ಕುತೂಹಲದಿಂದ ಬಿಸಿಯಾಗುತ್ತಿದ್ದ ಭೂಮಿಯನ್ನು ಮುಟ್ಟಿ ಪರಿಶೀಲಿಸಿದರು. ಸ್ಥಳಕ್ಕೆ ಗಣಿ ಮತ್ತು ಭೂ ವಿಜ್ಞಾನಿಗಳು, ಜಿಲ್ಲಾಡಳಿತ, ಇಂಧನ ಇಲಾಖೆ ಎಂಜಿಯರ್‌ಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.







