ಡಿಜಿಟಲ್ ಯುಗಕ್ಕೆ ತಕ್ಕಂತೆ ಸಾಹಿತ್ಯ ಪಸರಿಸಬೇಕು : ಕೃಷ್ಣ ಭಟ್
ಪುತ್ತೂರಿನಲ್ಲಿ ಸಾಹಿತ್ಯ ಸಪ್ತಾಹ-ಪುಸ್ತಕ ಹಬ್ಬ ಕಾರ್ಯಕ್ರಮ

ಪುತ್ತೂರು,ಎ.29 : ಇಂದು ಗ್ರಾಮೀಣ ಪ್ರದೇಶದಲ್ಲಿಯೂ ಇಂಗ್ಲೀಷ್ ವ್ಯಾಮೋಹ ಹೆಚ್ಚಾಗಿದ್ದು, ಇಂಗ್ಲೀಷ್ ಮಾಧ್ಯಮ ಶಿಕ್ಷಣದ ಪರಿಣಾಮವಾಗಿ ಯುವ ಪೀಳಿಗೆ ಸಾಹಿತ್ಯ ಕ್ಷೇತ್ರದಿಂದ ವಿಮುಖರಾಗುತ್ತಿದೆ. ಪುಸ್ತಕವೇ ಸಾಹಿತ್ಯವಲ್ಲ. ಸಾಹಿತ್ಯ ಎಂದರೆ ಅನುಭವ, ಅದೊಂದು ವಿಚಾರವಾಗಿದ್ದು, ಇಂದಿನ ಯುವ ಸಮುದಾಯಕ್ಕೆ ಅವರ ಆಸಕ್ತಿಯ ಕ್ಷೇತ್ರದ ಮೂಲಕ ಸಾಹಿತ್ಯವನ್ನು ತಲುಪಿಸಿ ಅಭಿರುಚಿ ಮೂಡಿಸುವ ಕೆಲಸ ಆಗಬೇಕಿದೆ. ಡಿಜಿಟಲ್ ಯುಗಕ್ಕೆ ತಕ್ಕಂತೆ ಸಾಹಿತ್ಯವನ್ನು ಪಸರಿಸುವ ಕೆಲಸ ಸಾಹಿತಿಗಳಿಂದ ಆಗಬೇಕಿದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಬಿ. ಕೃಷ್ಣ ಭಟ್ ಹೇಳಿದರು.
ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲ್ಲೂಕು ಘಟಕ ಮತ್ತು ಪುತ್ತೂರಿನ ಜ್ಞಾನ ಗಂಗಾ ಪುಸ್ತಕ ಮಳಿಗೆಯ ಸಂಯುಕ್ತ ಆಶ್ರಯದಲ್ಲಿ ಶನಿವಾರ ಸಂಜೆ ಪುತ್ತೂರಿನ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಸಾಹಿತ್ಯ ಸಪ್ತಾಹ -ಪುಸ್ತಕ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬೇಕಾದಷ್ಟು ಪುಸ್ತಕಗಳು ಪ್ರಕಟವಾಗುತ್ತಿದ್ದರೂ ಸಾಹಿತ್ಯ ಪುಸ್ತಕಗಳನ್ನು ಓದುವವರ ಸಂಖ್ಯೆ ಕ್ಷೀಣಿಸುತ್ತಿದೆ. ಮೌಲ್ವಿಕ ಕೃತಿಗಳ ಪ್ರಮಾಣ ಕಡಿಮೆಯಾಗುತ್ತಿದ್ದು , ಗ್ರಂಥಾಲಯಕ್ಕಾಗಿಯೇ ಬರೆಯುವ ಕೃತಿಗಳು ಜಾಸ್ತಿಯಾಗುತ್ತಿದೆ. ಓದಬೇಕಾಗಿಲ್ಲ, ಪ್ರಕಟವಾದರೆ ಸಾಕು ಎಂಬಂತಹ ಸ್ಥಿತಿ ಬಂದಿದೆ ಎಂದ ಅವರು ಸಮಸ್ಯೆ ಇರುವುದು ಓದುಗರಲ್ಲಿ ಅಲ್ಲ, ಮೌಲ್ಯಯುತ ಸಾಹಿತ್ಯವನ್ನು ನೀಡುವುದರಲ್ಲಿ ಎಂದರು.
ಗೌರಿ ಭಟ್ ಅವರು ರಚಿಸಿದ ‘ದೀವಿಗೆ’ ಕವನ ಸಂಕಲನ ಬಿಡುಗಡೆಗೊಳಿಸಿದ ಸಾಹಿತಿ, ಸಂಶೋಧಕ ಪುಂಡಿಕಾಯಿ ಗಣಪತಿ ಭಟ್ ಅವರು ಕೇವಲ ಬರೆಯುವುದರಿಂದ ಸಾಹಿತ್ಯ ಕ್ಷೇತ್ರ ಬೆಳೆಯುವುದಿಲ್ಲ. ಸಾಹಿತ್ಯ ಕ್ಷೇತ್ರ ಬೆಳೆಯಬೇಕಾದರೆ ನಿರಂತರವಾಗಿ ಸಾಹಿತ್ಯ ಚಟುವಟಿಕೆಗಳು ನಡೆಯುತ್ತಿರಬೇಕು ಎಂದರು. ನೆರೆಯ ರಾಜ್ಯಗಳಿಗೆ ಹೋಲಿಸಿದರೆ ಒಟ್ಟು ಕನ್ನಡಿಗರಲ್ಲಿ ಓದುವ ಪೃವೃತ್ತಿ ಕಡಿಮೆ ಎಂದ ಅವರು ಸೃಜನಶೀಲ ಕೃತಿಗಳಿಗೆ ಬದಲಾಗಿ ಅನುವಾದಿತ ಕೃತಿಗಳೇ ಹೆಚ್ಚು ಮಾರಾಟವಾಗುತ್ತಿದೆ ಎಂದಾದರೆ ಇದು ಯಾವ ಬೆಳವಣಿಗೆ ಎಂಬುವುದನ್ನು ಜನತೆಯೇ ನಿರ್ಧರಿಸಬೇಕೆಂದರು.
ಬುಕ್ ಎಂದರೆ ಮಕ್ಕಳಿಗೆ ನೆನಪಾಗುವುದು ಫೇಸ್‌ಬುಕ್ ಮಾತ್ರ. ಇದು ವಿಪರ್ಯಾಸ ಎಂದ ಅವರು ಟಿವಿ ಮಾಧ್ಯಮದಿಂದಾಗಿ ಓದುವ ಹವ್ಯಾಸ ನಶಿಸಿ ಹೋಗುವಂತಾಗಿದೆ. ಒಟ್ಟು ಶಿಕ್ಷಣ ವ್ಯವಸ್ಥೆಯಲ್ಲಿ ಸಾಹಿತ್ಯವನ್ನು ಬೆಳೆಸುವ ವಿಚಾರ ಕಣ್ಮರೆಯಾಗುತ್ತಿದ್ದು, ಒಂದನೇ ತರಗತಿಯಿಂದಲೇ ಟ್ಯೂಷನ್ ವ್ಯವಸ್ಥೆ ಆರಂಭವಾದರೆ ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿಯನ್ನು ಹುಟ್ಟಿಸುವುದಾದರೂ ಹೇಗೆ ಎಂದು ಪ್ರಶ್ನಿಸಿದ ಅವರು ವಿದ್ಯಾರ್ಥಿಗಳಿಗೆ ನಿರುಪಯುಕ್ತ ವಸ್ತುಗಳನ್ನು ಪ್ರಶಸ್ತಿಯಾಗಿ ನೀಡುವ ಬದಲು ಪುಸ್ತಕಗಳನ್ನು ಪ್ರಶಸ್ತಿಯಾಗಿ ನೀಡುವ ಮೂಲಕ ಸಾಹಿತ್ಯದ ಅಭಿರುಚಿ ಮೂಡಿಸಬೇಕು. ಕೊಳ್ಳುಬಾಕ ಸಂಸ್ಕೃತಿ ಪುಸ್ತಕ ಕ್ಷೇತ್ರಕ್ಕೆ ಯಾಕೆ ಪ್ರವೇಶಿಸುತ್ತಿಲ್ಲ ಎಂಬ ಬಗ್ಗೆ ಗಂಭೀರ ಚಿಂತನೆ ಮಾಡಬೇಕು ಎಂದು ಅವರು ತಿಳಿಸಿದರು.
ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕದ ಅಧ್ಯಕ್ಷ ಬಿ.ಐತ್ತಪ್ಪ ನಾಯ್ಕಾ ಅವರು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕಳೆದ ಜೂನ್‌ನಿಂದ ಈ ತನಕ 34 ಸಾಹತ್ಯ ಚಟುವಟಿಕೆಯ ಕಾರ್ಯಕ್ರಮಗಳ ಮೂಲಕ ಸಾಹಿತ್ಯದ ಅಭಿರುಚಿ ಮೂಡಿಸುವ ಕೆಲಸ ಮಾಡಲಾಗಿದೆ.
ಮಕ್ಕಳ ಕವಿಗೋಷ್ಠಿ,ಹೋಬಳಿ ಸಾಹಿತ್ಯ ಸಮ್ಮೇಳನ, ಕಾಲೇಜು ವಿದ್ಯಾರ್ಥಿಗಳ ಕವಿಗೋಷ್ಠಿ,ಕರ್ನಾಟಕ ಏಕೀಕರಣ ಸಮ್ಮೇಳನ ,ಪ್ರಾಥಮಿಕ,ಪ್ರೌಢ ಮತ್ತು ಕಾಲೇಜುಗಳಲ್ಲಿ ಸಾಹಿತ್ಯ ಕಾಂರ್ಕ್ರಮಗಳನ್ನು ನಡೆಸುವ ಮೂಲಕ ಸಾಹಿತ್ಯದ ಬೆಳವಣಿಗೆಗೆ ಶ್ರಮಿಸಲಾಗಿದೆ ಎಂದರು. ದೀವಿಗೆ ಕವನ ಸಂಕಲನದ ಕತೃ ಗೌರಿ ಭಟ್, ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕದ ಖಜಾಂಜಿ ಎನ್.ಕೆ.ಜಗನ್ನಿವಾಸ ರಾವ್, ಕವಯತ್ರಿ ಕವಿತಾ ಅಡೂರು ಮತ್ತಿತರರು ಇದ್ದರು. ಸ್ವಪ್ನ ಉದಯ್‌ಕುಮಾರ್ ಕೊಡೆಂಕಿರಿ ಪ್ರಾರ್ಥಿಸಿದರು. ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲ್ಲೂಕು ಘಟಕದ ಕಾರ್ಯದರ್ಶಿಯಾದ ನಿವೃತ್ತ ಶಿಕ್ಷಕಿ ಸರೋಜಿನಿ ಮೇನಾಲ ಅವರು ಕಾರ್ಯಕ್ರಮ ನಿರೂಪಿಸಿದರು. ಜ್ಞಾನಗಂಗಾ ಪುಸ್ತಕ ಮಳಿಗೆಯ ಮುಖ್ಯಸ್ಥ ಪ್ರಕಾಶ್ ಕೊಡೆಂಕಿರಿ ವಂದಿಸಿದರು.







