ದಿಗ್ವಿಜಯ್ ಸಿಂಗ್‌ಗೆ ಗೇಟ್‌ಪಾಸ್ : ರಾಜ್ಯ ಕಾಂಗ್ರೆಸ್‌ಗೆ ಕೆ.ಸಿ.ವೇಣುಗೋಪಾಲ್ ಉಸ್ತುವಾರಿ
.jpg)
ಹೊಸದಿಲ್ಲಿ, ಎ.29: ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಉಸ್ತುವಾರಿಯಾಗಿದ್ದ ದಿಗ್ವಿಜಯ್ ಸಿಂಗ್‌ಗೆ ಗೇಟ್‌ಪಾಸ್ ನೀಡಲಾಗಿದ್ದು ಅವರ ಸ್ಥಾನದಲ್ಲಿ ಹಿರಿಯ ಮುಖಂಡ ಕೆ.ಸಿ.ವೇಣುಗೋಪಾಲ್ ಅವರನ್ನು ನೇಮಿಸಲಾಗಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿದೇಶ ಪ್ರವಾಸದಲ್ಲಿರುವ ಸಂದರ್ಭ ಈ ಬೆಳವಣಿಗೆ ನಡೆದಿರುವುದು ಗಮನಾರ್ಹವಾಗಿದೆ.
ಮಣಿಪುರ ಮತ್ತು ಗೋವಾ ವಿಧಾನಸಭಾ ಚುನಾವಣೆಯ ಬಳಿಕ ಪರಿಸ್ಥಿತಿಯನ್ನು ಸೂಕ್ತವಾಗಿ ನಿಭಾಯಿಸುವಲ್ಲಿ ಎಡವಿದ ದಿಗ್ವಿಜಯ್ ಸಿಂಗ್ ಅವರ ಬಗ್ಗೆ ಪಕ್ಷದ ಹಿರಿಯ ನಾಯಕರು ಅಸಮಾಧಾನ ಹೊಂದಿದ್ದರು. ಅಲ್ಲದೆ ದಿಗ್ವಿಜಯ್ ಕಾರ್ಯವೈಖರಿಯ ಬಗ್ಗೆ ಕರ್ನಾಟಕದ ಕಾಂಗ್ರೆಸ್ ಪಕ್ಷದಲ್ಲಿ ವಿರೋಧ ಹೆಚ್ಚಿರುವ ಹಿನ್ನೆಲೆಯಲ್ಲಿ ಅವರಿಗೆ ಕೊಕ್ ನೀಡಲಾಗಿದೆ ಎನ್ನಲಾಗಿದೆ.
ಕೇರಳದ ಸಂಸದರಾಗಿರುವ ವೇಣುಗೋಪಾಲ್, ಯುಪಿಎ ಸರಕಾರದಲ್ಲಿ ವಾಯುಯಾನ ಇಲಾಖೆಯ ಸಹಾಯಕ ಸಚಿವರಾಗಿದ್ದರು. ಮುಂದಿನ ವರ್ಷ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ದಿಗ್ವಿಜಯ್ ಸಿಂಗ್ ಬದಲಾವಣೆ ಒಂದು ಉತ್ತಮ ನಿರ್ಧಾರ. ಕೇರಳದ ರಾಜಕಾರಣಿಗಳ ಕಾರ್ಯವೈಖರಿ ವಿಶಿಷ್ಟವಾಗಿದ್ದು ಪ್ರಸಕ್ತ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್‌ಗೆ ಇಂತಹ ನಾಯಕರ ಅಗತ್ಯವಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿದ್ದಾರೆ.





