ಆಸ್ಪತ್ರೆಯಲ್ಲಿ ವೈದ್ಯರಿಲ್ಲ, ಎರಡು ಆಂಬುಲೆನ್ಸ್‌ಗಳಿದ್ದರೂ ಚಾಲಕರಿಲ್ಲ: ಇದ್ದೂ ಇಲ್ಲದಂತಾದ ಸೌಲಭ್ಯ

ಮೂಡಿಗೆರೆ, ಎ.29 : ಸರಕಾರಿ ಎಂಜಿಎಂ ಆಸ್ಪತ್ರೆಯ ಆಂಬುಲೆನ್ಸ್‌ಗಳಿಗೆ ಚಾಲಕರಿಲ್ಲದೆ ತುರ್ತು ಸಂದರ್ಭದಲ್ಲಿ ರೋಗಿಗಳನ್ನು ಬೇರೆ ಆಸ್ಪತ್ರೆಗಳಿಗೆ ಸಾಗಿಸಲು ತುಂಬಾ ತೊಂದರೆಯಾಗಿದೆ ಎಂದು ಜೆಡಿಎಸ್ ಮುಖಂಡ ಶಬ್ಬೀರ್ ಅಹಮ್ಮದ್ ದೂರಿದ್ದಾರೆ.
ಕಳೆದ ಗುರುವಾರ ಸಂಜೆ ಜೀಪಿಗೆ ಹ್ಯಾಂಡ್‌ಪೂಸ್ಟ್ ಬಳಿ ಬಸ್ಸೊಂದು ಡಿಕ್ಕಿ ಹೊಡೆದಿತ್ತು. ಜೀಪಿನಲ್ಲಿದ್ದ ಐವರಿಗೆ ಗಂಭೀರ ಗಾಯಗಳಾಗಿತ್ತು. ಕೂಡಲೇ ಗಾಯಾಳುಗಳನ್ನು ಎಂಜಿಎಂ ಸರಕಾರಿ ಆಸ್ಪತ್ರೆಗೆ ಸಾಗಿಸಿದಾಗ ತುರ್ತು ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ಹಾಗೂ ಮಂಗಳೂರಿಗೆ ಕರೆದೊಯ್ಯಲು ಆಂಬುಲೆನ್ಸ್‌ಗಳ ಅಗತ್ಯವಿತ್ತು.
ಈ ಕಾರಣದಿಂದ ಆಸ್ಪತ್ರೆಯ ಕಟ್ಟಡದ ಹಿಂಭಾಗದಲ್ಲಿ ನಿಂತಿದ್ದ ಎರಡು ಆಂಬುಲೆನ್ಸ್‌ಗನ್ನು ಆಸ್ಪತ್ರೆ ಸಿಬ್ಬಂದಿಗಳಲ್ಲಿ ವಿಚಾರಿಸಿದಾಗ ಆ ಆಂಬುಲೆನ್ಸ್‌ಗಳಿಗೆ ಚಾಲಕರಿಲ್ಲ. ನೀವು ಬೇರೆ ಕಡೆಯಿಂದ ಖಾಸಗಿ ಆಂಬುಲೆನ್ಸ್ ತರಿಸಿಕೊಳ್ಳಿ ಎಂದು ಸಿಬ್ಬಂದಿ ಕೈಚೆಲ್ಲಿ ಕುಳಿತರು. ನಂತರ ಚಿಕ್ಕಮಗಳೂರಿನಿಂದ ಖಾಸಗಿ ಆಂಬುಲೆನ್ಸ್‌ಗಳನ್ನು ತರಿಸಿಕೊಂಡು ಬೆಂಗಳೂರು ಹಾಗೂ ಮಂಗಳೂರು ಆಸ್ಪತ್ರೆಗಳಿಗೆ ಗಾಯಾಳುಗಳನ್ನು ಸಾಗಿಸಲಾಯಿತು.
ಆಸ್ಪತ್ರೆಯಲ್ಲಿ ಎರಡು ಆಂಬುಲೆನ್ಸ್‌ಗಳಿದ್ದರೂ ಕೂಡ ಅದಕ್ಕೆ ಚಾಲಕರನ್ನು ನೇಮಿಸದೆ ಸುಮ್ಮನೆ ನಿಲ್ಲಿಸಿಕೊಂಡು ನಿರುಪಯುಕ್ತ ಎಂದು ದೂರಿದ್ದಾರೆ.
ಆಸ್ಪತ್ರೆಯಲ್ಲಿ 18 ಮಂದಿ ವೈದ್ಯರ ಹುದ್ದೆಗಳ ಪೈಕಿ 7 ಹುದ್ದೆಗಳು ಭರ್ತಿಯಾಗಿದೆ, ಉಳಿದ 11 ಹುದ್ದೆ ಖಾಲಿಯಿದೆ, ಈ 7 ಮಂದಿ ವೈದ್ಯರಿದ್ದರೂ ಕೂಡ ಪ್ರಯೋಜನಕ್ಕಿಲ್ಲದಂತಾಗಿದೆ. ಒಂದೆಡೆ ಕುಳಿತು ರೋಗಿಗಳನ್ನು ಪರೀಕ್ಷಿಸುವ ಕೆಲಸ ವೈದ್ಯರು ಮಾಡುತ್ತಿಲ್ಲ. ಸಣ್ಣಪುಟ್ಟ ಶೀತ, ಜ್ವರದಂತಹ ಸೋಂಕುಗಳಿಗೂ ಮಂಗಳೂರು ಹಾಗೂ ಬೆಂಗಳೂರು ಆಸ್ಪತ್ರೆಗಳಿಗೆ ರೋಗಿಗಳನ್ನು ಸಾಗಿಸಬೇಕಾದ ಸ್ಥಿತಿ ಇದೆ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ತಾವು ಶಾಸಕ ಬಿ.ಬಿ.ನಿಂಗಯ್ಯ ಹಾಗೂ ತಾಲೂಕು ಆರೋಗ್ಯ ಅಧಿಕಾರಿಗೂ ದೂರು ನೀಡಿದ್ದೇನೆ. ಕ್ರಮ ಕೈಗೊಳ್ಳದಿದ್ದರೆ ಆಸ್ಪತ್ರೆಗೆ ಮುತ್ತಿಗೆ ಹಾಕುವ ಮೂಲಕ ಧರಣಿ ನಡೆಸುವುದಾಗಿ ಎಚ್ಚರಿಸಿದ್ದಾರೆ.







