ಕೊಂಬಾರು: ಬೊಟ್ಟಡ್ಕ ದಲಿತರೊಳಗಿನ ಹಲ್ಲೆ ಪ್ರಕರಣ - ಆನಂದ ಮಿತ್ತಬೈಲ್‌ರವರ ಹೆಸರು ಕೈಬಿಡುವಂತೆ ದ.ಸಂ.ಸ ಆಗ್ರಹ
ದಲಿತರೊಳಗಿನ ಹಲ್ಲೆಗೆ ದುಷ್ಪ್ರೇರಣೆ ನೀಡುವ ಬಿಜೆಪಿಯವರ ವಿರುದ್ದ ಕೇಸು ದಾಖಲಿಸಲು ಆಗ್ರಹ
ಕಡಬ, ಎ.29. ಕೊಂಬಾರು ಗ್ರಾಮದ ಬೊಟ್ಟಡ್ಕದಲ್ಲಿ ಪರಿಶಿಷ್ಟ ಜಾತಿಯವರೊಳಗೆ ನಡೆದ ಪರಸ್ಪರ ಹಲ್ಲೆ ಪ್ರಕರಣದಲ್ಲಿ ದ.ಸಂ.ಸ ಮುಖಂಡ ಆನಂದ ಮಿತ್ತಬೈಲ್‌ರವರ ವಿರುದ್ದ ಪ್ರಕರಣ ದಾಖಲಾಗಿರುವುದನ್ನು ಕಡಬ ಪೋಲಿಸರು ಕೈ ಬಿಡಬೇಕು. ಅಲ್ಲದೆ ಬೊಟ್ಟಡ್ಕದಲ್ಲಿ ದಲಿತ ಗುಂಪುಗಳ ನಡುವೆ ಹಲ್ಲೆ ಪ್ರಕರಣಕ್ಕೆ ಬಿಜೆಪಿಯವರು ಪ್ರೇರಣೆ ನೀಡುತ್ತಿದ್ದು ಅವರ ವಿರುದ್ದ ಪರಿಶಿಷ್ಟರ ದೌರ್ಜನ್ಯ ತಡೆ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಎಂ. ಕೂಸಪ್ಪ ಆಗ್ರಹಿಸಿದರು.
ಅವರು ಶನಿವಾರದಂದು ಕಡಬ ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಕೊಂಬಾರಿನ ಬೊಟ್ಟಡ್ಕದಲ್ಲಿ ದಲಿತ ಮಹಿಳೆ ಸರೋಜಿನಿ ಎಂಬವರು ಕೆಲವು ವರ್ಷಗಳ ಹಿಂದೆ ಡಾ ಅಂಬೇಡ್ಕರ್ ನಿಗಮದಿಂದ ಸ್ವ ಉದ್ಯೋಗದಡಿಯಲ್ಲಿ ಬ್ಯಾಂಕ್ ಸಾಲ ಪಡೆದು ಗೂಡಂಗಡಿ ಒಂದನ್ನು ನಿರ್ಮಿಸಿ ಸ್ಥಳೀಯ ಗ್ರಾಮ ಪಂಚಾಯತ್‌ನಿಂದ ಅನುಮತಿ ಪಡೆದು ಟೈಲರಿಂಗ್ ಹಾಗೂ ಸಣ್ಣ ಪುಟ್ಟ ದಿನಸು ಸಾಮಾನುಗಳನ್ನು ಮಾರಾಟ ಮಾಡಿ ತನ್ನ ವೃತ್ತಿಯನ್ನು ನಡೆಸಿಕೊಂಡು ಬರುತ್ತಿದ್ದು, ಇತ್ತೀಚೆಗೆ ಬೊಟ್ಟಡ್ಕದಲ್ಲಿ ದಲಿತರ ಒಂದು ಗುಂಪು ಸದ್ರಿ ಗೂಡಂಗಡಿಯನ್ನು ಅಲ್ಲಿಂದ ತೆರವುಗೊಳಿಸಬೇಕೆಂದು ಬೆದರಿಕೆ ಹಾಕುತ್ತಿರುವುದಾಗಿಯೂ ಅದನ್ನು ವಿಚಾರಿಸಲು ಹೋದ ಇನ್ನೊಂದು ದಲಿತರ ಗುಂಪುಗಳ ಮಧ್ಯೆ ಪರಸ್ಪರ ಹಲ್ಲೆ ಪ್ರಕರಣ ನಡೆದಿರುವುದಾಗಿ ಸ್ಥಳೀಯರಿಂದಲೇ ದ.ಸಂ.ಸ ಕ್ಕೆ ತಿಳಿದು ಬಂದ ವಿಚಾರವಾಗಿದೆ.
ಆದರೆ ಕಡಬ ಠಾಣೆಯಲ್ಲಿ ಎ.20ರಂದು ದಾಖಲಾದ ಪ್ರಥಮ ವರ್ತಮಾನ ವರದಿಯಲ್ಲಿ ನಮ್ಮ ಸಂಘಟನೆಯ ತಾಲೂಕು ಸಂಚಾಲಕ ಆನಂದ ಮಿತ್ತಬೈಲ್‌ರವರ ಹೆಸರು 1ನೇ ಆರೋಪಿ ಎಂದು ದಾಖಲಾಗಿದ್ದು ದಲಿತರ ಎರಡು ಗುಂಪುಗಳ ಮಧ್ಯೆ ಪರಸ್ಪರ ಹಲ್ಲೆ ನಡೆದ ಸಮಯದಲ್ಲಿ ಆನಂದ್ ಮಿತ್ತಬೈಲ್‌ರವರು ಅವರ ಮನೆಯಲ್ಲೇ ಇದ್ದು ಘಟನೆ ನಡೆದ ಸ್ಥಳಕ್ಕೂ ಆನಂದ ಮಿತ್ತಬೈಲ್‌ರವರು ಇದ್ದ ಸ್ಥಳಕ್ಕೂ ಸುಮಾರು 5 ಕಿ.ಮೀ ದೂರದ ಅಂತರ ಇರುವುದಾಗಿಯೂ, ಘಟನೆಗೂ ಅವರಿಗೂ ಯಾವುದೇ ಸಂಬಂಧ ಇಲ್ಲವೆಂಬ ಬಗ್ಗೆ ಸ್ಥಳೀಯ ನಿವಾಸಿಗಳೇ ಪ್ರತ್ಯಕ್ಷ ಸಾಕ್ಷಿಗಳಾಗಿದ್ದಾರೆ. ಘಟನೆ ನಡೆದ ಬಗ್ಗೆ ಆನಂದ ಮಿತ್ತಬೈಲ್‌ರವರಿಗೆ ಬಂದ ಮಾಹಿತಿಯಂತೆ ಅವರು ಕಡಬ ಠಾಣೆಗೆ ಮತ್ತು ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಮ್‌ಗೆ ಮೊದಲು ಮಾಹಿತಿ ನೀಡಿದ ಪರಿಣಾಮ ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಿರುತ್ತಾರೆ.
ಹೀಗಿದ್ದರೂ ಆನಂದ ಮಿತ್ತಬೈಲ್‌ರವರು ಪಿರ್ಯಾದಿದಾರರ ಮನೆಗೆ ಮಾರಾಕಾಯುಧಗಳೊಂದಿಗೆ ಪ್ರವೇಶ ಮಾಡಿ ಹಲ್ಲೆ ನಡೆಸಲು ಸಾಧ್ಯವಿದೆಯೇ? ಸತ್ಯಾಂಶ ಈ ರೀತಿ ಇದ್ದರೂ ಸಹ ಆನಂದ್ ಮಿತ್ತಬೈಲ್‌ರವರ ಮೇಲೆ ಕೇಸು ದಾಖಲಾಗಲು ಸ್ಥಳೀಯ ಬಿ.ಜೆ.ಪಿ ಪಕ್ಷದ ಕೆಲವೊಂದು ಮುಖಂಡರು ಕಾರಣರಾಗಿದ್ದಾರೆ.
ಅಲ್ಲದೆ ದೋಷಾರೋಪಣಾ ಪಟ್ಟಿಯಿಂದ ಆನಂದ ಮಿತ್ತಬೈಲ್‌ರವರ ಹೆಸರನ್ನು ಕೂಡಲೇ ಕೈ ಬಿಡಬೇಕು ಮತ್ತು ಬೊಟ್ಟಡ್ಕದಲ್ಲಿ ದಲಿತ ಮಹಿಳೆಯೋರ್ವರು ಗೂಡಂಗಡಿ ಇಟ್ಟು ಟೈಲರಿಂಗ್ ಹಾಗೂ ಸಣ್ಣ ಪುಟ್ಟ ವ್ಯಾಪಾರ ನಡೆಸಿ ಅಭಿವೃದ್ದಿ ಹೊಂದುತ್ತಿರುವುದನ್ನು ಜಾತಿಯ ಕಾರಣದಿಂದ ಸಹಿಸಲಾರದ ಬಿಜೆಪಿ ಪಕ್ಷದ ಕೃಷ್ಣ ಶೆಟ್ಟಿ ಕಡಬ, ಕಡಬ ಬಿಜೆಪಿ ಶಕ್ತಿ ಕೇಂದ್ರದ ಪ್ರ.ಕಾರ್ಯದರ್ಶಿ ಪ್ರಕಾಶ್ ಎನ್.ಕೆ, ಕೊಂಬಾರು ಗ್ರಾ.ಪಂ.ಅಧ್ಯಕ್ಷ ಅಜಿತ್ ಎಸ್, ಗ್ರಾ.ಪಂ.ಸದಸ್ಯ ಮಧುಸೂದನ್ ಮತ್ತು ಇತರರು ಸೇರಿಕೊಂಡು ದಲಿತರ ಇನ್ನೊಂದು ಗುಂಪಿಗೆ ಸುಳ್ಳು ಮತ್ತು ಧ್ವೇಷಪೂರ್ವಕ ಅಪರಾಧಿ ಕೃತ್ಯಗಳನ್ನು ನಡೆಸಲು ದುಷ್ಪ್ರೇರಣೆ ನೀಡಿ ತಮ್ಮ ರಾಜಕೀಯ ಲಾಭವನ್ನು ಪಡೆಯುವ ಉದ್ದೇಶದಿಂದ ದಲಿತರ ಎರಡು ಗುಂಪುಗಳ ಜಗಳವನ್ನು ಕಾಂಗ್ರೆಸ್ ಎಂಬ ಗುಮ್ಮವನ್ನು ತೋರಿಸುತ್ತಾ ಪೊಲೀಸರ ತನಿಖೆಯನ್ನು ದಿಕ್ಕು ತಪ್ಪಿಸುವ ಹುನ್ನಾರವನ್ನು ನಡೆಸಿರುತ್ತಾರೆ.
ಇವರುಗಳ ಮೇಲೆ ಪರಿಶಿಷ್ಟರ ದೌರ್ಜನ್ಯ ತಡೆಕಾಯಿದೆ 1989-3(1)(8) ರಂತೆ ಕೂಡಲೇ ಕೇಸು ದಾಖಲಸಬೇಕೆಂದು ಅವರು ಆಗ್ರಹಿಸಿದರಲ್ಲದೆ ಕಡಬ ಪೊಲೀಸರು ಸರಿಯಾದ ತನಿಖೆ ನಡೆಸಿ ನ್ಯಾಯಯುತವಾಗಿ ವರ್ತಿಸದಿದ್ದರೆ ಹಾಗೂ ಅನಾವಶ್ಯಕ ದಲಿತರ ಮಧ್ಯೆ ಒಡಕನ್ನು ಹುಟ್ಟಿಸಿ ಸಂಘರ್ಷಕ್ಕೆ ಪ್ರಚೋದನೆ ನೀಡುವ ಬಿಜೆಪಿ ಮುಖಂಡರ ಮೇಲೆ ಕೇಸು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳದಿದ್ದರೆ ಇಡೀ ದಲಿತರ ಸಂಘಟನೆಗಳನ್ನು ಒಗ್ಗೂಡಿಸುವ ಮೂಲಕ ಕಡಬ ಪೊಲೀಸ್ ಠಾಣೆ ಎದುರು ಉಗ್ರ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದ್ದಾರೆ. ಪತ್ರಿಕಾಗೋಷ್ಟಿಯಲ್ಲಿ ಕ.ರಾ.ದ.ಸಂ.ಸ ಜಿಲ್ಲಾ ಸಂಘಟನಾ ಸಂಚಾಲಕ ಶಿವಪ್ಪ ಅಟ್ಟೋಲೆ, ತಾಲೂಕು ಮಹಿಳಾ ಸಂಘಟನಾ ಸಂಚಾಲಕಿ ಸುಂದರಿ ಕಲ್ಲುಗುಡ್ಡೆ, ಪುತ್ತೂರು ತಾಲೂಕು ಸಂಘಟನಾ ಸಂಚಾಲಕರಾದ ಹರೀಶ್ ಅಂಕಜಾಲು, ಬಾಬು ಸವಣೂರು, ವಿಶ್ವನಾಥ ಪುಣ್ಚತ್ತಾರು ಉಪಸ್ಥಿತರಿದ್ದರು.







