ಕೇಂದ್ರ ಸರಕಾರ ಯುದ್ಧದ ಉನ್ಮಾದದಲ್ಲಿದೆ: ಆನಂದ್‌ರಾಜ್ ಅಂಬೇಡ್ಕರ್

ಮಂಡ್ಯ, ಎ.29 :ಪ್ರಧಾನ ಮಂತ್ರಿ ನರೇಂದ್ರಮೋದಿ ನೇತೃತ್ವದ ಬಿಜೆಪಿ ಸರಕಾರ ಯುದ್ಧದ ಉನ್ಮಾದದಲ್ಲಿದೆ ಎಂದು ಅಂಬೇಡ್ಕರ್ ಅವರ ಮೊಮ್ಮಗ ಆನಂದ್‌ರಾಜ್ ಅಂಬೇಡ್ಕರ್ ಆರೋಪಿಸಿದ್ದಾರೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ನೌಕರರ ಬಳಗ ಅಂಬೇಡ್ಕರ್ ಜಯಂತಿ ಅಂಗವಾಗಿ ಶನಿವಾರ ಏರ್ಪಡಿಸಿದ್ದ ಮೀಸಲಾತಿ ಸಂರಕ್ಷಣೆಗಾಗಿ ಬೃಹತ್ ಸ್ವಾಭಿಮಾನಿ ಸಮಾವೇಶದಲ್ಲಿ ಅವರು ಮಾತನಾಡಿದರು.
ಇಂತಹ ವಿಷಮ ಪರಿಸ್ಥಿತಿಯಲ್ಲಿ ದೇಶದಲ್ಲಿ ಶಾಂತಿ ಮೂಡಿಸುವ ನಿಟ್ಟಿನಲ್ಲಿ “ಯುದ್ಧ ಬೇಡ ಬುದ್ಧ ಬೇಕು” ಎನ್ನುವ ಘೋಷದೊಂದಿಗೆ ಎಲ್ಲಾ ಶೋಷಿತ ಸಮುದಾಯಗಳು ಒಗ್ಗಟ್ಟಾಗಿ ಶಾಂತಿಯ ಸಂದೇಶ ಸಾರುವ ಅಂಬೇಡ್ಕರರ ಸಂವಿಧಾನ ರಕ್ಷಣೆಗೆ ಹೋರಾಡಬೇಕು ಎಂದು ಅವರು ಕರೆ ನೀಡಿದರು.
ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇಡಿ ರಾಜ್ಯವನ್ನು ಹಿಂದೂ ರಾಜ್ಯವನ್ನಾಗಿ ಮಾಡುವ ಗುರಿ ಹೊಂದಿದ್ದು, ಅಲ್ಲಿನ ಬಹುಸಂಖ್ಯಾತ ಧಾರ್ಮಿಕ ಅಲ್ಪಸಂಖ್ಯಾತರು ಹಾಗೂ ದಲಿತರಲ್ಲಿ ಭಯ ಹುಟ್ಟಿಸುತ್ತಿರುವುದು ಅಪಾಯಕಾರಿ ಬೆಳವಣಿಗೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಸಮಾನತೆ ಸಾರುವ ಅಂಬೇಡ್ಕರ್ ಸಂವಿಧಾನವನ್ನು ನಾಶಗೊಳಿಸಿ ಮನುಸ್ಮೃತಿಯ ಸಂವಿಧಾನವನ್ನು ಜಾರಿಗೊಳಿಸಲು ವ್ಯವಸ್ಥಿತ ಷಡ್ಯಂತ್ರ ನಡೆಸಲಾಗುತ್ತಿದೆ. ಪರಿಶಿಷ್ಟರು, ಅಲ್ಪಸಂಖ್ಯಾತರನ್ನು ತುಚ್ಚೀಕರಿಸಲಾಗುತ್ತಿದೆ. ಈ ಬಗ್ಗೆ ಎಚ್ಚರಿಕೆವಹಿಸಬೇಕು ಎಂದು ಅವರು ಸಲಹೆ ಮಾಡಿದರು.
ಮೀಸಲಾತಿ ಕೇವಲ ಪರಿಶಿಷ್ಟರಿಗೆ ಮಾತ್ರವಿದೆ ಎಂಬ ಭಾವನೆ ಮೂಡಿಸಲಾಗುತ್ತಿದೆ. ದಲಿತರಿಗೆ ಭಡ್ತಿ ಮೀಸಲಾತಿ ವಿಚಾರದಲ್ಲೂ ಸುಪ್ರೀಂಕೋರ್ಟ್ ತೀರ್ಪು ಕಳವಳಕಾರಿಯಾಗಿದೆ. ಶೋಷಿತರು ಸಂಘಟಿತರಾಗದಿದ್ದರೆ ಮೀಸಲಾತಿ ಕಳೆದುಕೊಳ್ಳಬೇಕಾಗುತ್ತದೆ ಎಂದು ಆನಂದ್‌ರಾಜ್ ಎಚ್ಚರಿಸಿದರು.
ಸ್ವಾತಂತ್ರ್ಯ, ಸಮಾನತೆ, ಸಹೋದರತೆಯ ಸಂಕೇತದಂತಿರುವ ಸಂವಿಧಾನವನ್ನು ನೀಡಿದ ಅಂಬೇಡ್ಕರ್ ಕೇವಲ ದಲಿತ ನಾಯಕರಷ್ಟೇ ಅಲ್ಲ. ಅವರೋರ್ವ ರಾಷ್ಟ್ರ ನಾಯಕ ಹಾಗೂ ವಿಶ್ವಜ್ಞಾನಿ ಎಂದವರು ಬಣ್ಣಿಸಿದರು.
ಅಧ್ಯಕ್ಷತೆವಹಿಸಿದ್ದ ಮೈಸೂರಿನ ಬಹುಜನ ಪೀಠದ ಪೀಠಾಧ್ಯಕ್ಷ ಜ್ಞಾನಪ್ರಕಾಶ್ ಸ್ವಾಮೀಜಿ ಮಾತನಾಡಿ, ಭಡ್ತಿ ಮೀಸಲಾತಿ ಉಳಿವಿಗೆ ರಾಜ್ಯ ಸರಕಾರ ಸುಗ್ರೀವಾಜ್ಞೆ ಹೊರಡಿಸುವ ಮೂಲಕ ಶೋಷಿತ ಸಮುದಾಯಗಳ ರಕ್ಷಣೆಗೆ ಮುಂದಾಗಬೇಕು. ಇಲ್ಲದಿದ್ದರೆ ಅಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ಹೇಳಿದರು.
ಸರಕಾರ ನ್ಯಾಯಾಲಯಕ್ಕೆ ಮರುಪರಿಶೀಲನಾ ಅರ್ಜಿ ಸಲ್ಲಿಸಿದರೂ ಪರಿಶಿಷ್ಟ ನೌಕರರಿಗೆ ನ್ಯಾಯ ದೊರಕುತ್ತದೆ ಎಂಬ ವಿಶ್ವಾಸ ಕಾಣುತ್ತಿಲ್ಲ. ಹೀಗಾಗಿ ಸಾಮಾಜಿಕ ನ್ಯಾಯ ಹಾಗೂ ಅಹಿಂದ ವರ್ಗಗಳ ಹಿತಕಾಯುವ ಮಾತನಾಡುತ್ತಲೇ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಸರಕಾರ ಶೋಷಿತ ಜನರ ರಕ್ಷಣೆಗೆ ನಿಲ್ಲುವ ಇಚ್ಛಾಸಕ್ತಿ ಪ್ರದರ್ಶಿಸಬೇಕು ಎಂದು ಅವರು ಆಗ್ರಹಿಸಿದರು.
ವಾಸ್ತವ ಪರಿಸ್ಥಿತಿ ಹಾಗೂ ಐತಿಹಾಸಿಕ ಸತ್ಯದ ತಳಹದಿಯ ಮೇಲೆ ತೀರ್ಪು ನೀಡಬೇಕಾದ ಸರ್ವೋಚ್ಛ ನ್ಯಾಯಾಲಯ ಮನುವಾದಿಗಳ ಒತ್ತಡಕ್ಕೆ ಮಣಿದು ತೀರ್ಪು ನೀಡಿ ಅನ್ಯಾಯ ಎಸಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಅಂಬೇಡ್ಕರ್‌ರವರ 126ನೆ ಜಯಂತ್ಯೋತ್ಸವದ ದಿನದಿಂದಲಾದರೂ ರಾಜಕಾರಣಿಗಳು ನೀಡುವ ಹಣಕ್ಕೆ ಕೈಚಾಚದೆ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಮತದಾರರು ಸಂಕಲ್ಪ ತೊಡಬೇಕು ಎಂದು ಕಿವಿಮಾತು ಹೇಳಿದರು, ಮೀಸಲಾತಿ ವಿರೋಧಿಗಳನ್ನು ಮನುಷ್ಯರೂಪದ ಮೃಗಗಳು ಎಂದು ಟೀಕಿಸಿದರು.
ದಲಿತ ಹೋರಾಟಗಾರ ಜಿಗಣಿ ಶಂಕರ್, ರಾಜ್ಯ ಸರಕಾರಿ ನೌಕರರ ಸಂಘಗಳ ಸಮನ್ವಯ ಸಮಿತಿ ಅಧ್ಯಕ್ಷ ಶಿವಶಂಕರ್, ಅಸಿಟ್ಸೆಂಟ್ ಕಮಿಷನರ್ ಶಿವರುದ್ರಪ್ಪ, ನಿವೃತ್ತ ಪ್ರಾಧ್ಯಾಪಕಿ ಸುಮಿತ್ರಬಾಯಿ, ದೇವನೂರ ಮಹಾದೇವ, ಕಾರ್ಯಪಾಲಕ ಅಭಿಯಂತರರಾದ ಚಂದ್ರಹಾಸ, ನಿವೃತ್ತ ಕಾರ್ಯಪಾಲಕ ಅಭಿಯಂತರ ಚನ್ನಯ್ಯ, ಪರಿಶಿಷ್ಟ ಜಾತಿ, ಪಂಗಡಗಳ ನೌಕರರ ಬಳಗದ ತಾಳಶಾಸನ ಮೋಹನ್, ಚೀರನಹಳ್ಳಿ ಲಕ್ಷ್ಮಣ್, ಅ.ರಾ.ಮಹೇಶ್, ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಎಂ.ಕೃಷ್ಣಮೂರ್ತಿ, ಇತರ ಗಣ್ಯರು ಉಪಸ್ಥಿತರಿದ್ದರು







