ದಲಿತರ ಸಭೆಯಲ್ಲಿ ಪ್ರತಿಧ್ವನಿಸಿದ ‘ಕೊರಗರ ಮೇಲಿನ ಹಲ್ಲೆ’
ಆರೋಪಿಗಳನ್ನು ಬಂಧಿಸದಿದ್ದರೆ ರಾಜ್ಯ ಮಟ್ಟ ಹೋರಾಟದ ಎಚ್ಚರಿಕೆ

ಕುಂದಾಪುರ, ಎ.29: ನಿಶ್ಚಿತಾರ್ಥದ ಸಮಾರಂಭದಲ್ಲಿದ್ದ ಮನೆಗೆ ಏಕಾಏಕಿ ನುಗ್ಗಿ ಕೊರಗ ಯುವಕರಿಗೆ ಹಲ್ಲೆ ನಡೆಸಿ, ಪಂಚಾಯತ್ ಸದಸ್ಯೆಗೆ ಅವಾಚ್ಯವಾಗಿ ನಿಂದಿಸಿ ಅತ್ಯಾಚಾರದ ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಗಳನ್ನು ಶೀಘ್ರ ಬಂಧಿಸದೇ ಇದ್ದಲ್ಲಿ ರಾಜ್ಯ ಮಟ್ಟದ ಹೋರಾಟವನ್ನು ಸಂಘಟಿಸುವುದಾಗಿ ದಲಿತ ಮುಖಂಡ ಉದಯ್ ಕುಾರ್ ತಲ್ಲೂರು ಎಚ್ಚರಿಕೆ ನೀಡಿದ್ದಾರೆ.
ಶನಿವಾರ ನಗರದ ಅಂಬೇಡ್ಕರ್ ಭವನದಲ್ಲಿ ಜರಗಿದ ದಲಿತರ ಕುಂದು ಕೊರತೆ ಸಭೆಯಲ್ಲಿ ಅವರು ಮಾತನಾಡುತಿದ್ದರು. ಆಹಾರದ ಆಯ್ಕೆ ನಮ್ಮ ಹಕ್ಕು, ನಾವು ಏನನ್ನೂ ಬೇಕಾದರೂ ತಿನ್ನುತ್ತೇವೆ. ಆಹಾರದ ಹಕ್ಕು ತಡೆಯುವ ಅಧಿಕಾರ ಯಾರಿಗೂ ಇಲ್ಲ ಎಂದು ಉದಯ ಕುಮಾರ್ ಗಟ್ಟಿಧ್ವನಿಯಲ್ಲಿ ಹೇಳಿದರು.
ಎರಡು ದಿನದೊಳಗೆ ಆರೋಪಿಗಳನ್ನು ಬಂಧಿಸುವುದಾಗಿ ಸಿಪಿಐ ರಾಘವ ಪಡೀಲ್ ಹೇಳಿದ್ದರು. ಎರಡು ದಿನ ಕಳೆದು ಹೋಗಿದೆ. ಇನ್ನೂ ಆರೋಪಿಗಳ ಬಂಧನವಾಗಿಲ್ಲ ಎಂದ ಅವರು ಪೊಲೀಸ್ ಇಲಾಖೆ ಆರೋಪಿಗಳ ಬಂಧನಕ್ಕೆ ಮೀನಾಮೇಷ ಎಣಿಸುತ್ತಿದೆ ಎಂದು ಆರೋಪಿಸಿದರು.
ಮಧ್ಯರಾತ್ರಿ ಮನೆಗೆ ನುಗ್ಗಿ ದೌರ್ಜನ್ಯ ಎಸಗಿದವರ ಮೇಲೆ ಎಫ್‌ಐಆರ್ ದಾಖಲಾದರೂ ಇನ್ನೂ ಕ್ರಮಕೈಗೊಂಡಿಲ್ಲ. ಈ ಪ್ರಕರಣದಲ್ಲಿ ಮುಗ್ದರ ಮೇಲೆ ನಡೆದ ದೌರ್ಜನ್ಯ ಅತ್ಯಂತ ಹೇಯ ಕೃತ್ಯ ಹಾಗೂ ನಾಚಿಕೆಗೇಡಿನ ಸಂಗತಿ ಎಂದು ತಲೂ್ಲರು ಆಕ್ರೋಶ ವ್ಯಕ್ತಪಡಿಸಿದರು.
ಜವಾಬ್ದಾರಿ ಯಾರು?: ಸಭೆಯನ್ನುದ್ದೇಶಿಸಿ ಮಾತನಾಡಿದ ದಲಿತ ಮುಖಂಡ ಮಂಜುನಾಥ ಬಾಳ್ಕುದ್ರು, ಆರೋಪಿಗಳು ನಿಶ್ಚಿತಾರ್ಥದ ಮನೆಗೆ ನುಗ್ಗಿ ದಾಳಿ ನಡೆಸಿದ್ದಾರೆ. ಒಂದು ವೇಳೆ ಮದುವೆ ಹುಡುಗ, ಹುಡುಗಿಯನ್ನು ತಿರಸ್ಕರಿಸಿದರೆ ಇದಕ್ಕೆ ಯಾರು ಜವಾಬ್ದಾರರು. ದಾಳಿ ನಡೆಸಿದ ಸಂಘಟನೆ ಜವಾಬ್ದಾರರಾಗುತ್ತಾರಾ ಎಂದು ಪ್ರಶ್ನಿಸಿದರು.
ಕೊರಗ ಮುಖಂಡ ಶೇಖರ ಮರವಂತೆ ಮಾತನಾಡಿ, ಓರ್ವ ದಲಿತ ಗ್ರಾಪಂ ಸದಸ್ಯೆಯ ಕುರಿತು ಇಲ್ಲಸಲ್ಲದ ಬರಹಗಳನ್ನು ವಾಟ್ಸಾಪ್, ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣದಲ್ಲಿ ಕುಕೃತ್ಯ ನಡೆಸಿದವರು ಹರಿಯಬಿಟ್ಟಿದ್ದಾರೆ. ಮೀಸಲಾತಿಯ ಆಧಾರದಲ್ಲಿ ಗ್ರಾಪಂ ಸದಸ್ಯೆಯಾದ ಶಕುಂತಳಾ ಅವರನ್ನು ನಿಂದಿಸುವ ಬರಹಗಳು ಹರಿದಾಡುತ್ತಿವೆ. ಶಕುಂತಳಾ ಅವರ ತೇಜೋವಧೆ ಸಲ್ಲದು. ಈ ಪ್ರಕರಣವನ್ನು ಕೂಲಂಕಷವಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ದಲಿತ ಮುಖಂಡ ಚಂದ್ರಮ ತಲ್ಲೂರು ಮಾತನಾಡಿ, ದೌರ್ಜನ್ಯಕ್ಕೊಳಗಾದ ಕೊರಗ ಸಮುದಾಯದ ಪರವಾಗಿ ದಲಿತ ಸಂಘರ್ಷ ಸಮಿತಿ (ಭೀಮ ಘರ್ಜನೆ) ಹೋರಾಟ ನಡೆಸುತ್ತಿದೆ. ಆದರೆ ದಲಿತ ಸಂಘಟನೆಯ ವಿರುದ್ಧ ಎತ್ತಿಕಟ್ಟುವ ಕೆಲಸಗಳನ್ನು ಕೆಲವು ಕಾಣದ ಕೈಗಳು ಮಾಡುತ್ತಿವೆ ಎಂದು ದೂರಿದರು.
ಆರೋಪಿ ಬಂಧನಕ್ಕೆ ಆಗ್ರಹ: ದಲಿತ ಯುವತಿಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಸು ದಾಖಲಾಗಿ ಮೂರು ತಿಂಗಳು ಕಳೆದಿವೆ. ಆದರೆ ಆರೋಪಿಯನ್ನು ಬಂಧಿಸಲು ಪೊಲೀಸ್ ಇಲಾಖೆ ವಿಫಲವಾಗಿದೆ. ಆರೋಪಿ ಗಣೇಶ್ ಕುಲಾಲ್‌ಗೆ ಪ್ರಭಾವಿಗಳ ರಕ್ಷಣೆ ಇದೆ. ಗಣೇಶ್ ಕುಲಾಲ್ ಭೂಗತಲೋಕದ ಡಾನ್ ಅಲ್ಲ. ಆತ ಸಾಮಾನ್ಯ ಮನುಷ್ಯ. ಆತನನ್ನು ಸೆರೆ ಹಿಡಿಯಲು ಇಲಾಖೆ ಮುಂದಾಗದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ದಲಿತ ಮುಖಂಡರಾದ ವಾಸುದೇವ ಮುದೂರು ಮ್ತು ರಾಜುಬೆಟ್ಟಿನ ಮನೆ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕುಂದಾಪುರ ಡಿವೈಎಸ್ಪಿಪ್ರವೀಣ್ ನಾಯಕ್, ಅತ್ಯಾಚಾರ ಪ್ರಕರಣದ ಆರೋಪಿಯನ್ನು ಸೆರೆ ಹಿಡಿಯಲು ಇಲಾಖೆ ಎಲ್ಲಾ ರೀತಿಯ ಪ್ರಯತ್ನ ನಡೆಸುತ್ತಿದೆ ಎಂದರು. ಇದಕ್ಕೆ ಆಕ್ರೋಶಿತರಾದ ದಲಿತ ಮುಖಂಡರು ಮೂರು ತಿಂಗಳಿಂದಲೂ ನಿಮ್ಮಿಂದ ಇದೇ ರೀತಿಯ ಉತ್ತರ ಬರುತ್ತಿದೆ. ಇದನ್ನು ನಾವು ಒಪ್ಪುವುದಿಲ್ಲ. ಮೇ 10ರೊಳಗೆ ಆರೋಪಿಯನ್ನು ಬಂಧಿಸದಿದ್ದರೆ ನಾವು ಪೊಲೀಸ್ ಇಲಾಖೆಯ ವಿರುದ್ದವೇ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
ಸಭೆಯಲ್ಲಿ ಡಿವೈಎಸ್ಪಿ ಪ್ರವೀಣ್ ನಾಯಕ್, ಬೈಂದೂರು ವೃತ್ತ ನಿರೀಕ್ಷಕ ರಾಘವ ಪಡೀಲ್, ಕುಂದಾಪುರ ವೃತ್ತ ನಿರೀಕ್ಷಕ ಮಂಜಪ್ಪ, ವಿವಿಧ ಠಾಣೆಯ ಠಾಣಾಧಿಕಾರಿಗಳು ಉಪಸ್ಥಿತರಿದ್ದರು.
ಅಂಬೇಡ್ಕರ್ ನಿಂದೆ: ಆರೋಪಿ ಬಂಧನಕ್ಕೆ ಆಗ್ರಹ
ಸಂವಿಧಾನಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ನಿಂದಿಸಿದ ವಿಕ್ರಂ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿ 7 ತಿಂಗಳು ಕಳೆದಿದೆ. ಇನ್ನೂ ಆರೋಪಿಯ ಬಂಧನವಾಗಿಲ್ಲ ಎಂದು ದಲಿತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿವೈಎಸ್ಪಿ, ವಿಕ್ರಂ ಹೆಸರಿರುವ 10 ಯುವಕರನ್ನು ಕರೆದು ವಿಚಾರಣೆ ನಡೆಸಿದ್ದೇವೆ. ಈ ಪ್ರಕರಣದ ಬಗ್ಗೆ ಕೂಲಂಕಷ ತನಿಖೆ ನಡೆಸುತ್ತಿದ್ದೇವೆ ಎಂದರು. ಇದರಿಂದ ಆಕ್ರೋಶಿತರಾದ ಮುಖಂಡರು, ಓರ್ವ ರಾಜಕೀಯ ವ್ಯಕ್ತಿಯನ್ನು ನಿಂದಿಸಿ ಬರೆದರೆ ಆರೋಪಿಯನ್ನು ಬೇಗ ಬಂಧಿಸುತ್ತೀರಿ, ಆದರೆ ದಲಿತರ ವಿಷಯದಲ್ಲಿ ಯಾಕೆ ಮೀನಾಮೇಷ ಎಂದು ಪ್ರಶ್ನಿಸಿದರು.
ಆರೋಪಿಗಳ ಬಂಧನಕ್ಕೆ ಸಿಪಿಎಂ ಒತ್ತಾಯ
ಮದುವೆ ನಿಶ್ಚಿತಾರ್ಥದ ಹಿನ್ನೆಲೆಯಲ್ಲಿ ಮಾಂಸದೂಟ ತಯಾರಿಸುತ್ತಿದ್ದ ತ್ರಾಸಿ ಮೊವಾಡಿಯ ಕೊರಗ ಕುಟುಂಬದ ಮೇಲೆ ಏಕಾಏಕಿ ದಾಂಧಲೆ ನಡೆಸಿದ ಭಜರಂಗದಳದ ಕಾರ್ಯಕರ್ತರನ್ನು ಕೂಡಲೇ ಬಂಧಿಸ ಬೇಕು ಎಂದು ಸಿಪಿಐ(ಎಂ) ಉಡುಪಿ ಜಿಲ್ಲಾ ಸಮಿತಿ ಆಗ್ರಹಿಸಿದೆ.
ಚುನಾವಣೆ ಹತ್ತಿರ ಬರುತ್ತಿದ್ದಂತೆ ಸಂಘ ಪರಿವಾರದ ಸಂಘಟನೆಗಳ ನೈತಿಕ ಪೊಲೀಸ್‌ಗಿರಿ ಹೆಚ್ಚುತ್ತಿದೆ. ಇದು ಆಕಸ್ಮಿಕವಾಗಿ ನಡೆದ ಘಟನೆಯಾಗಿರದೆ ಪೂರ್ವಯೋಜಿತ ಕೃತ್ಯ ಎಂದು ಸಿಪಿಎಂ ಬಣ್ಣಿಸಿದೆ. ಘಟನೆ ನಡೆದು 3 ದಿನ ಗಳಾದರೂ ಆರೋಪಿಗಳನ್ನು ಬಂಧಿಸದೇ ಇರುವುದು ಅಕ್ಷಮ್ಯಎಂದು ಅದು ಹೇಳಿದೆ.
ಕೊರಗರ ಮೇಲೆ ದಾಳಿ ನಡೆದ ಸುದ್ದಿ ತಿಳಿಯುತ್ತಲೇ ಸಿಪಿಎಂ ನಿಯೋಗವು ಸಂತ್ರಸ್ತರ ಮನೆಗೆ ಭೇಟಿ ನೀಡಿದೆ. ಅದಾಗಲೇ ಅಲ್ಲಿ ಸೇರಿದ್ದ ದಸಂಸ ಮತ್ತು ಕೋಮು ಸೌಹಾರ್ದ ವೇದಿಕೆಯ ಮುಖಂಡರೊಂದಿಗೆ ಸಂತ್ರಸ್ತರಿಗೆ ಧೈರ್ಯ ತುಂಬಿ ಸಾಂತ್ವನ ಹೇಳಿ ಗಂಗೊಳ್ಳಿ ಪೊಲೀಸ್ ಠಾಣೆಗೆ ಹೋಗಿ ಆೋಪಿಗಳನ್ನು ಬಂಧಿಸಲು ಒತ್ತಾಯಿಸಿದೆ.
ಆರೋಪಿಗಳನ್ನು ಕೂಡಲೇ ಬಂಧಿಸದಿದ್ದಲ್ಲಿ ಸ್ವತಂತ್ರವಾಗಿ ಮತ್ತು ಇತರ ಸಂಘಟನೆಗಳೊಂದಿಗೆ ಸೇರಿ ಹೋರಾಟವನ್ನು ಮುಂದುವರಿಸುವುದಾಗಿ ಸಿಪಿಎಂ ಎಚ್ಚರಿಸಿದೆ. ನಿಯೋಗದಲ್ಲಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಬೈಂದೂರು ವಲಯ ಸಮಿತಿ ಕಾರ್ಯದರ್ಶಿ ಸುರೇಶ ಕಲ್ಲಾಗರ, ಬೈಂದೂರು ವಲಯ ಸಮಿತಿ ಸಸ್ಯ ಸಂತೋಷ ಹೆಮ್ಮಾಡಿ ಇದ್ದರು.







