ಬಸವಣ್ಣ ಶ್ರೇಷ್ಠ ವಿಶ್ವಗುರುಗಳು: ಮುಗುಳಿ ನಾರಾಯಣ ರಾವ್
ಬಸವೇಶ್ವರ ಜಯಂತಿ ಆಚರಣೆ

ಬೆಳ್ತಂಗಡಿ,ಎ.29 : ಸಾಮಾಜಿಕ ಸಮಾನತೆಯನ್ನು ಸಾರಿದ ಶ್ರೇಷ್ಠ ಮಾನವತಾವಾದಿ ಬಸವಣ್ಣನವರಾಗಿದ್ದಾರೆ. ಸಕಲ ಸೌಕರ್ಯವನ್ನು ತ್ಯಜಿಸಿ ಮಾನವ ಕುಲದ ಉದ್ದಾರಕ್ಕಾಗಿ ಶ್ರಮಿಸಿದ ಬಸವಣ್ಣ ನಿಜವಾದ ಅರ್ಥದಲ್ಲಿ ಶ್ರೇಷ್ಠ ವಿಶ್ವ ಗುರುಗಳಾಗಿದ್ದಾರೆ ಎಂದು ಬೆಳ್ತಂಗಡಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಮುಗುಳಿ ನಾರಾಯಣ ರಾವ್ ಹೇಳಿದರು.
ಅವರು ಶನಿವಾರ ಬೆಳ್ತಂಗಡಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿತಾಲೂಕು ಆಡಳಿತದ ವತಿಯಿಂದ ನಡೆದ ಬಸವವೇಶ್ವರ ಜಯಂತಿ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ರಾಜ್ಯದಲ್ಲಿ ಶೇ. 50ರಷ್ಟು ವೀರಶೈವ ಸಮುದಾಯದವರು ಇದ್ದಾರೆ. ಸಿದ್ದರಾಮಯ್ಯ ಸರಕಾರ ಪ್ರಥಮ ಬಾರಿಗೆ ಬಸವೇಶ್ವರ ಜಯಂತಿಯನ್ನು ಸರಕಾರಿ ಕಾರ್ಯಕ್ರಮವಾಗಿ ಆಚರಣೆ ಮಾಡುತ್ತಿದೆ. ಬಸವಣ್ಣನವರ ತತ್ವ ಸಿದ್ದಾಂತವನ್ನು ಅರ್ಥಮಾಡಿಕೊಳ್ಳಬೇಕು ಎಂದರು.
ಮುಖ್ಯ ಉಪನ್ಯಾಸ ನೀಡಿದ ಉಜಿರೆ ಎಸ್‌ಡಿಎಂ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ ರಾಜಶೇಖರ ಹಳೆಮನೆ ಮಾತನಾಡಿ, ಬಸವಣ್ಣ ವೃತ್ತಿ ಸಮಾನತೆಯನ್ನು ಸಾರಿದವರು. ಭಕ್ತಿಯಿಂದ ಕೂಡಿದ ಸಮಾಜ ನಿರ್ಮಿಸಲು ಬದುಕನ್ನು ಮುಡಿಪಾಗಿಟ್ಟವರು. ಕಾಯಕ ತತ್ವ, ದಾಸೋಹ ತತ್ವ, ಅನುಭವ ಮಂಟಪ, ವೃತ್ತಿ ಸಮಾನತೆ ಈ ವಿಚಾರಗಳ ಮೂಲಕ ಸಮಾಜವನ್ನು ಬೆಳೆಸುವ ಪಣತೊಟ್ಟವರು. ಸಾರ್ವಕಾಲಿಕವಾದ ಅವರ ವಿಚಾರಗಳಿಗೆ ಅಂಟಿಕೊಂಡು ಬದುಕಿದಾಗ ಉನ್ನತ ಸಮಾಜ ನಿರ್ಮಾಣವಾಗಲು ಸಾಧ್ಯಎಂದರು.
ಸಭಾಧ್ಯಕ್ಷತೆಯನ್ನು ತಾಲೂಕು ಪಂಚಾಯಿತಿ ಅಧ್ಯಕ್ಷೆ ದಿವ್ಯಜ್ಯೋತಿ ವಹಿಸಿದ್ದರು. ವೇದಿಕೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಸಿ. ಆರ್. ನರೇಂದ್ರ, ಬೆಳ್ತಂಗಡಿ ನ್ಯಾಯಾಲಯದ ಶಿರಸ್ತೇದಾರ್ ರಾಧೇಶ್ಯಾಮ್, ಬೆಳ್ತಂಗಡಿ ವೀರಶೈವ ಲಿಂಗಾಯತ ಸಂಘದ ಅಧ್ಯಕ್ಷ ಶೇಖರ ಟಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಕ್ರೀಡೆಯಲ್ಲಿ ಉತ್ತಮ ಸಾಧನೆ ಮೆರೆದ ಪ್ರಿಯಾಂಕಳನ್ನು ಸನ್ಮಾನಿಸಲಾಯಿತು. ಅರವಿಂದ ಅವರು ಅನಿಸಿಕೆಯನ್ನು ವ್ಯಕ್ತಪಡಿಸಿದರು.
ನಾಡಗೀತೆಯೊಂದಿಗೆಕಾರ್ಯಕ್ರಮಆರಂಭಗೊಂಡಿತು. ತಹಸೀಲ್ದಾರ್ ತಿಪ್ಪೇಸ್ವಾಮಿ ಸ್ವಾಗತಿಸಿ, ಅಧ್ಯಾಪಕ ಕೊರಗಪ್ಪ ಟಿ ಧನ್ಯವಾದಗೈದರು. ಕಂದಾಯ ಇಲಾಖೆಯ ನಾರಾಯಣ ಗೌಡ ಮತ್ತು ತಾಪಂ ಸಂಯೋಜಕ ಜಯಾನಂದ ಲಾಲ ಕಾರ್ಯಕ್ರಮ ನಿರೂಪಿಸಿದರು.







