ತಲಾಖ್ ಕುರಿತು ಮಾತಾಡುವ ನೀವು ಗೋರಕ್ಷಕರಿಂದ ವಿಧವೆಯರಾದ ಮುಸ್ಲಿಮ್ ಮಹಿಳೆಯರ ಕುರಿತು ಮಾತಾಡುವಿರಾ?
ಪ್ರಧಾನಿ ಮೋದಿಗೆ ಆಝಂಖಾನ್ ಪ್ರಶ್ನೆ

ಲಕ್ನೊ, ಎ. 30: ತ್ರಿವಳಿ ತಲಾಖ್ ಹೊರತಾಗಿ ಮುಸ್ಲಿಮ್ ಮಹಿಳೆಯರು ಅನುಭವಿಸುತ್ತಿರುವ ಇತರ ಸಮಸ್ಯೆಗಳ ಕುರಿತು ನಿಮಗೆ ಮಾತಾಡಲು ಸಾಧ್ಯವೇ ಎಂದು ಪ್ರಧಾನಿ ನರೇಂದ್ರ ಮೋದಿಗೆ ಸಮಾಜವಾದಿ ಪಾರ್ಟಿ ಹಿರಿಯ ನಾಯಕ ಹಾಗೂ ಉತ್ತರಪ್ರದೇಶದ ಮಾಜಿ ಕ್ಯಾಬಿನೆಟ್ ಸಚಿವ ಆಝಂಖಾನ್ ಪ್ರಶ್ನಿಸಿದ್ದಾರೆ.
ತ್ರಿವಳಿ ತಲಾಖ್ ಗೆ ಪರಿಹಾರ ಕಂಡುಹಿಡಿಯಲು ಪ್ರಧಾನಿ ಮೋದಿ ಮುಸ್ಲಿಮ್ ಸಮುದಾಯಕ್ಕೆ ಆಗ್ರಹಿಸಿದ ಬೆನ್ನಿಗೆ ಆಝಂಖಾನ್‌ರಿಂದ ಈ ಪ್ರಶ್ನೆಬಂದಿದೆ. ಮುಸ್ಲಿಮರು ಮಹಿಳೆಯರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅದರ ಕುರಿತು ಪ್ರಧಾನಿ ಮಾತಾಡಲಿ ಎಂದು ಖಾನ್ ಮಾರ್ಮಿಕವಾಗಿ ಹೇಳಿದ್ದಾರೆ.
ಗೋರಕ್ಷಕರ ದಾಳಿಯಿಂದ ಮುಸ್ಲಿಮ್ ಮಹಿಳೆಯರ ಪತಿಯಂದಿರು ಮೃತಪಟ್ಟಿದ್ದಾರೆ. ಇದು ಅವರಿಗಾದ ಬಹುದೊಡ್ಡ ನಷ್ಟವಾಗಿದೆ. ಇದರ ವಿರುದ್ಧ ಮೋದಿ ಧ್ವನಿಯೆತ್ತಬೇಕು ಎಂದು ಆಝಂಖಾನ್ ಹೇಳಿದ್ದಾರೆ.
ಇದೇ ವೇಳೆ ಪ್ರಧಾನಿ ನರೇಂದ್ರಮೋದಿ ಈಗ ನೀಡುತ್ತಿರುವ ಹೇಳಿಕೆ ಕರ್ನಾಟಕದಲ್ಲಿ ನಡೆಯಲಿರುವ ಚುನಾವಣೆಯನ್ನು ಗಮನಿಸಿ ಪೂರ್ವಭಾವಿಯಾಗಿ ಹೊರಬಿದ್ದಿದೆ ಎಂದು ಕಾಂಗ್ರೆಸ್ ಪ್ರತಿಕ್ರಿಯಿಸಿದೆ.
ತ್ರಿವಳಿ ತಲಾಖ್ ಗೆ ಪರಿಹಾರ ಹುಡುಕಲು ಮುಸ್ಲಿಮ್ ಸಮುದಾಯ ಪ್ರಯತ್ನಿಸಬೇಕೆಂದು ಬಸವ ಜಯಂತಿಯಲ್ಲಿ ಪಾಲ್ಗೊಂಡು ಪ್ರಧಾನಿ ನರೇಂದ್ರ ಮೋದಿ ಮುಸ್ಲಿಮ್ ಸಮುದಾಯಕ್ಕೆ ಕರೆ ನೀಡಿದ್ದರು. ಈ ನಿರ್ಣಾಯಕ ಘಟ್ಟದಲ್ಲಿ ಮುಸ್ಲಿಮ್ ಸಮುದಾಯದೊಳಗಿನಿಂದಲೇ ಮಹಿಳೆಯರ ರಕ್ಷಕರು ಸೃಷ್ಟಿಯಾಗುತ್ತಾರೆ ಎಂಬುದು ನನ್ನ ವಿಶ್ವಾಸ ಎಂದು ಮೋದಿ ಹೇಳಿದ್ದರು.