ಬಾಹುಬಲಿಯ ಬಲ್ಲಾಳದೇವ ದಗ್ಗುಬಾಟಿ ಬಹಿರಂಗಪಡಿಸಿದ್ದಾರೆ ತನ್ನ ಅತಿ ದೊಡ್ಡ ರಹಸ್ಯವನ್ನು !
ನಂಬಲಸಾಧ್ಯ ಈ ಕಹಿಸತ್ಯ

ಇತ್ತೀಚಿಗೆ ತೆಲುಗು ಟಿವಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ರಾಣಾ ದಗ್ಗುಬಾಟಿ ತನ್ನದೇ ಸ್ವಂತ ಕಥೆಯನ್ನು ಹಂಚಿಕೊಳ್ಳುವ ಜೊತೆಗೆ ಜೀವನದಲ್ಲಿ ಭರವಸೆಯನ್ನೂ ಎಂದೂ ಕಳೆದುಕೊಳ್ಳದಂತೆ ಸಭಿಕರನ್ನು ಉತ್ತೇಜಿಸಿದ್ದಾರೆ.
ದೇಶದಲ್ಲಿಂದು ಎಲ್ಲೆಲ್ಲೂ ‘ಬಾಹುಬಲಿ 2’ ಚಿತ್ರದ್ದೇ ಮಾತುಗಳು. ನಿರ್ದೇಶಕ ಎಸ್.ಎಸ್.ರಾಜವೌಳಿ ಮತ್ತು ನಾಯಕ ನಟ ಪ್ರಭಾಸ್ ಮಾತ್ರವಲ್ಲ, ಬಲ್ಲಾಳದೇವ ಪಾತ್ರದಲ್ಲಿ ತನ್ನ ಅಭಿನಯಕ್ಕಾಗಿ ದಗ್ಗುಬಾಟಿ ಕೂಡ ಸಿನಿರಸಿಕರ ಅಪಾರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಈ ಪಾತ್ರಕ್ಕೆ ಜೀವಂತಿಕೆ ತುಂಬಲು ಅವರು ದೇಹಸೌಷ್ಟವದಲ್ಲಿ ಮಾಡಿಕೊಂಡಿದ್ದ ಪರಿವರ್ತನೆ, ವಿನಿಯೋಗಿಸಿದ ಸಮಯ ಮತ್ತು ಶ್ರಮದ ಬಗ್ಗೆ ಬಹಳಷ್ಟು ಹೊಗಳಿಕೆಯ ಮಾತುಗಳು ಕೇಳಿಬರುತ್ತಿವೆ.
ಆದರೆ ಅಪ್ರತಿಮ ಅಭಿನಯ ಪ್ರತಿಭೆಯ, ದೇಶಾದ್ಯಂತ ಕೋಟ್ಯಂತರ ಜನರ ಅಭಿಮಾನವನ್ನು ಗಳಿಸಿರುವ ಈ ನಟ ತನ್ನ ಬಲಗಣ್ಣಿನಿಂದ ನೋಡಲಾರರು ಎನ್ನುವ ಕಹಿಸತ್ಯ ಯಾರಿಗಾದರೂ ಗೊತ್ತೇ...? ಹೌದು,ಸ್ವತಃ ದಗ್ಗುಬಾಟಿ ಅವರೇ ತನ್ನ ಒಂದು ಕಣ್ಣು ಕುರುಡು ಎಂಬ ವಿಷಯವನ್ನು ಬಹಿರಂಗಗೊಳಿಸಿದ್ದಾರೆ. ಈ ಕಣ್ಣನ್ನು ಅವರು ತನ್ನ ಬಾಲ್ಯದಲ್ಲಿ ದಾನಿಯೋರ್ವರಿಂದ ಪಡೆದಿದ್ದರು.
ದಗ್ಗುಬಾಟಿ ತೆಲುಗು ಚಾಟ್ ಶೋದಲ್ಲಿ ತನ್ನ ಕಥೆಯನ್ನು ಹಂಚಿಕೊಂಡಿದ್ದಾರೆ. ಸೆಲೆಬ್ರಿಟಿಗಳು ಈ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡು ಜನರು ತಮ್ಮ ಜೀವನದ ಪ್ರಮುಖ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ನೆರವಾಗುತ್ತಾರೆ. ರಾಣಾ ಈ ಶೋದಲ್ಲಿ ಬಹಿರಂಗಗೊಳಿಸಿದ ಸತ್ಯ ಸಭಿಕರನ್ನು ಸ್ಥಂಭೀಭೂತಗೊಳಿಸಿತ್ತು.
‘‘ನಿಮಗೆ ಒಂದು ವಿಷಯವನ್ನು ನಾನು ಹೇಳಲೇಬೇಕು. ನನ್ನ ಬಲಗಣ್ಣು ಸಂಪೂರ್ಣ ಕುರುಡಾಗಿದೆ. ಎಡಗಣ್ಣಿನಿಂದ ಮಾತ್ರ ನಾನು ನೋಡಬಲ್ಲೆ. ನೀವು ನೋಡುತ್ತಿರುವ ಈ ಕಣ್ಣು ನನ್ನದಲ್ಲ.....ಅದು ಬೇರೆಯವರದು. ಅವರು ಮೃತಪಟ್ಟ ನಂತರ ಈ ಕಣ್ಣು ನನಗೆ ದಾನವಾಗಿ ದೊರಕಿತ್ತು. ನಾನು ಎಡಗಣ್ಣನ್ನು ಮುಚ್ಚಿದರೆ ನನಗೇನೂ ಕಾಣುವುದಿಲ್ಲ ’’ ಎಂದು ದಗ್ಗುಬಾಟಿ ನುಡಿದಾಗ ಆಘಾತಕ್ಕೊಳಗಾದ ಸಭಿಕರು ಮತ್ತು ಟಿವಿಯಲ್ಲಿ ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದರಿಗೆ ಈ ಕಹಿಸತ್ಯವನ್ನು ಅರಗಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ.
‘‘ಅಂಧಳಾಗಿರುವುದು ನೀನು ಅಥವಾ ನಿನ್ನ ಮಕ್ಕಳು ಬದುಕನ್ನು ಅನುಭವಿಸುವುದಕ್ಕೆ ತಡೆಯಾಗುವುದಿಲ್ಲ ಮತ್ತು ನೀನು ಹೆದರಿಕೊಳ್ಳಬೇಕಿಲ್ಲ ’’ ಎಂದು ಸ್ಪರ್ಧಿಯೋರ್ವಳಿಗೆ ಹಿತವಚನ ನುಡಿದ ದಗ್ಗುಬಾಟಿ, ಒಳ್ಳೆಯದಾಗಿ ಓದು. ನಾವೆಲ್ಲ ನಿನ್ನ ಬೆಂಬಲಕ್ಕಿದ್ದೇವೆ. ಧೈರ್ಯವನ್ನು ಕಳೆದುಕೊಳ್ಳಬೇಡ. ದುಃಖಗಳೆಲ್ಲ ಒಂದು ದಿನ ಕರಗಿ ಹೋಗುತ್ತವೆ, ಆದರೆ ಅದಕ್ಕೆ ನೀನು ಸಿದ್ಧಳಾಗಿರಬೇಕು ಮತ್ತು ಸದಾ ಸಂತಸದಿಂದಿರಬೇಕು, ನಿನ್ನ ಹತ್ತಿರದವರನ್ನು ಸಂತಸದಲ್ಲಿಡಬೇಕು ಎಂದು ಹೇಳಿದರು.
ತನ್ನ ಎಂಟು ವರ್ಷಗಳ ವೃತ್ತಿಜೀವನದಲ್ಲಿ ದಗ್ಗುಬಾಟಿ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ‘ಬಾಹುಬಲಿ 1’ ಚಿತ್ರ 2015ರಲ್ಲಿ ಬಿಡುಗಡೆಗೊಳ್ಳುವುದರೊಂದಿಗೆ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದರು. ಈಗ ‘ಬಾಹುಬಲಿ 2’ ಬಿಡುಗಡೆಯಾದ ಬಳಿಕ ಜನರ ಅಪಾರ ಪ್ರೀತಿಗೆ ಪಾತ್ರರಾಗಿದ್ದಾರೆ.







