ವರಿಷ್ಠರಿಗೆ ದೂರು ನೀಡಲು ಈಶ್ವರಪ್ಪ ಬಣ ತೀರ್ಮಾನ
ಬೆಂಗಳೂರು, ಎ. 30: ಮೇಲ್ಮನೆ ವಿಪಕ್ಷ ನಾಯಕ ಸ್ಥಾನದಿಂದ ಕೆ.ಎಸ್. ಈಶ್ವರಪ್ಪ ಅವರನ್ನು ಕೆಳಗಿಳಿಸಲು ಮುಂದಾಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ವಿರುದ್ಧ ತೊಡೆತಟ್ಟಿರುವ ಈಶ್ವರಪ್ಪ ಬಣ, ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರಿಗೆ ದೂರು ನೀಡಲು ನಿರ್ಧರಿಸಿದೆ.
ಆ ಹಿನ್ನೆಲೆಯಲ್ಲಿಯೇ ಸಮಸ್ಯೆ ಆಲಿಸಲು ಆಗಮಿಸಿದ್ದ ಮುರಳೀಧರ ರಾವ್ ಅವರನ್ನು ಭೇಟಿಯಾಗದೆ ಈಶ್ವರಪ್ಪ ಬಣದ ಮುಖಂಡರು ತಟಸ್ಥರಾಗಿ ಉಳಿದಿದ್ದಾರೆ. ಖಾಸಗಿ ಕಾರ್ಯಕ್ರಮ ನಿಮಿತ್ತ ತುಮಕೂರಿಗೆ ಆಗಮಿಸಿದ್ದ ಕೆ.ಎಸ್.ಈಶ್ವರಪ್ಪ ಬೆಂಗಳೂರಿಗೆ ಆಗಮಿಸದೆ ಶಿವಮೊಗ್ಗಕ್ಕೆ ವಾಪಸ್ಸಾಗಿದ್ದಾರೆ.
‘ನನ್ನನ್ನು ವಿಧಾನ ಪರಿಷತ್ತಿನ ವಿಪಕ್ಷದ ನಾಯಕ ಸ್ಥಾನದಿಂದ ಯಾವುದೇ ಸಂದರ್ಭದಲ್ಲಿಯೂ ತೆಗೆದು ಹಾಕಲು ಸಾಧ್ಯವಿಲ್ಲ. ಪಕ್ಷದ ಉಸ್ತುವಾರಿ ಮುರುಳೀಧರ ರಾವ್ ಅವರು ನನ್ನ ವಿರುದ್ದ ಕ್ರಮ ಕೈಗೊಳ್ಳುವ ಪ್ರಶ್ನೆಯೆ ಉದ್ಭವಿಸುವುದಿಲ್ಲ’ ಎಂದು ಮೇಲ್ಮನೆ ವಿಪಕ್ಷ ನಾಯಕ ಈಶ್ವರಪ್ಪ ಗುಡುಗಿದ್ದಾರೆ.
ರವಿವಾರ ತುಮಕೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ನಾವು ಆರಂಭದಿಂದಲೂ ಪಕ್ಷಕ್ಕೆ ದುಡಿದವರು. ಪಕ್ಷ ಸಂಘಟನೆ, ಶ್ರಮಿಸಿದ್ದು, ಎಂದಿಗೂ ನಮ್ಮ ಸ್ವಹಿತಾಸಕ್ತಿಗಾಗಿ ದುಡಿದಿಲ್ಲ. ಹೀಗಿರುವಾಗ ತಮ್ಮ ವಿರುದ್ಧ ಯಾವ ಕಾರಣಕ್ಕಾಗಿ ಕ್ರಮ ಕೈಗೊಳ್ಳುತ್ತಾರೆ ಎಂದು ಖಾರವಾಗಿ ಪ್ರಶ್ನಿಸಿದರು.
ನನ್ನ ವಿರುದ್ದ ಕ್ರಮ ಕೈಗೊಳ್ಳುತ್ತಾರೆ ಎನ್ನುವುದನ್ನು ಯಾರೋ ಹುಟ್ಟು ಹಾಕಿದ್ದಾರೆ. ಭಾನುಪ್ರಕಾಶ್ ವಿರುದ್ದ ಕ್ರಮ ಕೈಗೊಂಡಿರುವುದು ಮನಸ್ಸಿಗೆ ತುಂಬಾ ನೋವುಂಟು ಮಾಡಿದೆ ಎಂದ ಅವರು, ಸಂಘಟನೆ ಮಾಡುವಲ್ಲಿ ಈಶ್ವರಪ್ಪ ಏನೆಂದು ಎಲ್ಲರಿಗೂ ಗೊತ್ತಿದೆ. ತಾನು ಮೂರು ಬಾರಿ ರಾಜ್ಯಾಧ್ಯಕ್ಷನಾಗಿ ಪಕ್ಷದ ಏಳ್ಗೆಗಾಗಿ ದುಡಿದಿದ್ದೇನೆ ಎಂದರು.
ಮರುಳೀಧರ್ ರಾವ್ ಅವರು ರಾಜ್ಯಕ್ಕೆ ಬಂದು ಏನು ವರದಿ ಪಡೆಯುತ್ತಾರೆ. ನಾವೆಂದೂ ಪಕ್ಷಕ್ಕೆ ದ್ರೋಹ ಬಗೆಯುವ ಕೆಲಸ ಮಾಡಿಲ್ಲ. ನಮಗೆ ಪಕ್ಷದ ಹಿತ ಮುಖ್ಯವೆ ಹೊರತು ಯಾರೋ ಒಬ್ಬ ವ್ಯಕ್ತಿಯ ಹಿತ ಮುಖ್ಯವಲ್ಲ ಎಂದು ಪರೋಕ್ಷವಾಗಿ ಯಡಿಯೂರಪ್ಪ ವಿರುದ್ಧ ಈಶ್ವರಪ್ಪ ಕುಟುಕಿದರು.