ನಿವೃತ್ತ ಸೇನಾಧಿಕಾರಿ ಮನೆ ಮೇಲೆ ದಾಳಿ: ಕಾಡುಪ್ರಾಣಿಗಳ ಕಪಾಲ, ಚರ್ಮ, ಮಾಂಸ ಪತ್ತೆ
ಲಕ್ನೊ, ಎ.30: ಇಲ್ಲಿಯ ಸಿವಿಲ್ ಲೈನ್ ಪ್ರದೇಶದಲ್ಲಿರುವ ನಿವೃತ್ತ ಸೇನಾಧಿಕಾರಿ ದೇವೇಂದ್ರ ಕುಮಾರ್ ಎಂಬವರ ನಿವಾಸದ ಮೇಲೆ ಕಂದಾಯ ಮತ್ತು ಅರಣ್ಯ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಕಾಡುಪ್ರಾಣಿಗಳ ತಲೆ, ಚರ್ಮ, ಕೊಂಬು, ಮಾಂಸ, ಭಾರೀ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಕರೆನ್ಸಿ ನೋಟುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ವಶಪಡಿಸಿಕೊಂಡ ವಸ್ತುಗಳಲ್ಲಿ ಚಿರತೆಯ ತುಪ್ಪಟ, ನಾಲ್ಕು ಗಂಡು ಜಿಂಕೆಯ ತಲೆಗಳು , ಮೂರು ಜಿಂಕೆಯ ಕೊಂಬುಗಳು, ಎಂಟು ಜಿಂಕೆಯ ಕಪಾಲ, 7 ಹಲ್ಲುಗಳು , 117 ಕಿ.ಗ್ರಾಂ.ನಷ್ಟು ಕಚ್ಚಾ ಮಾಂಸ ಮತ್ತು ದಂತವರ್ಣದ ಹಿಡಿಕೆಯುಳ್ಳ ಚೂರಿ ಸೇರಿದೆ.
ಅರಣ್ಯ ಇಲಾಖೆಯ ಸಹಯೋಗದಲ್ಲಿ ನಡೆಸಲಾದ ಈ ದಾಳಿಯ ಸಂದರ್ಭ 99.98 ಲಕ್ಷ ರೂ. ನಗದು ಮತ್ತು ವಿವಿಧ ನಮೂನೆಯ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ವನ್ಯಜೀವಿ ಕಾಯ್ದೆಯಡಿ ಕುಮಾರ್ ಮತ್ತವರ ಪುತ್ರ ಪ್ರಶಾಂತ್ ವಿಷ್ಣೋವಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪ್ರಶಾಂತ್‌ನನ್ನು ಬಂಧಿಸಲು ತಂಡಗಳನ್ನು ರಚಿಸಲಾಗಿದೆ. ಕಳ್ಳಬೇಟೆಗಾರರ ಜೊತೆ ಇವರಿಗೆ ಇರಬಹುದಾದ ಸಂಪರ್ಕದ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಮುಖ್ಯ ಅರಣ್ಯ ಸಂರಕ್ಷಕ (ಪ.ವಲಯ) ಮುಕೇಶ್ ಕುಮಾರ್ ತಿಳಿಸಿದ್ದಾರೆ. ಕುಮಾರ್ ಮನೆಯ ಫ್ರೀಝರ್‌ನಲ್ಲಿಟ್ಟಿದ್ದ ಪ್ರಾಣಿಯ ಮಾಂಸವನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ಗಂಡು ಚಿಗರೆಯ ಮಾಂಸ ಇದಾಗಿರಬಹುದು ಎಂಬ ಶಂಕೆಯಿದೆ ಎಂದವರು ತಿಳಿಸಿದ್ದಾರೆ.
ಕುಮಾರ್ ಮತ್ತವರ ಪುತ್ರ ಪ್ರಶಾಂತ್ ಸೆಕ್ಯುರಿಟಿ ಏಜೆನ್ಸಿಯೊಂದನ್ನು ನಡೆಸುತ್ತಿದ್ದಾರೆ. ಪ್ರಶಾಂತ್ ರಾಷ್ಟ್ರೀಯ ಮಟ್ಟದ ‘ಸ್ಕೀಟ್ ಶೂಟಿಂಗ್’ (ಶೂಟಿಂಗ್ ಸ್ಪರ್ಧೆಯ ಒಂದು ವಿಧ) ಚಾಂಪಿಯನ್ ಆಗಿದ್ದು ಬೇಟೆಯಾಡುವ ಹವ್ಯಾಸ ಈತನಿಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.